ಜಮೀರ್-ಇಬ್ರಾಹಿಂ ವಿರುದ್ಧ ಕೈ ನಾಯಕರ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

Ibrahim

ಬೆಂಗಳೂರು,ಮೇ 8- ಒಂದೆಡೆ ಕಾಂಗ್ರೆಸ್‍ನಲ್ಲಿ ಒಗ್ಗಟ್ಟಿನ ಮಂತ್ರ ಕೇಳಿಬರುತ್ತಿದ್ದರೆ, ಮತ್ತೊಂದಡೆ ಕೆಳ ಹಂತದ ನಾಯಕರು ತಮ್ಮ ಅಸಮಾಧಾನ ಹೊರ ಹಾಕುವ ಮೂಲಕ ಅಪಸ್ವರಕ್ಕೆ ನಾಂದಿ ಹಾಡಿದ್ದಾರೆ.   ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಜೆಡಿಎಸ್‍ನ ಬಂಡಾಯ ಶಾಸಕ ಜಮೀರ್ ಅಹಮದ್ ಖಾನ್ ಘೋಷಣೆ ಮಾಡಿರುವುದಕ್ಕೆ ಕಾಂಗ್ರೆಸ್ ನಾಯಕ ಜಿ.ಎ.ಬಾವ ಅಪಸ್ವರ ತೆಗೆದಿದ್ದಾರೆ. ಜಮೀರ್ ಅಹಮದ್ ಖಾನ್ ಇನ್ನು ಕಾಂಗ್ರೆಸ್‍ನ ಪ್ರಾಥಮಿಕ ಸದಸ್ಯತ್ವವನ್ನೇ ಪಡೆದಿಲ್ಲ. ಆದರೂ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಿಸಿಕೊಳ್ಳುತ್ತಿದ್ದಾರೆ. ಅವರಿಗೆ ಈ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ.ಜಮೀರ್ ಅಹಮ್ಮದ್ ಖಾನ್ ಅವರು ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿರುವುದು ಮೂರ್ಖತನದ ಹೇಳಿಕೆ. ಅವರ ಮಟ್ಟಕ್ಕಿಳಿದು ನಾನು ಮಾತನಾಡಲಾರೆ. ಕಳೆದ ಬಾರಿ 50 ಸಾವಿರ ಮತಗಳನ್ನು ಪಡೆದಿದ್ದೆ. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನಾಯಕರು ಸೂಚಿಸಿದ್ದರು. ಅದನ್ನು ಪಾಲಿಸಿದ್ದೇನೆ. ಈಗಲೂ ಅವಕಾಶ ಸಿಗುವ ನಂಬಿಕೆ ಇದೆ ಎಂದರು.   ಮತ್ತೊಂದೆಡೆ ಕಾಂಗ್ರೆಸ್‍ನ ಎಚ್.ಎಂ.ರೇವಣ್ಣ , ಸಿ.ಎಂ.ಇಬ್ರಾಹಿಂ ವಿರುದ್ಧ ಕಿಡಿಕಾರಿದ್ದಾರೆ. ಯೋಜನಾ ಆಯೋಗದ ಉಪಾಧ್ಯಕ್ಷರಾಗಿರುವ ಇಬ್ರಾಹಿಂ ಬೇರೆ ಪಕ್ಷದತ್ತ ಮುಖ ಮಾಡಿರುವ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ರೇವಣ್ಣ , ಇಬ್ರಾಹಿಂ ಯಾವಾಗ ಯಾವ ಪಕ್ಷದಲ್ಲಿರುತ್ತಾರೆ ಎಂಬುದೇ ಗೊತ್ತಿಲ್ಲ. ಅವರನ್ನು ನಂಬಿದರೆ 4 ವೋಟುಗಳೂ ಬರುವುದಿಲ್ಲ ಎಂದು ಕಿಡಿಕಾರಿದ್ದಾರೆ.

ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ನಾಳೆ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ. ಕಾಂಗ್ರೆಸ್ ಹಿರಿಯ ನಾಯಕರಿಗೆ ಅವಕಾಶ ನೀಡಬೇಕು ಎಂಬುದು ನನ್ನ ಹಕ್ಕೋತ್ತಾಯವಾಗಿದೆ ಎಂದರು.   ಮುನಿಸಿಕೊಂಡಿರುವ ಮಾಜಿ ಸಂಸದ ವಿಶ್ವನಾಥ್ ಅವರ ಮನವೊಲಿಸುವ ಪ್ರಯತ್ನ ನಡೆದಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸಿ ಪಕ್ಷ ಸಂಘಟನೆ ಬಗ್ಗೆ ಎಲ್ಲ ನಾಯಕರೊಂದಿಗೆ ಚರ್ಚೆ ನಡೆಸುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಸಚಿವ ಸ್ಥಾನಕ್ಕಾಗಿ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಟಿಕೆಟ್‍ಗಾಗಿ ತಿಕ್ಕಾಟ ಆರಂಭವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin