ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದ ಶಾಸಕರಿಗೆ ಹೈಕಮಾಂಡ್ ಬ್ರೇಕ್

ಈ ಸುದ್ದಿಯನ್ನು ಶೇರ್ ಮಾಡಿ

hai-command

ಬೆಂಗಳೂರು,ಮೇ 10- ಜೆಡಿಎಸ್-ಬಿಜೆಪಿ ತೊರೆದು ಆಡಳಿತಾರೂಢ ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದ ಶಾಸಕರಿಗೆ ಹೈಕಮಾಂಡ್ ಬ್ರೇಕ್ ಹಾಕಿದೆ. ಈ ಬೆಳವಣಿಗೆ ಪಕ್ಷೇತರ ಶಾಸಕರನ್ನು ಗೊಂದಲದಲ್ಲಿ ಮುಳುಗಿಸಿದೆ.  ಈಗಾಗಲೇ ಕಾಂಗ್ರೆಸ್‍ನಲ್ಲಿ ಸಾಕಷ್ಟು ನಾಯಕರಿದ್ದು ಅನ್ಯ ಪಕ್ಷದಿಂದ ಬರುವವರನ್ನು ಅಳೆದುತೂಗಿ ಸೇರ್ಪಡೆ ಮಾಡಿಕೊಳ್ಳುವಂತೆ ಹೈಕಮಾಂಡ್ ಸೂಚನೆ ನೀಡಿದ್ದು, ಈ ಮೂಲಕ ಸಿದ್ದರಾಮಯ್ಯ ಅವರ ಪರಮಾಪ್ತ ನಾಯಕರು ಕಾಂಗ್ರೆಸ್ ಸೇರ್ಪಡೆ ಪ್ರಕ್ರಿಯೆಗೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ.  ಪಕ್ಷ ಸಂಘಟನೆ ಸಂಬಂಧ ಕಳೆದ ಎರಡು ದಿನಗಳಿಂದ ರಾಜ್ಯ ಕಾಂಗ್ರೆಸ್‍ನ ಪ್ರಮುಖ ನಾಯಕರು, ಶಾಸಕರು, ಸಚಿವರ ಜೊತೆ ಸುದೀರ್ಘ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಿರುವ ಎಐಸಿಸಿ ವೀಕ್ಷಕರ ತಂಡ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಗಂಭೀರ ಚರ್ಚೆ ನಡೆಸಿದೆ.ಕಳೆದ ಎರಡು ದಿನಗಳ ಅಭಿಪ್ರಾಯ ಸಂಗ್ರಹದಲ್ಲಿ ಬಹುತೇಕ ನಾಯಕರು ಅನ್ಯಪಕ್ಷದಿಂದ ವಲಸೆ ಬರುವವರಿಗೆ ಮಣೆ ಹಾಕದಂತೆ ಪ್ರತಿಪಾದಿಸಿದ್ದಾರೆ. ಇದನ್ನು ಆಧರಿಸಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ಕೆ.ಸಿ.ವೇಣುಗೋಪಾಲ್ ಮತ್ತವರ ತಂಡ ಕಾಂಗ್ರೆಸ್ ಸೇರಲಿಚ್ಛಿಸುವವರ ಪೂರ್ವಪರ ಪರಿಶೀಲಿಸುವಂತೆ ಮತ್ತು ಯಾವುದೇ ಭರವಸೆಗಳನ್ನು ನೀಡದಂತೆ ತಾಕೀತು ಮಾಡಿದೆ.  ರಾಜಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ ಆರೋಪಕ್ಕೆ ಗುರಿಯಾಗಿರುವ ಜೆಡಿಎಸ್ ಶಾಸಕರಾದ ಜಮೀರ್ ಅಹಮದ್, ಅಖಂಡ ಶ್ರೀನಿವಾಸ್‍ಮೂರ್ತಿ, ಇಕ್ಬಾಲ್ ಅನ್ಸಾರಿ, ಭೀಮಾನಾಯಕ್, ಚೆಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ ಅವರು ಸ್ವಪಕ್ಷದಿಂದ ಅಮಾನತ್ತಾಗಿ ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ.

ಇದರ ಜೊತೆಗೆ ಬಿಎಸ್‍ಆರ್ ಮತ್ತು ಕೆಜೆಪಿಯಿಂದ ಆಯ್ಕೆಯಾಗಿ ಬಂದು ಶ್ರೀರಾಮುಲು ಮತ್ತು ಯಡಿಯೂರಪ್ಪ ಬಿಜೆಪಿ ಸೇರಿದ ನಂತರ ಅವರನ್ನು ಅನುಸರಿಸದೆ ಅತಂತ್ರವಾಗಿ ಉಳಿದಿರುವ ಪಿ.ರಾಜೀವ್, ಬಿ.ಆರ್.ಪಾಟೀಲ್ ಸೇರಿದಂತೆ ಐದು ಮಂದಿ ಶಾಸಕರು ಕಾಂಗ್ರೆಸ್ ಸೇರಲು ಮುಂದಾಗಿದ್ದರು.  ದಿಗ್ವಿಜಯ್ ಸಿಂಗ್ ಅವರು ಕಾಂಗ್ರೆಸ್ ಉಸ್ತುವಾರಿಯಲ್ಲೇ ಮುಂದುವರೆದಿದ್ದರೆ ಇಷ್ಟೊತ್ತಿಗೆ ಬಹುತೇಕ ಹನ್ನೆರಡು ಮಂದಿ ಅನ್ಯಪಕ್ಷಗಳ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಹಸಿರು ನಿಶಾನೆ ದೊರೆತು ಪಕ್ಷಾಂತರಕ್ಕೆ ವೇದಿಕೆಗಳು ಸಜ್ಜುಗೊಳ್ಳುತ್ತಿದ್ದವು.  ಆದರೆ ಏಕಾಏಕಿ ಉಸ್ತುವಾರಿ ಬದಲಾವಣೆಯಾಗಿ ಕೆ.ಸಿ.ವೇಣುಗೋಪಾಲ್ ತಂಡ ರಾಜ್ಯಕ್ಕೆ ಬಂದಿದೆ. ಹೊಸ ತಂಡ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಲೆಕ್ಕಿಸದೆ ಸ್ವತಂತ್ರವಾಗಿ ಮುಖಂಡರ, ಪದಾಧಿಕಾರಿಗಳ, ಸಚಿವರ, ಶಾಸಕರ, ಸಂಸದರ ಅಭಿಪ್ರಾಯ ಸಂಗ್ರಹಿಸಿದೆ.

ಅನ್ಯ ಪಕ್ಷಗಳಿಂದ ಕಾಂಗ್ರೆಸ್ ಸೇರಲು ಮುಂದಾಗಿದ್ದ 12 ಮಂದಿಯಲ್ಲಿ ಬಹುತೇಕರು ಸಿಎಂ ಸಿದ್ದರಾಮಯ್ಯ ಅವರ ಪರಮಾಪ್ತ ಬಣದಲ್ಲಿ ಗುರುತಿಸಿಕೊಂಡವರು ಮತ್ತು ದೀರ್ಘಾವಧಿಯ ಗೆಳೆಯರಾಗಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಕೂಡ ಕಾಂಗ್ರೆಸ್‍ಗೆ ಸೇರಿಸಿಕೊಂಡು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು.  ಈಗ ಉಸ್ತುವಾರಿ ಬದಲಾದ ನಂತರ ರಾಜಕೀಯ ವಾತಾವರಣವು ಬದಲಾಗಿದೆ. ಈ ಹನ್ನೆರಡು ಮಂದಿಯ ವಿರುದ್ಧ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಜೊತೆಗೆ ಕಾಂಗ್ರೆಸ್‍ನ ಹಿರಿಯ ನಾಯಕರು ಕೂಡ ಅನ್ಯಪಕ್ಷಗಳ ಶಾಸಕರನ್ನು ಕರೆತರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕಾಂಗ್ರೆಸ್ ನಾಯಕರಿಂದ ತುಂಬಿ ತುಳುಕುತ್ತಿದೆ. ಅನ್ಯ ಪಕ್ಷಗಳಿಂದ ಬಂದವರು ಅಧಿಕಾರ ಸಿಗುವವರೆಗೆ ಇಲ್ಲಿರುತ್ತಾರೆ. ಅಧಿಕಾರದ ಅವಧಿ ಮುಗಿದ ನಂತರ ಅಥವಾ ಅಧಿಕಾರ ಸಿಗದೆ ಇದ್ದರೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳದೆ ತಟಸ್ಥವಾಗಿ ಉಳಿಯುತ್ತಾರೆ. ಹೀಗಾಗಿ ಪಕ್ಷ ಸಂಘಟನೆಯಲ್ಲಿ ನಿಷ್ಠಾವಂತರಾಗಿ ಗುರುತಿಸಿಕೊಂಡಿದ್ದ ಕಾರ್ಯಕರ್ತರಿಗೂ ಅನ್ಯಾಯವಾಗಲಿದೆ, ಪಕ್ಷಕ್ಕೂ ನಷ್ಟವಾಗಲಿದೆ.  ಬೇಷರತ್ತಾಗಿ ಸೇರುವವರನ್ನು ಮಾತ್ರ ಆಹ್ವಾನಿಸಿ, ಟಿಕೆಟ್ ಅಥವಾ ಇನ್ಯಾವುದೋ ಆಸೆಯಿಂದ ಬರುವವರೆಗೆ ಮಣೆ ಹಾಕಬೇಡಿ ಎಂದು ಬಹುತೇಕ ನಾಯಕರು ಎರಡು ದಿನಗಳ ಅಭಿಪ್ರಾಯ ಸಂಗ್ರಹದಲ್ಲಿ ವೇಣುಗೋಪಾಲ್ ತಂಡಕ್ಕೆ ಮನವಿ ಮಾಡಿದ್ದಾರೆ.  ಇದನ್ನು ಆಧರಿಸಿ ವೇಣುಗೋಪಾಲ್ ತಂಡ ಅನ್ಯ ಪಕ್ಷಗಳಿಂದ ಬರುವ ಶಾಸಕರ ಪಕ್ಷ ಸೇರ್ಪಡೆಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದು , ಪಕ್ಷದ ಹಿರಿಯ ನಾಯಕರ ಜೊತೆ ಚರ್ಚಿಸಿ ನಂತರ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ನಾಯಕರಿಗೆ ಸೂಚಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin