ಸುಕ್ಮಾ ಅರಣ್ಯಗಳಲ್ಲಿನ ನಕ್ಸಲರನ್ನು ನುಂಗಲು ‘ಕೋಬ್ರಾ’ ಕಮಾಂಡೋಗಳು ರೆಡಿ..!

ಈ ಸುದ್ದಿಯನ್ನು ಶೇರ್ ಮಾಡಿ

Cobra-Commando--01

ರಾಯ್‍ಪುರ್, ಮೇ 9-ಭದ್ರತಾ ಪಡೆಗಳ ಮೇಲೆ ಹಠಾತ್ ದಾಳಿ ನಡೆಸಿ ಅಪಾರ ಸಾವು-ನೋವುಗಳಿಗೆ ಕಾರಣವಾಗುತ್ತಿರುವ ಛತ್ತೀಸ್‍ಗಢದ ಶಸ್ತ್ರಸಜ್ಜಿತ ಕ್ರೂರ ನಕ್ಸಲೀಯರನ್ನು ನಿಗ್ರಹಿಸಲು ಕೋಬ್ರಾ (ಕಮ್ಯಾಂಡೊ ಬೆಟಾಲಿಯನ್ ಫಾರ್ ರೆಸೊಲ್ಯೂಟ್ ಆಕ್ಷನ್) ಕಮಾಂಡೋಗಳು ಸಜ್ಜಾಗಿದ್ದಾರೆ. ಗೆರಿಲ್ಲಾ ನಿಗ್ರಹ ಸಮರದಲ್ಲಿ ವಿಶೇಷ ಪರಿಣಿತಿ ಪಡೆದಿರುವ 2,000ಕ್ಕೂ ಹೆಚ್ಚು ಕಮಾಂಡೋಗಳು ಅತಿ ಶೀಘ್ರದಲ್ಲೇ ನಕ್ಸಲ್ ಪ್ರಾಬಲ್ಯದ ಸುಕ್ಮಾ ಜಿಲ್ಲೆಯ ಗೊಂಡಾರಣ್ಯಕ್ಕೆ ನುಗ್ಗಿ ಮಾವೋವಾದಿಗಳನ್ನು ಮಟ್ಟ ಹಾಕಲಿದ್ದಾರೆ.  ಕೇಂದ್ರ ಸರ್ಕಾರದ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‍ಪಿಎಫ್) ಅಡಿ ರಚಿನೆಯಾಗಿರುವ ಕೋಬ್ರಾ ಕಮಾಂಡೊಗಳು ಅತಿ ಶೀಘ್ರದಲ್ಲೇ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೋಬ್ರಾದ ಒಂದು ಬೆಟಾಲಿಯನ್ 100 ಕಮ್ಯಾಂಡೊಗಳನ್ನು ಒಳಗೊಂಡಿರುತ್ತದೆ. ಇಂಥ 20 ರಿಂದ 25 ತುಕಡಿಗಳು ಸುಕ್ಮಾ ಜಿಲ್ಲೆಯ ಬಸ್ತಾರ್ ಪ್ರಾಂತ್ಯದ ನಕ್ಸಲ್ ಅಡಗುತಾಣಗಳ ಮೇಲೆ ದಾಳಿ ನಡೆಸಲಿವೆ. ಅಪಾಯಕಾರಿ ಮಾವೋವಾದಿಗಳನ್ನು ದಮನ ಮಾಡುವ ಜೊತೆಗೆ ಅವರ ಬಳಿ ಇರುವ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ನಾಶಪಡಿಸುವ ಅಥವಾ ವಶಪಡಿಸಿಕೊಳ್ಳುವ ಕಾರ್ಯಾಚರಣೆ ಇದಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.ಬಸ್ತಾರ್ ಪ್ರಾಂತ್ಯದ ಕಾಲಾಪತ್ಥರ್ ಪ್ರದೇಶದಲ್ಲಿ 400ಕ್ಕೂ ಹೆಚ್ಚು ಶಸ್ತ್ರಸಜ್ಜಿತ ನಕ್ಸಲರು ಏ.24ರಂದು ಹಠಾತ್ ದಾಳಿ ನಡೆಸಿ ಸಿಆರ್‍ಪಿಎಫ್‍ನ 25 ಯೋಧರನ್ನು ಕೊಂದು ಅನೇಕರನ್ನು ಗಾಯಗೊಳಿಸಿದ್ದರು. ಮಾರ್ಚ್ 11ರಂದು 12 ಭದ್ರತಾ ಸಿಬ್ಬಂದಿಯ ಮಾರಣಹೋಮ ನಡೆಸಿದ್ದರು. ಅಲ್ಲದೇ ಕಳೆದ 20 ವರ್ಷಗಳ ಅವಧಿಯಲ್ಲಿ 12,000ಕ್ಕೂ ಹೆಚ್ಚು ಜನರನ್ನು ಮಾವೋ ಬಂಡುಕೋರರು ಬಲಿ ತೆಗೆದುಕೊಂಡಿದ್ದಾರೆ.   ನಕ್ಸಲರ ಕ್ರೌರ್ಯವನ್ನು ಕೊನೆಗೊಳಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ನಕ್ಸಲರ ನಿರ್ಮೂಲನೆಗಾಗಿ ಈಗ ಕೋಬ್ರಾ ಕಮಾಂಡೋಗಳನ್ನು ನಿಯೋಜಿಸಿದೆ.

ಪ್ರಸ್ತುತ ಸುಕ್ಮಾ ಮತ್ತು ದಂತೇವಾಡ ಜಿಲ್ಲೆಗಳಲ್ಲಿ 44 ಕೋಬ್ರಾ ಬೆಟಾಲಿಯನ್‍ಗಳು ಕಾರ್ಯಾಚರಣೆ ನಡೆಸುತ್ತಿದ್ದು, ಅತಿ ಶೀಘ್ರದಲ್ಲೇ 100 ತುಕಡಿಗಳು ನಕ್ಸಲೀಯರನ್ನು ಬೇಟೆಯಾಡಲಿವೆ.
ಪಶ್ಚಿಮ ಬಂಗಾಳ, ಬಿಹಾರ, ತೆಲಂಗಾಣ ಮತ್ತು ಮಧ್ಯಪ್ರದೇಶದಲ್ಲಿರುವ ಕೋಬ್ರಾ ಕಮಾಂಡೊಗಳನ್ನು ಇದಕ್ಕಾಗಿ ಒಗ್ಗೂಡಿಸಿ ನಿರ್ಣಾಯಕ ದಾಳಿಗೆ ಕಾಲಗಣನೆ ಆರಂಭವಾಗಿದೆ.
ಪೂರ್ಣ ಬಲ ಮತ್ತು ಹೊಸ ಕಾರ್ಯತಂತ್ರಗಳಿಂದ ಶಸ್ತ್ರಸಜ್ಜಿತ ಕ್ರೂರ ನಕ್ಸಲೀಯರನ್ನು ಮಟ್ಟ ಹಾಕುವುದಾಗಿ ನಿನ್ನೆಯಷ್ಟೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದರು. ಎಲ್ಲ ನಕ್ಸಲ್‍ಪೀಡಿತ ರಾಜ್ಯಗಳು ಈ ಉದ್ದೇಶಕ್ಕಾಗಿ ಒಗ್ಗೂಡುವಂತೆಯೂ ಅವರು ಕರೆ ನೀಡಿದ್ದರು.

ಗೆರಿಲ್ಲಾಗಳ ದಾಳಿಗಳನ್ನು ಹತ್ತಿಕ್ಕಲು ಅಗತ್ಯವಾದ ಅನೇಕ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ನಕ್ಸಲರ ಹಣಕಾಸು ಮೂಲಗಳನ್ನು ಬಂದ್ ಮಾಡುವಂಥ ತಕ್ಷಣದ ಕ್ರಮಗಳನ್ನು ಅನುಸರಿಸಬೇಕಿದೆ ಎಂದು ಅವರು ತಿಳಿಸಿದ್ದರು.   ಮಾವೋವಾದಿಗಳ ಅಡಗುತಾಣಗಳನ್ನು ಪತ್ತೆ ಮಾಡಲು ಮಾನವರಹಿತ ವಿಮಾನಗಳ(ಯುಎವಿಗಳು) ಸೇವೆಗಳನ್ನು ಬಳಸಿಕೊಳ್ಳಲಾಗುವುದು ಎಂದು ರಾಜನಾಥ್ ಸಿಂಗ್ ವಿವರಿಸಿದ್ದರು.

ಛತ್ತೀಸ್‍ಗಢ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಮಹಾರಾಷ್ಟ್ರ , ತೆಲಂಗಾಣ, ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳು, ಗೃಹ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ನಿನ್ನೆ ನವದೆಹಲಿಯ ಸಭೆಯಲ್ಲಿ ಭಾಗವಹಿಸಿ ನಕ್ಸಲ್ ದಮನಕ್ಕೆ ಕೈಗೊಳ್ಳಬೇಕಾದ ನಿಗ್ರಹ ಕಾರ್ಯತಂತ್ರಗಳ ಕುರಿತು ಸಮಾಲೋಚನೆ ನಡೆಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin