ರೈತರ ಕೃಷಿ ಸಾಲ ಮನ್ನಾ ಮಾಡುವಂತೆ ಕೆ.ಎಸ್.ಪುಟ್ಟಣ್ಣಯ್ಯ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

KS-Puttannaiah
ಕೆ.ಆರ್.ಪೇಟೆ, ಮೇ 8- ರಾಜ್ಯದಲ್ಲಿ ಎದುರಾಗಿರುವ ತೀವ್ರ ಬರಗಾಲದಿಂದ ಸುಮಾರು 32ಸಾವಿರ ಕೋಟಿ ರೂ ಬೆಳೆ ನಷ್ಟ ಉಂಟಾಗಿದೆ ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಎಲ್ಲಾ ಕೃಷಿ ಸಾಲವನ್ನು ಮನ್ನಾ ಮಾಡಬೇಕೆಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಒತ್ತಾಯಿಸಿದ್ದಾರೆ.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಮಿ ಮತ್ತು ರೈತರ ಸಂಕಷ್ಟದ ಅರಿವಿಲ್ಲದವರು ಅಧಿಕಾರಕ್ಕೆ ಬರುತ್ತಿರುವುದರಿಂದ ರೈತರ ಸಮಸ್ಯೆಗಳು ಬಗೆ ಹರಿಯದೆ ಮತ್ತಷ್ಟು ಜಟಿಲವಾಗುತ್ತಿದೆ ಎಂದು ದೂರಿದರು.  ರಾಜ್ಯದಲ್ಲಿ ಹಿಂದೆಂದು ಕಂಡರಿಯದ ಭೀಕರ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ರೈತರ ಆಹಾರ ಬೆಳೆಗಳು ಭಿತ್ತನೆ ಸಾಧ್ಯವಾಗಿಲ್ಲ. ಅಡಿಕೆ, ತೆಂಗು, ಮಾವು, ವೀಳ್ಯದೆಲೆ, ಏಲಕ್ಕಿ ಮತ್ತಿತರರ ತೋಟದ ಬೆಳೆಗಳು ನೀರಿನಲ್ಲದೆ ಬುಡಸಮೇತ ನಾಶವಾಗುತ್ತಿವೆ ಇಂತಹ ಬರಗಾಲದಲ್ಲಿಯೂ ರೈತರ ನೆರವಿಗೆ ನಿಲ್ಲದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆಂದು ಖಂಡಿಸಿದರು.
ದೇಶದಲ್ಲಿ ಕೆಂಪು ದೀಪದ ಸಂಸ್ಕೃತಿಯನ್ನು ನಿಷೇಧಿಸಿದಂತೆ 5 ಸ್ಟಾರ್ ಹೋಟೆಲ್ ಸಂಸ್ಕೃತಿ ನಿಷೇಧಿಸಬೇಕು. ಸಮಾನ ಶಿಕ್ಷಣ ನೀತಿಯನ್ನು ಜಾರಿಗೊಳಿಸಿ ಶಿಕ್ಷಣ ಕ್ಷೇತ್ರದಲ್ಲಿ ಉಂಟಾಗಿರುವ ಹೊಸ ಅಸ್ಪಶ್ಯತೆಯನ್ನು ನಿವಾರಿಸಲು ಮುಂದಾಗಬೇಕು, ರೈತರ ಎಲ್ಲಾ ಬಗೆಯ ಸಾಲ ಮನ್ನಾ ಮಾಡಿ ಅವರನ್ನು ಋಣಮುಕ್ತರನ್ನಾಗಿಸಬೇಕು ಎಂದರು.  ರೈತರಿಗಾಗಿ ಕನಿಷ್ಠ ಆದಾಯ ಖಾತ್ರಿ ಯೋಜನೆಯನ್ನು ರೂಪಿಸಿ ರೈತ ಕುಲದ ರಕ್ಷಣೆಗೆ ಮುಂದಾಗಬೇಕೆಂದು ಒತ್ತಾಯಿಸಲು ಮೇ.16 ರಿಂದ ಬೆಂಗಳೂರಿನಲ್ಲಿ ನಿರಂತರವಾಗಿ 10 ದಿನಗಳ ಕಾಲ ರಾಜ್ಯ ರೈತಸಂಘದ ನೇತೃತ್ವದಲ್ಲಿ ನಿರಂತರ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದೆಂದು ಅವರು ತಿಳಿಸಿದರು.ನಮ್ಮ ಹಕ್ಕಿಗಾಗಿ ಹೋರಾಟ ಮಾಡುವ ಹೋರಾಟಗಾರರ ಮೇಲೆ ಸರಕಾರಗಳು ಕೇಸು ದಾಖಲಿಸಿ ಚಳುವಳಿ ಹತ್ತಿಕ್ಕುವ ಕೆಲಸ ಮಾಡುತ್ತಿವೆ ಇದು ಸರಿಯಲ್ಲ ಕೂಡಲೇ ಎಲ್ಲಾ ಬಗೆಯ ಜನಪರ ಹೋರಾಟಗಾರರ ಮೇಲೆ ಹಾಕಿರುವ ಕೇಸುಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.  ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ , ತಾಲೂಕು ರೈತಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ರೈತ ಮುಖಂಡರಾದ ಬೂಕನಕೆರೆ ನಾಗರಾಜು, ಜೆ.ಪೂರ್ಣಿಮಾಶಂಕರ್, ಜಿಲ್ಲಾ ರೈತ ಸಂಘದ ಗೌರವಾಧ್ಯಕ್ಷ ವಿಜಯಕುಮಾರ್, ರೈತ ಮುಖಂಡರಾದ ಎಸ್.ಕೃಷ್ಣಮೂರ್ತಿ, ವಿಜೇಂದ್ರ, ಜ್ಞಾನೇಶ್, ಕೃಷ್ಣಪ್ಪ, ನಾಗರಾಜು, ಹೆಚ್.ಎನ್.ಕೃಷ್ಣ, ಬೂಕನಕೆರೆ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin