ರಾಜ್ಯಾದ್ಯಂತ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಐವರು ಕಳ್ಳರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

3-Arrested

ಬೆಂಗಳೂರು,ಮೇ 10-ದರೋಡೆ, ಸುಲಿಗೆ, ರಾಬರಿ ಸೇರಿದಂತೆ ಕೆಎಸ್‍ಆರ್‍ಟಿಸಿ ನಿರ್ವಾಹಕನ ಕರ್ತವ್ಯಕ್ಕೆ ಅಡ್ಡಿಪಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದ ಆರು ಮಂದಿ ದರೋಡೆಕೋರರನ್ನು ಜಯನಗರ ಪೊಲೀಸರು ಬಂಧಿಸಿ ಎರಡು ಕಾರು, ಮೂರು ಉಂಗುರ, ದ್ವಿಚಕ್ರ ವಾಹನ ಹಾಗೂ 20 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.  ಮಾಯಕೃಷ್ಣ(25), ಮಣಿಕಂಠ(24), ಮೂರ್ತಿ(30), ಕುರಲ್ ಅರಸನ್(23), ನಂಜುಂಡ(27), ಸತ್ಯವೇಲು(23) ಬಂಧಿತ ದರೋಡೆಕೋರರು.  ಏಪ್ರಿಲ್ 1ರಂದು ಬೆಳಗಿನ ಜಾವ 5.30ರಲ್ಲಿ ಬನಶಂಕರಿ ಬಸ್ ನಿಲ್ದಾಣದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಎಸ್‍ಆರ್‍ಟಿಸಿ ನಿರ್ವಾಹಕನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರು ಮಂದಿಯ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಗಂಭೀರ ಗಾಯಗೊಳಿಸಿ ಸಾರ್ವಜನಿಕರು ಬೆಚ್ಚಿಬೀಳುವಂತೆ ಮಾಡಿ ಇಟಿಯೋಸ್ ಕಾರಿನಲ್ಲಿ ಪರಾರಿಯಾಗಿ ತಲೆಮರೆಸಿಕೊಂಡಿತ್ತು.  ಈ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಲು ಬೆಂಗಳೂರು ದಕ್ಷಿಣ ಉಪವಿಭಾಗದ ಉಪಪೊಲೀಸ್ ಕಮೀಷನರ್ ಡಾ.ಎಸ್.ಡಿ.ಶರಣಪ್ಪ ಸಭೆ ನಡೆಸಿ ತಂಡ ರಚಿಸಿದ್ದರು.ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಕಾಂತರಾಜು ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ರಾಜೇಶ್ ನೇತೃತ್ವದಲ್ಲಿ ಸಬ್‍ಇನ್‍ಸ್ಪೆಕ್ಟರ್ ಈಶ್ವರಿ ಮತ್ತು ಸಿಬ್ಬಂದಿಯವರು ಕಾರ್ಯಾಚರಣೆ ಕೈಗೊಂಡು ಆರು ಮಂದಿಯನ್ನು ಬಂಧಿಸಿ ಕೂಲಂಕುಷವಾಗಿ ವಿಚಾರಣೆಗೊಳಪಡಿಸಿದ್ದರು.  ಆರೋಪಿ ಮೂರ್ತಿ ಎಂಬುವನು ಕೊಲೆಯಾದ ರೌಡಿ ಸ್ಟ್ಯಾಂಡ್ ಕುಟ್ಟಿಯ ಬಲಗೈ ಬಂಟನಾಗಿದ್ದು, ಈತನ ವಿರುದ್ದ ಬನಶಂಕರಿ ಪೊಲೀಸ್ ಠಾಣೆಯಲ್ಲಿ ರೌಡಿ ಪಟ್ಟಿ ತೆರೆದಿರುತ್ತದೆ. ಸ್ಟ್ಯಾಂಡ್ ಕುಟ್ಟಿಯನ್ನು ಕೊಲೆ ಮಾಡಿದ್ದ ರಾಜ ಎಂಬುವನು ಜೈಲಿನಿಂದ ಬಿಡುಗಡೆಯಾಗಿ ರೌಡಿ ಪಟ್ಟಿಯ ಮೂರ್ತಿ ಎಂಬುವನನ್ನು ಕೊಲೆ ಮಾಡಲು ಎರಡು ಬಾರಿ ಅಟ್ಯಾಕ್ ಮಾಡಿದ್ದನು. ಆ ಸಂದರ್ಭದಲ್ಲಿ ತಪ್ಪಿಸಿಕೊಂಡ ಮೂರ್ತಿ ರೌಡಿ ರಾಜನನ್ನು ಕೊಲೆ ಮಾಡುವುದಕ್ಕಾಗಿ 6 ಮಂದಿ ಆರೋಪಿಗಳ ಸಹಾಯ ಕೋರಿದ್ದು, ಮೂರ್ತಿ ಜೊತೆ ಸೇರಿ ಕೊಲೆ ಮಾಡುವುದಕ್ಕೆ ಒಪ್ಪಿಕೊಂಡರು.

ಈ ಆರೋಪಿಗಳು ಕೊಲೆ ಮಾಡಲು ಬೇಕಾದ ಕಾರು ಹಾಗೂ ಮಾರಕಾಸ್ತ್ರಗಳನ್ನು ಖರೀದಿಸಲು ಹಾಗೂ ಕೊಲೆ ಮಾಡಿದ ನಂತರ ತಪ್ಪಿಸಿಕೊಳ್ಳಲು ಖರ್ಚಿಗೆ ಹಣ ಸಂಪಾದಿಸುವುದಕ್ಕಾಗಿ ರಾಬರಿ, ದರೋಡೆ ಮಾಡಲು ತೀರ್ಮಾನಿಸಿದ್ದರು.  ಆರೋಪಿ ಮಾಯಕೃಷ್ಣನ ಬಳಿ ಇದ್ದ ಬಾಡಿಗೆ ಆಟೋರಿಕ್ಷಾಗಳಲ್ಲಿ ಕೊಡಿಗೇಹಳ್ಳಿ ಮತ್ತು ಜಾಲಹಳ್ಳಿ ಪೊಲೀಸ್  ಠಾಣಾ ಸರಹದ್ದಿಗೆ ಹೋಗಿ ಒಂಟಿಯಾಗಿ ಕಾರು ನಿಲ್ಲಿಸಿಕೊಂಡು ನಿಂತಿದ್ದ ಇಬ್ಬರು ಕಾರು ಚಾಲಕರಿಗೆ ಚಾಕುಗಳಿಂದ ಚುಚ್ಚಿ ಕೊಲೆ ಮಾಡುವುದಾಗಿ ಹೆದರಿಸಿ 02 ಇಟಿಯೋಸ್ ಕಾರುಗಳನ್ನು ದರೋಡೆ ಮಾಡಿಕೊಂಡು ಬಂದು ನಂಬರ್‍ಪ್ಲೇಟ್‍ಗಳನ್ನು ಬದಲಿಸಿದ್ದರು.

ಈ ಕಾರುಗಳನ್ನು ಉಪಯೋಗಿಸಿಕೊಂಡು ಮಾಗಡಿ, ಹಾಸನ, ಮಂಗಳೂರು, ಧರ್ಮಸ್ಥಳ ಮುಂತಾದ ಕಡೆಗಳಲ್ಲಿ ರಾತ್ರಿ ಸಮಯದಲ್ಲಿ ಒಂಟಿಯಾಗಿ ಬಸï ಗಾಗಿ ಕಾಯುತ್ತಿರುವ ಅಮಾಯಕ ಸಾರ್ವಜನಿಕರಿಗೆ ಡ್ರಾಪï ಕೊಡುವುದಾಗಿ ನಂಬಿಸಿ ಕಾರಿಗೆ ಹತ್ತಿಸಿಕೊಂಡು ಸ್ವಲ್ಪ ದೂರ ಕರೆದುಕೊಂಡು ಹೋಗಿ ಚಾಕು ತೋರಿಸಿ ಬೆದರಿಸಿದಲ್ಲದೆ ಚುಚ್ಚಿ, ಗಾಯಗೊಳಿಸಿ ಕೊಲೆ ಮಾಡುವುದಾಗಿ ಹೆದರಿಸಿ ಬಲವಂತವಾಗಿ ಸಾರ್ವಜನಿಕರ ಬಳಿ ಇದ್ದ ಮೊಬೈಲ್  ಮತ್ತು ಚಿನ್ನದ ವಡವೆಗಳು, ಹಣವನ್ನು ಕಿತ್ತುಕೊಂಡು ನಿರ್ಜನಪ್ರದೇಶಕ್ಕೆ ಕರೆದುಕೊಂಡು ಹೋಗಿ ವಾಹನದಿಂದ ಕೆಳಗೆ ದಬ್ಬಿ ಪರಾರಿಯಾಗುತ್ತಿದ್ದರು.

ಅಲ್ಲದೆ ಹೈವೆ ರಸ್ತೆಗಳಲ್ಲಿ ಲಾರಿಗಳನ್ನು ನಿಲ್ಲಿಸಿಕೊಂಡು ವಿಶ್ರಾಂತಿ ಪಡೆಯುತ್ತಿರುವ ಚಾಲಕರಿಗೆ ವಿಳಾಸ ಕೇಳುವ ನೆಪವೊಡ್ಡಿ ಬಾಗಿಲನ್ನು ತೆಗೆಸಿ ಮಾರಕಾಸ್ತ್ರಗಳಿಂದ ಇರಿದು, ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಹೆದರಿಸಿ ಬಲವಂತವಾಗಿ ಚಾಲಕರ ಬಳಿ ಇದ್ದ ಹಣ ಮತ್ತು ಚಿನ್ನದ ಒಡವೆಗಳು ಹಾಗೂ ಮೊಬೈಲ್  ಕಿತ್ತುಕೊಳ್ಳುತ್ತಿದ್ದದು ಆರೋಪಿಗಳ ತೀವ್ರ ವಿಚಾರಣೆಯಿಂದ ಬೆಳಕಿಗೆ ಬಂದಿದೆ.  ಈ ಆರೋಪಿಗಳನ್ನು ಬಂಧಿಸಿ ಮಾಲುಗಳನ್ನು ವಶಪಡಿಸಿಕೊಳ್ಳುವ ಮೂಲಕ ಕರ್ನಾಟಕದಾದ್ಯಂತ ದಾಖಲಾಗಿದ್ದ ರಾಬರಿ ಮತ್ತು ದರೋಡೆ ಪ್ರಕರಣಗಳನ್ನು ಬೇಧಿಸುವಲ್ಲಿ ದಕ್ಷಿಣ ವಿಭಾಗದ ಜಯನಗರ ಪೊಲೀಸರು ಯಶಸ್ವಿಯಾಗಿದ್ದು, ಇವರ ಕಾರ್ಯ ವೈಖರಿಯನ್ನು ನಗರ  ಆಯುಕ್ತರು ಶ್ಲಾಘಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin