ಹೈಕಮಾಂಡ್ ಕೈಸೇರಿದ ರಾಜ್ಯದ ಮುಂದಿನ ಕಾಂಗ್ರೆಸ್ ಭವಿಷ್ಯದ ವರದಿ

ಈ ಸುದ್ದಿಯನ್ನು ಶೇರ್ ಮಾಡಿ

sonia-Gandhi

ಬೆಂಗಳೂರು, ಮೇ 11- ಮುಂಬರುವ 2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎಂಬ ಪ್ರತಿಜ್ಞೆ ಮಾಡಿರುವ ಕಾಂಗ್ರೆಸ್, ಸಂಘಟನೆ ಚುಟವಟಿಕೆಗಳಲ್ಲಿ ಸಮಗ್ರ ಬದಲಾವಣೆ ಮಾಡಲು ಮುಂದಾಗಿದೆ.  ಕಳೆದ ಮೂರು ದಿನಗಳಿಂದ ರಾಜ್ಯ ಕಾಂಗ್ರೆಸ್‍ನ ಸುಮಾರು 43 ಪ್ರಮುಖ ನಾಯಕರ ಜತೆ ಸುದೀರ್ಘ ಸಮಾಲೋಚನೆ ನಡೆಸಿರುವ ಉಸ್ತುವಾರಿ ವೇಣುಗೋಪಾಲ್ ನೇತೃತ್ವದ ತಂಡ ಎರಡು ದಿನಗಳಲ್ಲಿ ಎಐಸಿಸಿಗೆ ವರದಿ ಸಲ್ಲಿಸಲಿದೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಂಬಂಧ ಪ್ರಮುಖರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಡಾ.ಜಿ.ಪರಮೇಶ್ವರ್ ಅವರನ್ನು ಮುಂದುವರಿಸಬೇಕೆ ಅಥವಾ ಬೇರೆಯವರಿಗೆ ಜವಾಬ್ದಾರಿ ವಹಿಸಬೇಕೆ ಎಂಬ ಬಗ್ಗೆ ಉಸ್ತುವಾರಿ ತಂಡದ ವರದಿ ಆಧರಿಸಿ ಹೈಕಮಾಂಡ್ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ.

ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯದ ಕೊರತೆಯನ್ನು ಬಹುತೇಕ ಪದಾಧಿಕಾರಿಗಳು ಉಸ್ತುವಾರಿ ನಾಯಕರ ಮುಂದೆ ಚರ್ಚಿಸಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣಿಸಿರುವ ವೇಣುಗೋಪಾಲ್ ತಂಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಜತೆ ಮಾತುಕತೆ ನಡೆಸಿದ ರಾಜ್ಯ ಸರ್ಕಾರ ನಾಲ್ಕು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನಾಲ್ಕನೆ ವರ್ಷದ ವಾರ್ಷಿಕೋತ್ಸವದ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಇದು ನಂತರ ದೆಹಲಿಗೆ ಬರುವಂತೆ ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್ ಅವರಿಗೆ ಆಹ್ವಾನ ನೀಡಲಾಗಿದೆ.  ಮುಂದಿನ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹೊಸ ಮಾಸ್ಟರ್ ಪ್ಲಾನ್ ಬಗ್ಗೆ ಚರ್ಚೆಯಾಗಿದ್ದು, ಇಡೀ ಉಸ್ತುವಾರಿ ತಂಡ ಮುಂದಿನ ತಿಂಗಳು ಮತ್ತೆ ರಾಜ್ಯಕ್ಕೆ ಭೇಟಿ ನೀಡಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮತ್ತೊಂದು ಸುತ್ತಿನ ಸಭೆ ನಡೆಸಲಿದೆ.ಆ ಸಂದರ್ಭದಲ್ಲಿ ಪ್ರತಿ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಜಿಲ್ಲಾ ಸಮಿತಿಯ ಪದಾಧಿಕಾರಿಗಳ ಜತೆ ಪ್ರತ್ಯೇಕ ಚರ್ಚೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.  ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿಗಳಿಗೆ ಮತ್ತು ಪಕ್ಷ ನಿಷ್ಠರಿಗೆ ಅವಕಾಶ ನೀಡುವ ಮುನ್ಸೂಚನೆಯನ್ನು ವೇಣುಗೋಪಾಲ್ ನೀಡಿದ್ದು, ಈ ಸಲುವಾಗಿ ಖುದ್ದಾಗಿ ಅಭಿಪ್ರಾಯ ಸಂಗ್ರಹಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.  ಈ ಹಿಂದೆ ಯಾವ ಉಸ್ತುವಾರಿ ನಾಯಕರು ಸಹ ವೇಣುಗೋಪಾಲ್ ಅವರ ತಂಡದಂತೆ ಪದಾಧಿಕಾರಿಗಳು ಮತ್ತು ಪ್ರಮುಖ ನಾಯಕರನ್ನು ಭೇಟಿ ಮಾಡಿ ಚರ್ಚೆ ಮಾಡಿರಲಿಲ್ಲ.   ದಿಗ್ವಿಜಯ್‍ಸಿಂಗ್ ಅವರು ರಾಜ್ಯಕ್ಕೆ ಭೇಟಿ ನೀಡಿದರೆ ಆಯ್ದ ಮುಖಂಡರೊಂದಿಗೆ ಭೇಟಿ ಮಾಡಿ ತೆರಳುತ್ತಿದ್ದರು. ಹೀಗಾಗಿ ಸಾಮಾನ್ಯ ಕಾರ್ಯಕರ್ತರ ಅಭಿಪ್ರಾಯಗಳು ಹೈಕಮಾಂಡ್‍ಗೆ ತಲುಪುತ್ತಿರಲಿಲ್ಲ. ವಿಭಿನ್ನ ದಾರಿ ಅನುಸರಿಸುತ್ತಿರುವ ವೇಣುಗೋಪಾಲ್ ತಂಡ ಎಲ್ಲರ ಜತೆ ಚರ್ಚೆ ಮಾಡುವ ಮೂಲಕ ಬೆರಗು ಮೂಡಿಸಿದೆ.

ಕಾಂಗ್ರೆಸ್‍ನಲ್ಲಿ ಹೊಸ ಉತ್ಸಾಹ ಮೂಡಿದ್ದು, ನಮ್ಮ ಅಭಿಪ್ರಾಯಗಳಿಗೂ ಬೆಲೆ ಇದೆ ಎಂಬ ಆಶಾಭಾನೆ ಚಿಗುರಿದೆ. ಮುಂದಿನ ತಿಂಗಳು ವಿಧಾನಸಭೆ ಚುನಾವಣೆಯ ಟಿಕೆಟ್ ಹಂಚಿಕೆ ಸಂಬಂಧ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸುವ ಮುನ್ಸೂಚನೆ ನೀಡಿರುವುದು ಇನ್ನಷ್ಟು ಭರವಸೆ ಹುಟ್ಟುಹಾಕಿದೆ.  ರಾಜ್ಯ ನಾಯಕರ ಅಥವಾ ರಾಷ್ಟ್ರ ನಾಯಕರ ಕೃಪಾಶೀರ್ವಾದದಿಂದ ಟಿಕೆಟ್ ಪಡೆದು ಬರುತ್ತಿದ್ದ ನಾಯಕರಿಗೆ ವೇಣುಗೋಪಾಲ್ ಅವರ ತಂಡದ ನಿಲುವು ಬಿಸಿ ತುಪ್ಪವಾಗಿದೆ.  ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರ ಜತೆ ಅವಿನಾಭಾವ ಸಂಬಂಧವಿಟ್ಟುಕೊಳ್ಳದ ಮತ್ತು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳದ ನಾಯಕರಿಗೆ ಟಿಕೆಟ್ ನೀಡಲು ಶಿಫಾರಸು ಮಾಡಬೇಡಿ ಎಂದು ವೇಣುಗೋಪಾಲ್ ತಂಡ ಸ್ಪಷ್ಟ ಸೂಚನೆ ನೀಡಿದೆ.

 

ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಕೂಡ ಕಾರ್ಯಕಾರಿ ಸಮಿತಿ ಸಭೆ ನಡೆಸಿ ವೇಣುಗೋಪಾಲ್ ತಂಡದ ಸಂದೇಶವನ್ನು ನಾಯಕರಿಗೆ ತಲುಪಿಸಲಿದೆ ಎಂದು ಹೇಳಲಾಗುತ್ತಿದೆ.   ಕಳೆದ ಮೂರು ದಿನಗಳಿಂದ ನಿರಂತರವಾಗಿ 431 ಮಂದಿ ಜತೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿ ತಂಡ ವಾಪಸಾಗಿದೆ.
ಮೇ 22 ರಿಂದ 25ರ ನಡುವೆ ಹೈಕಮಾಂಡ್‍ಗೆ ವರದಿ ಸಲ್ಲಿಕೆಯಾಗಲಿದ್ದು, ಅನಂತರ ರಾಜ್ಯ ಕಾಂಗ್ರೆಸ್‍ನಲ್ಲಿ ಮಹತ್ವದ ಬದಲಾವಣೆಗಳಾಗುವ ನಿರೀಕ್ಷೆ ಇದೆ.
ಬಿಜೆಪಿಯ ಮಿಷನ್ 150 ಕಾರ್ಯಾಚರಣೆಗೆ ಸಡ್ಡು ಹೊಡೆದು ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯಲು ರಣನೀತಿ ರೂಪಿಸುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin