32 ಲಕ್ಷ ನಕಲಿ ನೋಟು ನೀಡಿ 1 ಕೆಜಿ ಚಿನ್ನ ಖರೀದಿಸಿದ್ದ ಮೂವರು ವಂಚಕರು ಖಾಕಿ ಬಲೆಗೆ

ಈ ಸುದ್ದಿಯನ್ನು ಶೇರ್ ಮಾಡಿ

3-Arrested-Crime-01

ಬೆಂಗಳೂರು, ಮೇ 11- ಬರೋಬ್ಬರಿ 32 ಲಕ್ಷ ರೂ. ನಕಲಿ ನೋಟುಗಳನ್ನು ಕೊಟ್ಟು ಒಂದು ಕೆಜಿ ಚಿನ್ನ ಲಪಟಾಯಿಸಿ ಚಿನ್ನದ ವ್ಯಾಪಾರಿಯನ್ನು ಬೆಚ್ಚಿಬೀಳಿಸಿದ್ದ ಮೂವರು ವಂಚಕರನ್ನು ಹಿಡಿಯುವಲ್ಲಿ ಹಲಸೂರು ಗೇಟ್ ಪೊಲೀಸರು ಯಶಸ್ವಿಯಾಗಿದ್ದಾರೆ.  ಮೈಸೂರಿನ ಕೂಟಗಲ್ ಇಂಡಸ್ಟ್ರಿಯಲ್ ಏರಿಯಾದ ವಿನೋದ್ (45), ದಟ್ಟಗಳ್ಳಿ ನಿವಾಸಿ ಹೇಮಂತ್ (33), ನಿವೇದಿತ ಲೇಔಟ್‍ನ ಹರೀಶ್‍ಕುಮಾರ್ (31) ಬಂಧಿತ ವಂಚಕರು. ಚಿನ್ನದ ವ್ಯಾಪಾರಿಯಿಂದ ಪಡೆದಿದ್ದ 1 ಕೆಜಿ ತೂಕದ ಚಿನ್ನದ ಗಟ್ಟಿ, ನಕಲಿ ನೋಟುಗಳನ್ನು ತಯಾರು ಮಾಡುವ ಕಲರ್ ಪ್ರಿಂಟರ್, ಕಂಪ್ಯೂಟರ್ ಮತ್ತು ಸ್ಕ್ಯಾನಿಂಗ್ ಮೆಷಿನ್‍ಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.


ಹಲಸೂರು ವ್ಯಾಪ್ತಿಯಲ್ಲಿ ಚಿನ್ನದ ಅಂಗಡಿ ಇಟ್ಟುಕೊಂಡಿರುವ ದಿನೇಶ್‍ಕುಮಾರ್ ಎಂಬುವರಿಗೆ ಏ.24ರಂದು ಜುಗರಾಜ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ ನಾನು ಚಿಕ್ಕಮಗಳೂರಿನಿಂದ ಮಾತನಾಡುತ್ತಿದ್ದು, ನನ್ನ ಮಗಳ ಮದುವೆ ನಿಮಿತ್ತ ನನಗೆ ಒಂದು ಕೆಜಿ ಚಿನ್ನ ಬೇಕಾಗಿದೆ ಎಂದು ಹೇಳಿ ವ್ಯವಹಾರಿಕವಾಗಿ ಮಾತನಾಡಿದ್ದನು.   ತದನಂತರ ಅದೇ ವ್ಯಕ್ತಿ ಮತ್ತೆ ಕರೆ ಮಾಡಿ ನಾನು ಮದುವೆ ಕೆಲಸದಲ್ಲಿ ನಿರತನಾಗಿರುವುದರಿಂದ ನಾನು ಬರಲು ಸಾಧ್ಯವಾಗುವುದಿಲ್ಲ. ನನ್ನ ಮ್ಯಾನೇಜರ್‍ಗೆ ಹಣ ಕೊಟ್ಟು ಕಳುಹಿಸುತ್ತೇನೆ. ನೀವು ಅವನಿಗೆ ಚಿನ್ನ ಕೊಟ್ಟು ಹಣ ಪಡೆಯಿರಿ ಎಂದು ಹೇಳಿದ್ದಾನೆ. ಅಂದು ರಾತ್ರಿ 9 ಗಂಟೆಗೆ ಮತ್ತೆ ಅದೇ ವ್ಯಕ್ತಿ ಕರೆ ಮಾಡಿ ನನ್ನ ಮ್ಯಾನೇಜರ್ ಶಿಕ್ಷಕರ ಸದನದ ಬಳಿ ಕಾರಿನಲ್ಲಿ ಬಂದಿದ್ದು, ಕಾರ್ ನಂಬರ್ ನೀಡಿ ನೀವು ಕೂಡಲೇ ಚಿನ್ನ ತೆಗೆದುಕೊಂಡು ಆತನಿಗೆ ನೀಡಿ ಹಣ ಪಡೆಯುವಂತೆ ವಂಚಕ ಹೇಳಿದ್ದನು.

ಇದನ್ನು ನಂಬಿದ ಚಿನ್ನದ ವ್ಯಾಪಾರಿ ದಿನೇಶ್‍ಕುಮಾರ್ 1 ಕೆಜಿ ಚಿನ್ನ ತೆಗೆದುಕೊಂಡು ಆತ ಹೇಳಿದ ಸ್ಥಳಕ್ಕೆ ತೆರಳಿ ಅಲ್ಲಿ ಕಾರಿನಲ್ಲಿ ಕಾಯುತ್ತಿದ್ದ ವ್ಯಕ್ತಿಗೆ ಚಿನ್ನ ನೀಡಿ ಹಣವನ್ನು ಪಡೆದು ತನ್ನ ಅಂಗಡಿಗೆ ವಾಪಸಾಗಿ ಪರಿಶೀಲಿಸಿದಾಗ ಆತ ನೀಡಿದ ನೋಟುಗಳು ನಕಲಿ ಎಂಬುದು ಗೊತ್ತಾಗಿದೆ.   ಇದರಿಂದ ಆತಂಕಕ್ಕೊಳಗಾದ ದಿನೇಶ್‍ಕುಮಾರ್ ಅವರು ತಕ್ಷಣ ಹಲಸೂರು ಗೇಟ್ ಪೊಲೀಸರಿಗೆ ದೂರು ನೀಡಿದ್ದರು.   ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ದೂರವಾಣಿ ಕರೆ ಆಧರಿಸಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಅವುಗಳ ಆಧಾರದ ಮೇಲೆ ತನಿಖೆ ನಡೆಸಿದಾಗ ಈ ವಂಚನೆ ಮಾಡಿರುವುದು ಮೈಸೂರಿನವರು ಎಂದು ತಿಳಿದುಬಂದಿದೆ. ತಕ್ಷಣ ಹಲಸೂರು ಗೇಟ್ ಪೊಲೀಸರು ಮೈಸೂರಿಗೆ ತೆರಳಿ ಆರೋಪಿಗಳನ್ನು ಬಂಧಿಸಿ ಚಿನ್ನದ ವ್ಯಾಪಾರಿಯಿಂದ ಲಪಟಾಯಿಸಿದ್ದ 32 ಲಕ್ಷ ರೂ. ಬೆಲೆಬಾಳುವ 1 ಕೆಜಿ ತೂಕದ ಚಿನ್ನದ ಗಟ್ಟಿ, ನಕಲಿ ನೋಟುಗಳನ್ನು ತಯಾರು ಮಾಡುವ ಕಲರ್ ಪ್ರಿಂಟರ್, ಕಂಪ್ಯೂಟರ್ ಮತ್ತು ಸ್ಕ್ಯಾನಿಂಗ್ ಮೆಷಿನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಗಳು ನೋಟು ಮತ್ತು ಚೆಕ್‍ಗಳನ್ನು ಫೋರ್ಜರಿ ಮಾಡುವ ಚಾಳಿ ಹೊಂದಿದವರಾಗಿದ್ದು, ಹಾಗೂ ಮೈಸೂರು, ಚಾಮರಾಜನಗರ, ಬೆಂಗಳೂರಿನ ಎಸ್‍ಜೆ ಪಾರ್ಕ್ ಠಾಣೆಗಳಲ್ಲಿ ಇನ್ಸುರೆನ್ಸ್ ಬಾಂಡ್ ಮತ್ತು ಚೆಕ್‍ಗಳನ್ನು ಫೋರ್ಜರಿ ಮಾಡುವ ಮೂರು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಚಂದ್ರಗುಪ್ತ ಮಾರ್ಗದರ್ಶನದಲ್ಲಿ ಹಲಸೂರು ಗೇಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ತಿಮ್ಮಯ್ಯ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಆನಂದ್‍ಕುಮಾರ್ ಹಾಗೂ ಸಿಬ್ಬಂದಿ ವರ್ಗ ಈ ಯಶಸ್ವಿ ಕಾರ್ಯಾಚರಣೆ ನಡೆಸಿ ವಂಚಕರನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin