ವಸತಿ ಯೋಜನೆಯಡಿ ಬೆಂಗಳೂರಿನಲ್ಲಿ ಒಂದು ಲಕ್ಷ ಮನೆ ನಿರ್ಮಾಣದ ಗುರಿ

ಈ ಸುದ್ದಿಯನ್ನು ಶೇರ್ ಮಾಡಿ

Dream-Home--01

ಬೆಂಗಳೂರು,ಮೇ 11- ಬಜೆಟ್‍ನಲ್ಲಿ ಘೋಷಿಸಿದಂತೆ ಮುಖ್ಯಮಂತ್ರಿ ಬೆಂಗಳೂರು ವಸತಿ ಯೋಜನೆಯಡಿ ನಗರ ಸುತ್ತಮುತ್ತ ಒಂದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಲು ವಸತಿ ಇಲಾಖೆ ಸಿದ್ಧತೆ ನಡೆಸಿದೆ.   ಜೊತೆಗೆ ಪ್ರಸಕ್ತ ಸಾಲಿನಲ್ಲಿ ಇಂದಿರಾ ಮನೆ ಮೊಬೈಲ್ ಆಪ್‍ನ್ನು ಜಾರಿಗೆ ತಂದಿದ್ದು , ಫಲಾನುಭವಿಯು ನಿರ್ಮಿಸುವ ಮನೆಯ ಪ್ರಗತಿಯನ್ನು ಜಿಪಿಎಸ್‍ಗೆ ಅಳವಡಿಸಿ ಸ್ವಯಂ ಪಾವತಿ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ.   ವಸತಿ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ತರಲು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು , ಆನ್‍ಲೈನ್ ಮೂಲಕ ಫಲಾನುಭವಿಗಳ ಆಯ್ಕೆಗೆ ಅನುಮೋದನೆ ನೀಡಲಾಗುತ್ತದೆ.ವಸತಿ ಯೋಜನೆಗಳನ್ನು ಜಿಪಿಎಸ್ ಮೂಲಕ ಪ್ರತಿ ವಾರಕ್ಕೊಮ್ಮೆ ಪ್ರಗತಿ ಪರಿಶೀಲಿಸಿ ಫಲಾನುಭವಿಗಳ ಖಾತೆಗೆ ಸಹಾಯಧನ ನೀಡಲಾಗುತ್ತದೆ. ಫಲಾನುಭವಿಗಳು ಮತ್ತು ಅನುಷ್ಠಾನ ಅಧಿಕಾರಿಗಳಿಗೆ ಸಹಾಯಧನ ಬಿಡುಗಡೆಯ ಮಾಹಿತಿ ಮೊಬೈಲ್ ಎಸ್‍ಎಂಎಸ್ ಮೂಲಕ ಒದಗಿಸಲಾಗುತ್ತದೆ. ಕಳೆದ 2013-14ನೇ ಸಾಲಿಗೆ ಕೇಂದ್ರ ಸರ್ಕಾರದಿಂದ ಜಿಪಿಎಸ್ ತಂತ್ರಜ್ಞಾನ ಅಳವಡಿಕೆ ಮತ್ತು ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಮಾಡಿದ್ದಕ್ಕಾಗಿ ಚಿನ್ನದ ಪ್ರಶಸ್ತಿ ದೊರತಿದೆಯಲ್ಲದೆ, ಹುಡ್ಕೊ ಸಂಸ್ಥೆಯಿಂದ ವಸತಿ ಯೋಜನೆಗಳ ಅನುಷ್ಠಾನಕ್ಕೆ ಅತ್ಯುತ್ತಮ ಸಾಧನೆ ಪುರಸ್ಕಾರವು ಸಂದಿದೆ. ರಾಜೀವ್ ಗಾಂಧಿ ವಸತಿ ನಿಗಮವು ಗ್ರಾಮೀಣ ನಿವೇಶನ ಯೋಜನೆಯನ್ನು ಮಾರ್ಪಡಿಸಿದ್ದು, ಇಂದಿರಾ ಗ್ರಾಮೀಣ ವಸತಿ ನಿವೇಶನಗಳ ಯೋಜನೆ ಎಂಬ ಹೊಸ ಹೆಸರಿನಲ್ಲಿ ಜಾರಿಗೊಳಿಸಲಿದೆ.

ಈ ಯೋಜನೆಯಡಿ ಅಭಿವೃದ್ದಿಪಡಿಸಿದ ನಿವೇಶನಗಳನ್ನು ಹಂಚಿಕೆ ಮಾಡುವಾಗ ಜಮೀನಿನ ಮಾಲೀಕರಿಗೆ 60:40 ಅನುಪಾತದಲ್ಲಿ ನೀಡಲು ಉದ್ದೇಶಿಸಲಾಗಿದೆ.   ಈ ವರ್ಷ ನಾಲ್ಕು ಲಕ್ಷ ಮನೆಗಳನ್ನು ಹಾಗೂ 10 ಸಾವಿರ ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ.   ಪ್ರಸಕ್ತ ಸಾಲಿನಲ್ಲಿ ನಿವೇಶನ ಹೊಂದಿರುವ ಎಲ್ಲ ಅರ್ಹ ಪರಿಶಿಷ್ಟ ಜಾತಿ ಮತ್ತು ಪಂಗಡದ ಪಲಾನುಭವಿಗಳಿಗೆ ಬೇಡಿಕೆ ಆಧಾರದ ಮೇಲೆ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ವಸತಿ ಸೌಕರ್ಯವನ್ನು ಕಲ್ಪಿಸಲು ಸಿದ್ಧತೆ ನಡೆಸಿದೆ.

ರಾಜ್ಯ ಸರ್ಕಾರವು 2017 -18ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಯಡಿ ರಾಜ್ಯದಲ್ಲಿ 7 ಲಕ್ಷ ಮನೆ ನಿರ್ಮಿಸುವ ಗುರಿ ಹೊಂದಿದ್ದು , ಪ್ರಸಕ್ತ ಬಜೆಟ್‍ನಲ್ಲಿ 4233.99 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ.   ಕಳೆದ ನಾಲ್ಕು ವರ್ಷಗಳಲ್ಲಿ ಮಾರ್ಚ್ ಅಂತ್ಯಕ್ಕೆ 11 ಲಕ್ಷ ಮನೆ ಹಾಗೂ 45,457 ನಿವೇಶನಗಳನ್ನು ಹಂಚಿಕೆ ಮಾಡಿದ್ದು , 11193.12 ಕೋಟಿ ರೂ.ಗಳ ಅನದಾನವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಬಿಡುಗಡೆ ಮಾಡಿದೆ.   ವಿವಿಧ ವಸತಿ ಯೋಜನೆಗಳಡಿ ಸರ್ಕಾರದಿಂದ ನೀಡಲಾಗಿದ್ದ ಸಾಲ ಮತ್ತು ಬಡ್ಡಿ 2488 ಕೋಟಿ ರೂ.ಗಳನ್ನು ಮನ್ನಾ ಕೂಡ ಮಾಡಿದೆ. ಇದರಿಂದ ರಾಜ್ಯದಲ್ಲಿ ಸುಮಾರು 10.84 ಲಕ್ಷ ಫಲಾನುಭವಿಗಳಿಗೆ ಲಾಭ ದೊರಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin