ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಸಿದ್ದಗಂಗಾ ಶ್ರೀಗಳು ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

Siddaganga-Swamiji--01

ಬೆಂಗಳೂರು, ಮೇ 12- ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಸಿದ್ದಗಂಗಾ ಮಠದ ಶ್ರೀಗಳಾದ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರ ಆರೋಗ್ಯದಲ್ಲಿ ಕೊಂಚ ಏರುಪೇರಾದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಬೆಳಗ್ಗೆ ತುಮಕೂರಿನಿಂದ ವೈದ್ಯರ ತಂಡ, ಕಿರಿಯ ಶ್ರೀಗಳು, ಮಾಜಿ ಸಚಿವರಾದ ವಿ.ಸೋಮಣ್ಣ, ಶಿವಣ್ಣ ಶ್ರೀಗಳೊಂದಿಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಪ್ರಯಾಣ ಬೆಳೆಸಿದರು. ಪೊಲೀಸ್ ಭದ್ರತೆಯೊಂದಗೆ ಬೆಂಗಳೂರಿಗೆ ಶ್ರೀಗಳನ್ನು ಕರೆತರಲಾಯಿತು. ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರಾದ ಹಿನ್ನೆಲೆಯಲ್ಲಿ ನಿನ್ನೆ ವೈದ್ಯರು ಹಳೇ ಮಠಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿದ ನಂತರ ಶ್ರೀಗಳು ಎರಡು ದಿನ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದರು.


ಪ್ರತಿ ದಿನ ಮುಂಜಾನೆ ಶ್ರೀಗಳು ಶಿವನಪೂಜೆ ಮುಗಿಯುವ ತನಕ ಒಂದು ಹನಿ ನೀರೂ ಸೇವಿಸುವುದಿಲ್ಲ. ಇದರಿಂದ ಕೊಂಚ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ ಎನ್ನಲಾಗಿದೆ. ಬಿಸಿಲಿನ ತಾಪ ಹೆಚ್ಚಿರುವ ಹಿನ್ನೆಲೆಯಲ್ಲಿ ಶ್ರೀಗಳ ದೇಹದಲ್ಲಿ ನೀರಿನ ಅಂಶ ಕಡಿಮೆ ಇದ್ದು, ತುಟಿ, ಬಾಯಿ ಒಣಗಿದ ರೀತಿಯಲ್ಲಿತ್ತು. ಬೇರೇನೂ ತೊಂದರೆ ಇಲ್ಲ. ಶ್ರೀಗಳು ಆರೋಗ್ಯವಾಗಿದ್ದಾರೆ, ಭಕ್ತರು ಆತಂಕಪಡುವ ಅಗತ್ಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.  ಬಿಜಿಎಸ್ ಆಸ್ಪತ್ರೆಯ ನುರಿತ 10 ವೈದ್ಯರ ತಂಡ ನಿನ್ನೆ ಮಠಕ್ಕೆ ಆಗಮಿಸಿ ಶ್ರೀಗಳ ಆರೋಗ್ಯ ತಪಾಸಣೆ ನಡೆಸಿದ್ದರು. ಅಗತ್ಯಬಿದ್ದರೆ ಬೆಂಗಳೂರಿಗೆ ಕರೆದೊಯ್ಯುವುದಾಗಿ ತಿಳಿಸಿದ್ದರು.

ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ, ಕಣ್ಣೂರು ಸ್ವಾಮೀಜಿ, ವಿಶ್ವನಾಥ್ ಸೇರಿದಂತೆ ಹಲವು ಮುಖಂಡರು ಶ್ರೀಗಳ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಿದ್ದರು. ಬಿಜಿಎಸ್ ಆಸ್ಪತ್ರೆಯ ನುರಿತ ವೈದ್ಯರು ಹಾಗೂ ಅಮೆರಿಕದಲ್ಲಿ ಸಾಕಷ್ಟು ಹೆಸರು ಮಾಡಿರುವ ಡಾ.ರವೀಂದ್ರ ಹಾಗೂ ಹೈದರಾಬಾದ್‍ನ ಹೆಸರಾಂತ ವೈದ್ಯರು ಇಂದು ಮಠಕ್ಕೆ ಆಗಮಿಸಿ ಶ್ರೀಗಳ ತಪಾಸಣೆ ನಡೆಸಿದರು. ಎಂದಿನಂತೆ ಹಳೇ ಮಠದಲ್ಲಿ ಶ್ರೀಗಳು ಪೂಜಾ ಕೈಂಕರ್ಯ ನೆರವೇರಿಸಿದರು. ಬೆಳಗಿನ ಜಾವ ಎದ್ದು ಶಿವಪೂಜೆ ನಡೆಸಿದರು. ವೈದ್ಯರ ತಂಡ ಎರಡು ದಿನ ವಿಶ್ರಾಂತಿ ಹಾಗೂ ಚಿಕಿತ್ಸೆ ಹಿನ್ನೆಲೆಯಲ್ಲಿ ಬಿಜಿಎಸ್ ಆಸ್ಪತ್ರೆಗೆ ಕರೆದೊಯ್ಯಬೇಕು ಎಂಬ ಸಲಹೆ ನೀಡಿದ ಕಾರಣ ಶ್ರೀಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin