ಪಕ್ಷದಲ್ಲಿ ಎಲ್ಲರನ್ನು ಒಂದು ಮಾಡಲು ಮುಂದಾದ ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

BS

ಬೆಂಗಳೂರು,ಮೇ 15- ಎರಡು ಉಪಚುನಾವಣೆ ಸೋಲು, ಕಾರ್ಯಕರ್ತರ ಅಸಮಾಧಾನ, ಹೈಕಮಾಂಡ್‍ನ ಸ್ಪಷ್ಟ ಎಚ್ಚರಿಕೆ, ಬಲಗೊಳ್ಳುತ್ತಿರುವ ಪ್ರತಿಪಕ್ಷಗಳು, ಸೊರಗುತ್ತಿರುವ ಸಂಘಟನೆ.  ಇದೆಲ್ಲದರ ಪರಿಣಾಮವೇ ಕಳೆದ ಒಂದು ತಿಂಗಳಿನಿಂದ ಹಾದಿಬೀದಿಯಲ್ಲಿ ಐರಾವಣ-ಮಹಿರಾವಣರಂತೆ ತೊಡೆತಟ್ಟಿ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ಮತ್ತೆ ಒಂದಾಗಲು ಮುಂದಾಗಿದ್ದಾರೆ.
ಪಕ್ಷದೊಳಗಿನ ಎಲ್ಲ ಭಿನ್ನಮತ, ಅಸಮಾ ಧಾನ ಹೋಗಲಾಡಿಸಿ 2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಬೇಕೆಂಬ ಪಣ ತೊಟ್ಟಿ ರುವ ಯಡಿಯೂರಪ್ಪ ಎಲ್ಲರನ್ನು ಒಗ್ಗಟ್ಟಿನಿಂದ ಕರೆದೊಯ್ಯಲು ಗಟ್ಟಿ ನಿರ್ಧಾರ ಮಾಡಿದ್ದಾರೆ.

ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ರಾಜ್ಯದಲ್ಲಿ ಪಕ್ಷ ಸೋಲುವುದು ಖಚಿತ ಎಂಬ ಸುಳಿವು ಸಿಗುತ್ತಿದ್ದಂತೆ ವರಸೆ ಬದಲಿಸಿರುವ ಯಡಿಯೂರಪ್ಪ, ಅಸಮಾಧಾನಗೊಂಡಿರುವವರ ಜೊತೆ ಮಾತುಕತೆ ನಡೆಸಿ ಪರಸ್ಪರ ಹಸ್ತಲಾಘವ ಮಾಡಲು ತೀರ್ಮಾನಿಸಿದ್ದಾರೆ.  ಇದೇ 18ರಂದು 36 ದಿನಗಳ ಕಾಲ ರಾಜ್ಯಾದ್ಯಂತ ಬರ ಪ್ರವಾಸ ಆರಂಭಿಸಿರುವ ಬಿಎಸ್‍ವೈ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕರ್ತರಿಗೆ ಹೊಸ ಸಂದೇಶ ರವಾನಿಸಲು ಕಾರ್ಯತಂತ್ರ ರೂಪಿಸಿದ್ದಾರೆ.

ಈಶ್ವರಪ್ಪನವರಿಗೆ ಆಹ್ವಾನ:

ಮಕೂರಿನಿಂದ 18ರಂದು ಆರಂಭವಾಗಲಿರುವ ಬರ ಅಧ್ಯಯನಕ್ಕೆ ಖುದ್ದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ಆಹ್ವಾನಿಸಲು ಯಡಿಯೂರಪ್ಪ ಮುಂದಾಗಿದ್ದಾರೆ.  ಇದರ ಜತೆಗೆ ತಮ್ಮ ನಾಯಕತ್ವದ ವಿರುದ್ಧ ಬುಸುಗುಡುತ್ತಿರುವ ಮಾಜಿ ಶಾಸಕ ಸೊಗಡು ಶಿವಣ್ಣ , ನಂದೀಶ್, ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್, ಮಾಜಿ ವಿಧಾನಪರಿಷತ್ ಮುಖ್ಯ ಸಚೇತಕ ಡಾ.ಶಿವಯೋಗಿ ಸ್ವಾಮಿ ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಬರ ಅಧ್ಯಯನ ಪ್ರಾರಂಭಿಸಲಿದ್ದಾರೆ.  ಅದರಲ್ಲೂ ಪ್ರತ್ಯೇಕ ರಾಜ್ಯ ಪ್ರವಾಸ ಕೈಗೊಳ್ಳಲು ಮುಂದಾಗಿದ್ದ ಈಶ್ವರಪ್ಪ ಅವರನ್ನು ಖುದ್ದು ಬಿಎಸ್‍ವೈ ತಮ್ಮ ಜೊತೆ ರಾಜ್ಯ ಪ್ರವಾಸಕ್ಕೆ ಬರಬೇಕೆಂದು ಆಹ್ವಾನ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.ಇನ್ನು ಪ್ರವಾಸ ಆರಂಭಕ್ಕೂ ಮುನ್ನವೇ ಭಿನ್ನಮತೀಯ ನಾಯಕರ ಜೊತೆ ಮಾತುಕತೆ ನಡೆಸಿ ಪಕ್ಷದಲ್ಲಿ ಯಾವುದೇ ಬಿಕ್ಕಟ್ಟು , ಭಿನ್ನಮತ ಇಲ್ಲವೇ ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದು , ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಮುಂದಿನ ಗುರಿ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ರವಾನಿಸುವರು.
ಈಶ್ವರಪ್ಪ ಪ್ರತ್ಯೇಕ ಪ್ರವಾಸ ಆರಂಭಿಸಿದರೆ ಪಕ್ಷದಲ್ಲಿ ಮತ್ತೆ ಎಲ್ಲವೂ ನೆಟ್ಟಿಗಿಲ್ಲ ಎಂಬ ಸಂದೇಶ ರವಾನೆಯಾಗುತ್ತದೆ. ಈಗಾಗಲೇ ಕಾರ್ಯಕರ್ತರು ಸಾಕಷ್ಟು ಅಸಮಾಧಾನಗೊಂಡಿದ್ದು , ಇಂತಹ ವೇಳೆ ಇನ್ನಷ್ಟು ಮುಜುಗರ ಉಂಟು ಮಾಡಿದರೆ ಪಕ್ಷ ಭಾರೀ ದಂಡ ತೆತ್ತಬೇಕಾಗುತ್ತದೆ ಎಂಬ ಕಾರಣಕ್ಕಾಗಿಯೇ ಬಿಎಸ್‍ವೈ ಭಿನ್ನಮತೀಯರ ಜೊತೆ ರಾಜಿ-ಸಂಧಾನಕ್ಕೆ ಮುಂದಾಗಿದ್ದಾರೆ.  ರಾಯಣ್ಣ ಬ್ರಿಗೇಡ್, ಪದಾಧಿಕಾರಿಗಳ ನೇಮಕಾತಿ, ಬದಲಾವಣೆ ಸಂಬಂಧ ಯಾವ ಯಾವ ಜಿಲ್ಲೆಗಳಲ್ಲಿ ಪರಿಷ್ಕøತ ಅಗತ್ಯವಿದೆಯೋ ಅಂತಹ ಕಡೆ ಸರಿಪಡಿಸುವ ಕೆಲಸಕ್ಕೂ ಕೈ ಹಾಕಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

 

ಹೈಕಮಾಂಡ್ ಎಚ್ಚರಿಕೆ:

ಇನ್ನು ಹೈಕಮಾಂಡ್ ಕೂಡ ಪಕ್ಷದ ಬೆಳವಣಿಗೆಗಳಿಂದ ಬೇಸತ್ತು ಉಭಯ ನಾಯಕರಿಗೆ ಕಠಿಣ ಸಂದೇಶವನ್ನು ರವಾನಿಸಿತ್ತು. ಇಬ್ಬರ ಪ್ರತಿಷ್ಠೆಯಿಂದಾಗಿ ಪಕ್ಷ ಭಾರೀ ಹಿನ್ನಡೆ ಅನುಭವಿಸುವಂತಾಗಿದೆ.   ಇನ್ನು ಮುಂದೆ ಭಿನ್ನಮತೀಯ ಚಟುವಟಿಕೆ ಇಲ್ಲವೆ ಅಪಸ್ವರಕ್ಕೆ ಅವಕಾಶವಿಲ್ಲದಂತೆ ನಡೆದುಕೊಳ್ಳಬೇಕು. ಗೊಂದಲ ಸೃಷ್ಟಿಸಿದರೆ ಮಧ್ಯಪ್ರವೇಶ ಅನಿವಾರ್ಯ ಎಂಬ ಸಂದೇಶ ರವಾನೆಯಾಗಿತ್ತು.
ಹೀಗಾಗಿಯೇ ಯಡಿಯೂರಪ್ಪ ಹಳೇ ವೈಮಸ್ಸನ್ನು ಮರೆತು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಪಕ್ಷ ಮುನ್ನೆಡೆಸಲು ಮುಂದಾಗಿದ್ದಾರೆ.

 

ಒಗಟ್ಟಿನ ಮಂತ್ರ:

ಇನ್ನು 2018 ಮಾರ್ಚ್-ಏಪ್ರಿಲ್‍ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲೂ ಒಗ್ಗಟ್ಟಿನ ಮಂತ್ರವನ್ನು ತಂತ್ರವಾಗಿಸಿಕೊಳ್ಳಲಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ರಮೇಶ್ ಜಿಗಜಿಣಗಿ, ನಿರ್ಮಲ ಸೀತಾರಾಮನ್, ರಾಜ್ಯ ಪ್ರಮುಖರಾದ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ, ಶಾಣಪ್ಪ , ಗೋವಿಂದ ಕಾರಜೋಳ, ಆರ್.ಅಶೋಕ್ ಸೇರಿದಂತೆ ಆ ಬಣ , ಈ ಬಣ ಎನ್ನದೆ ಬಿಜೆಪಿ ಅಧಿಕಾರಕ್ಕೆ ತರುವ ಒಂದೇ ಬಣ ಎಂಬುದು ಅವರ ಜಪವಾಗಲಿದೆ.
ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin