ಕೆಪಿಸಿಸಿ ಪಟ್ಟಕ್ಕಾಗಿ ಪೈಪೋಟಿ ಜೋರು

ಈ ಸುದ್ದಿಯನ್ನು ಶೇರ್ ಮಾಡಿ

kpcc

ಬೆಂಗಳೂರು, ಮೇ 14- ತಿಂಗಳಾಂತ್ಯದಲ್ಲಿ ಕೆಪಿಸಿಸಿ ಅಧ್ಯಕ್ಷಗಾದಿಯ ತೀರ್ಮಾನದ ಮುನ್ಸೂಚನೆಯನ್ನು ಹೈಕಮಾಂಡ್ ನೀಡುತ್ತಿದ್ದಂತೆ ರಾಜ್ಯ ಕಾಂಗ್ರೆಸ್‍ನಲ್ಲಿ ಆಕಾಂಕ್ಷಿಗಳ ತಾಲೀಮು ಜೋರಾಗಿದೆ. ಚುನಾವಣೆಯ ಹೊಸ್ತಿಲಲ್ಲಿರುವ ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸಮರ್ಥ ನಾಯಕರ ಅಗತ್ಯವಿದೆ. ಹಾಲಿ ಇರುವವರನ್ನು ಮುಂದುವರೆಸಬೇಕೇ ಅಥವಾ ಬೇರೆಯವರನ್ನು ನೇಮಿಸಬೇಕೇ ಎಂಬ ಬಗ್ಗೆ ಹೈಕಮಾಂಡ್ ಚಿಂತನೆ ನಡೆಸುತ್ತಿದೆ.  ದೇಶದಲ್ಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಹೈಕಮಾಂಡ್‍ಗಿಂತ ರಾಜ್ಯ ಕಾಂಗ್ರೆಸ್ ಪ್ರಬಲವಾಗಿದ್ದು, ಮತ್ತೊಮ್ಮೆ ಅಧಿಕಾರಕ್ಕೇನಾದರು ಬಂದರೆ ರಾಜ್ಯದಿಂದ ಹೈದಾರು ಮಂದಿ ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿ ನಾಯಕರಾಗಿ ಹೊರ ಹೊಮ್ಮುತ್ತಾರಲ್ಲದೆ, ಪ್ರಧಾನಮಂತ್ರಿ ಅಭ್ಯರ್ಥಿಗಳಾಗುವುದರಲ್ಲಿ ಆಶ್ಚರ್ಯವಿಲ್ಲ.ಪ್ರಸ್ತುತ ಕೆಪಿಸಿಸಿ ಅಧ್ಯಕ್ಷರಾಗಿರುವ ಡಾ.ಜಿ.ಪರಮೇಶ್ವರ್ ಅವರು ಈ ಹುದ್ದೆಯಲ್ಲಿ ನಾನೇ ಮುಂದುವರೆಯುತ್ತೇನೆ ಎಂದು ತಮ್ಮ ಹಕ್ಕು ಮಂಡಿಸಿರುವುದಲ್ಲದೆ, ನನಗೆ ಹೈಕಮಾಂಡ್ ಅವಕಾಶ ನೀಡುತ್ತದೆ ಎಂಬ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಇದಕ್ಕೆ ಹಿಂಬು ನೀಡುವಂತೆ ನಿನ್ನೆ ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ಪಕ್ಷದ 4 ವರ್ಷದ ಸಾಧನೆ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್, ಆಂಜನೇಯ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರ ನೇತೃತ್ವದಲ್ಲೇ 2018ರ ಚುನಾವಣೆ ನಡೆಯಲಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.

ಪರಮೇಶ್ವರ್ ಅವರು ಮುಂದಿನ ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿದ್ದಾರೆ. ಈ ಸಂದರ್ಭದಲ್ಲಿ ಕೆಪಿಸಿಸಿಗೆ ಅಧ್ಯಕ್ಷ ಹುದ್ದೆಗೆ ಮಲ್ಲಿಕಾರ್ಜುನಖರ್ಗೆ ಬರುತ್ತಾರೆ ಎಂದರೆ ಮೇಲ್ನೋಟಕ್ಕೆ ಸ್ವಾಗತಿಸುತ್ತರಾದರೂ ಒಳಗೊಳಗೆ ಕೈಹಿಸಿಕೊಳ್ಳುವ ಕೆಲಸಗಳು ನಡೆಯುತ್ತವೆ.  ಮುಖ್ಯಮಂತ್ರಿಗಳ ಬಣದೊಂದಿಗೆ ಪರಂ ಸೇರಿಕೊಂಡು ಖರ್ಗೆ ಅವರನ್ನು ರಾಜ್ಯಕ್ಕೆ ಬರದಂತೆ, ಅಧ್ಯಕ್ಷ ಗಾದಿಯಲ್ಲೇ ಮುಂದುವರೆಯುವಂತೆ ಹಾಗೂ ತಮ್ಮ ನೇತೃತ್ವದಲ್ಲೇ ಚುನಾವಣೆ ನಡೆಯುವಂತಹ ತಂತ್ರವನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಖರ್ಗೆ ಅವರು ಕೂಡ ರಾಜ್ಯಕ್ಕೆ ನಾನು ಬರುವುದಿಲ್ಲ ಎಂದು ಸ್ಪಷ್ಟವಾಗಿ ಎಲ್ಲೂ ಹೇಳಿಲ್ಲ. ಹೈಕಮಾಂಡ್ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಈ ನಡುವೆ ಉತ್ತರ ಕರ್ನಾಟಕದ ಲಿಂಗಾಯಿತರ ಲಾಭಿ ಜೋರಾಗಿ ನಡೆದಿದೆ. ಎಸ್.ಆರ್.ಪಾಟೀಲ್, ಎಂ.ಬಿ.ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷ ಗಾದಿ ಪಡೆಯಲು ಭಾರೀ ಕಸರತ್ತು ನಡೆಸಿದ್ದಾರೆ.  ಒಂದು ಹಂತದಲ್ಲಿ ಎಸ್.ಆರ್.ಪಾಟೀಲ್ ಅವರನ್ನು ಕೆಪಿಸಿಸ ಅಧ್ಯಕ್ಷರನ್ನಾಗಿ ಮಾಡುವುದ ಮುಖ್ಯಮಂತ್ರಿಗಳ ಒಲವಾಗಿದೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕೂಡ ನನ್ನ ಪಕ್ಷ ನಿಷ್ಠೆಯನ್ನು ಗುರುತಿಸಿ ನನಗೆ ಅಧ್ಯಕ್ಷ ಹುದ್ದೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಹಳೇ ಮೈಸೂರು ಇನ್ನಿತರ ಭಾಗದಲ್ಲಿ ಒಕ್ಕಲಿಗರ ಮತ ಸೆಳೆಯಲು ಒಕ್ಕಲಿಗರಿಗೆ ಪ್ರಾತಿನಿಧ್ಯ ಸಿಗಬೇಕೆಂಬುದು ಇವರ ಆಗ್ರಹವಾಗಿದೆ. ಕೆಪಿಸಿಸಿ ಅಧ್ಯಕ್ಷ ಹುದ್ದೆ ಪಡೆಯುವ ಪೈಟ್ ತೀವ್ರ ಕುತೂಹಲ ಕೆರಳಿಸಿದೆ.  ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದ ಎಐಸಿಸಿ ಪ್ರಧಾನಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಬಗ್ಗೆ ರಾಜ್ಯ ನಾಯಕರ ಅಭಿಪ್ರಾಯ ಕ್ರೂಢೀಕರಿಸಿ ಹೈಕಮಾಂಡ್‍ಗೆ ವರದಿ ಸಲ್ಲಿಸಿದ್ದಾರೆ. ಈ ವರದಿ ಅಧ್ಯಯನದ ನಂತರ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin