ರಾಜ್ಯ ಮುಖಂಡರೊಂದಿಗೆ ಕೆಪಿಸಿಸಿ ಉಸ್ತುವಾರಿ ವೇಣುಗೋಪಾಲ್ ಸುದೀರ್ಘ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

kpcc
ಬೆಂಗಳೂರು, ಮೇ 8- ಮೂರು ದಿನಗಳ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಿರುವ ಕೆಪಿಸಿಸಿ ಉಸ್ತುವಾರಿ ನಾಯಕರ ತಂಡ ಇಂದು ಕಾಂಗ್ರೆಸ್ ಪದಾಧಿಕಾರಿಗಳ ಜತೆ ಇಡೀ ದಿನ ಪಕ್ಷ ಸಂಘಟನೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿತು. ಪಕ್ಷದ ಕಚೇರಿಗೆ ಆಗಮಿಸಿದ ಎಐಸಿಸಿ ಪ್ರಧಾನಕಾರ್ಯದರ್ಶಿ, ರಾಜ್ಯ ಉಸ್ತುವಾರಿ ವೇಣುಗೋಪಾಲ್, ಪಿ.ಪಿ.ವಿಷ್ಣನಾಗ್, ಮಧು, ಎಸ್ಟಿ.ಗೌಡ, ಮಾಣಿಂಠಾಗೂರ್ ತಂಡವನ್ನು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಆತ್ಮೀಯವಾಗಿ ಬರಮಾಡಿಕೊಂಡರು.  ಔಪಚಾರಿಕ ಮಾತುಕತೆ ನಂತರ ತಂಡ ಪಕ್ಷ ಸಂಘಟನೆ ಸಂಬಂಧ ವಿವಿಧ ಹಂತದ ನಾಯಕರ ಜತೆ ಗಂಭೀರ ಚರ್ಚೆ ಆರಂಭಿಸಿತು. ಬೆಳಗ್ಗೆ ಕೆಪಿಸಿಸಿಯ ಹಿರಿಯ ಉಪಾಧ್ಯಕ್ಷರಾದ ಬಿ.ಎಲ್.ಶಂಕರ್, ವಿ.ಆರ್.ಸುದರ್ಶನ್, ಬಿ.ಕೆ.ಚಂದ್ರಶೇಖರ್ ಅವರ ಜತೆ ಚರ್ಚಿಸಿತು.ಮಧ್ಯಾಹ್ನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜತೆ ಮುಂಚೂಣಿ ಘಟಕಗಳ ನಾಯಕರ ಜತೆ ಚರ್ಚೆ ನಡೆಸಿತು. ನಾಳೆ ಹಿರಿಯ ಕಾಂಗ್ರೆಸ್ ನಾಯಕರು, ಸಂಸದರು, ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರ ಜತೆ ಒಬ್ಬೊಬ್ಬರ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸುವ ಕಾರ್ಯಕ್ರಮಗಳಿದ್ದು, ಅನಂತರ ಸಂಜೆ ಸಮನ್ವಯ ಸಮಿತಿಯ ಜತೆ ಚರ್ಚೆ ನಡೆಸಲಿದೆ.  ಮೇ 10ರಂದು ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಅನಂತರ ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳ ಜತೆ ಪ್ರತ್ಯೇಕ ಸಮಾಲೋಚನೆ ನಡೆಸಲಿದೆ.

ಕಾಂಗ್ರೆಸನ್ನು ಬೂತ್ ಮಟ್ಟದಿಂದ ಬಲಗೊಳಿಸುವ ಪ್ರಮುಖ ಉದ್ದೇಶ ಇಟ್ಟುಕೊಂಡು ಚರ್ಚೆ ನಡೆಸಲಾಗುತ್ತಿದೆ. ಹೊಸದಾಗಿ ಪಕ್ಷ ಉಸ್ತುವಾರಿ ವಹಿಸಿಕೊಂಡಿರುವ ವೇಣುಗೋಪಾಲ್ ಅವರ ತಂಡ ರಾಜ್ಯದ ಹಿರಿಯ ನಾಯಕರ ಅನುಪಸ್ಥಿತಿಯಲ್ಲಿ ಕೆಳ ಹಂತದ ಕಾರ್ಯಕರ್ತರು ಹಾಗೂ ಮುಖಂಡರ ಜತೆ ಚರ್ಚೆ ನಡೆಸುವ ಮೂಲಕ ರಾಜ್ಯ ಕಾಂಗ್ರೆಸ್‍ನ ವಾಸ್ತವ ಸ್ಥಿತಿಗತಿ ತಿಳಿದುಕೊಳ್ಳುವ ಪ್ರಯತ್ನ ನಡೆಸಿದೆ.

ಗಮನ ಸೆಳೆದ ಸಿಎಂ ಅನುಪಸ್ಥಿತಿ:

 ಈ ಹಿಂದೆ ಉಸ್ತುವಾರಿ ನಾಯಕರಾಗಿದ್ದ ದಿಗ್ವಿಜಯ್‍ಸಿಂಗ್ ಕರ್ನಾಟಕಕ್ಕೆ ಭೇಟಿ ನೀಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಮಾರಕೃಪದಲ್ಲಿ ಮೊಟ್ಟ ಮೊದಲ ಭೇಟಿ ಮಾಡಿ ಅವರ ಜತೆ ಕುಷಲೋಪರಿ ವಿಚಾರಿಸುತ್ತಿದ್ದರು.  ಇಲ್ಲವೇ ತಮ್ಮ ಮನೆಗೆ ಕರೆಸಿಕೊಂಡು ಮಾತುಕತೆ ನಡೆಸುತ್ತಿದ್ದರು. ಹೊಸ ಉಸ್ತುವಾರಿ ವೇಣುಗೋಪಾಲ್ ಅವರು 3 ಜನ ಎಐಸಿಸಿ ಕಾರ್ಯದರ್ಶಿಗಳ ತಂಡದ ಜತೆ ಬೆಂಗಳೂರಿಗೆ ಆಗಮಿಸಿದ್ದರೂ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ.

ಸಿಎಂ ಅವರ ಅಧಿಕೃತ ನಿವಾಸ ಬಳಿಯೇ ಇರುವ ಕುಮಾರಕೃಪ ಅತಿಥಿಗೃಹದಲ್ಲಿ ವೇಣುಗೋಪಾಲ್ ತಂಡ ಉಳಿದುಕೊಂಡಿತ್ತು.  ಬೆಳಗ್ಗೆ ಖುದ್ದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್, ಸಚಿವ ರೋಷನ್‍ಬೇಗ್ ಭೇಟಿ ನೀಡಿ ಮಾತುಕತೆ ನಡೆಸಿದೆ. ನಂತರ ಸಚಿವರ ತಂಡ ಸಿದ್ದರಾಮಯ್ಯ  ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿತ್ತು.  ಸಚಿವರ ತಂಡ ಜತೆ ವೇಣುಗೋಪಾಲ್ ತಂಡವು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವ ಮಾಹಿತಿ ಇದ್ದರೂ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ರಾಜೀವ್‍ಗಾಂಧಿ ಎದೆರೋಗಗಳ ಆಸ್ಪತ್ರೆ ಆಡಳಿತ ಮಂಡಳಿ ಜತೆ ಸಭೆ ನಡೆಸಿ ನಂತರ ಮಂಡ್ಯಕ್ಕೆ ತೆರಳಿದರು.  ಈ ನಡುವೆ ವೇಣುಗೋಪಾಲ್ ತಂಡ ಹಾಗೂ ಸಿದ್ದರಾಮಯ್ಯ ಅವರ ಮುಖಾಮುಖಿ ಆಗಲೇ ಇಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin