ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಎಸ್‍ಪಿ ಗಿರೀಶ್ ವರ್ಗಾವಣೆಗೆ ಸಾರ್ವಜನಿಕ ವಲಯದ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ACB--01

ಬೆಂಗಳೂರು, ಮೇ 15- ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಎಸಿಬಿ ಎಸ್‍ಪಿ ಗಿರೀಶ್ ವರ್ಗಾವಣೆ ಸಾರ್ವಜನಿಕ ವಲಯದ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಒತ್ತಡಕ್ಕೂ ಮಣಿಯದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇಬ್ಬರು ಭ್ರಷ್ಟರ ಬಣ್ಣ ಬಯಲು ಮಾಡುವಲ್ಲಿ ಯಶಸ್ವಿಯಾದದ್ದೇ ಗಿರೀಶ್ ಅವರ ವರ್ಗಾವಣೆಗೆ ಕಾರಣವಾಗಿದೆ. ಭ್ರಷ್ಟರಲ್ಲಿ ನಡುಕ ಉಂಟು ಮಾಡಿದ್ದ ಲೋಕಾಯುಕ್ತ ಸಂಸ್ಥೆಗೆ ಪರ್ಯಾಯವಾಗಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ಸ್ಥಾಪಿಸಿದ ನಂತರ ಸಮಾಜದಲ್ಲಿ ಮತ್ತೆ ಭ್ರಷ್ಟಾಚಾರ ತಾಂಡವವಾಡಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಎಸಿಬಿ ಬೆಂಗಳೂರು ನಗರ ಘಟಕದ ಎಸ್‍ಪಿಯಾಗಿ ಅಧಿಕಾರ ವಹಿಸಿಕೊಂಡ ಗಿರೀಶ್ ಅವರು ಭ್ರಷ್ಟಾಚಾರ ನಿಗ್ರಹ ದಳವನ್ನು ಲೋಕಾಯುಕ್ತ ಸಂಸ್ಥೆಗೆ ಪರ್ಯಾಯವಾಗಿ ಬೆಳೆಸಿ ಸೈ ಎನಿಸಿಕೊಂಡಿದ್ದರು.ಈ ಹಿಂದೆ ಲೋಕಾಯುಕ್ತ ಸಂಸ್ಥೆಯಲ್ಲೂ ಕರ್ತವ್ಯ ನಿರ್ವಹಿಸಿದ ಅನುಭವಹೊಂದಿದ್ದ ಗಿರೀಶ್ ತಮಗೆ ಒಲಿದು ಬಂದ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಮತ್ತೆ ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದರು.  ಇನ್ನು ನಮ್ಮನ್ನು ತಡೆಯುವವರೇ ಇಲ್ಲ ಎಂದು ರಾಜಾರೋಷವಾಗಿ ಹಗಲು ದರೋಡೆಗಿಳಿದಿದ್ದ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಎಸ್‍ಪಿ ಗಿರೀಶ್ ಬಿಸಿ ಮುಟ್ಟಿಸುವ ಮೂಲಕ ಸಾರ್ವಜನಿಕರ ವಿಶ್ವಾಸ ಗಳಿಸಿದ್ದರು.

ಅದರಲ್ಲೂ ಪ್ರಮುಖವಾಗಿ ಸಿಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಾಜಾಜಿನಗರ ವಾರ್ಡ್ ಬಿಬಿಎಂಪಿ ಸದಸ್ಯ ಜಿ.ಕೃಷ್ಣಮೂರ್ತಿ ಅವರು ನನಗೆ ಮುಖ್ಯಮಂತ್ರಿಗಳೇ ಗಾಡ್‍ಫಾದರ್, ನನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದು ಮೆರೆಯುತ್ತಿದ್ದರು.  ಕೃಷ್ಣಮೂರ್ತಿ ಗುತ್ತಿಗೆದಾರರೊಬ್ಬರಿಂದ 15 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ನೇರ ಅವರ ಮನೆ ಮೇಲೆ ದಾಳಿ ನಡೆಸಿದ್ದ ಗಿರೀಶ್ ನೇತೃತ್ವದ ತಂಡ ರೆಡ್‍ಹ್ಯಾಂಡಾಗಿ ಸೆರೆ ಹಿಡಿದು ಜೈಲಿಗಟ್ಟಿದ್ದರು.
ಅದೇ ರೀತಿ ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತರಾಗಿದ್ದ ಡಾ.ಯತೀಶ್‍ಕುಮಾರ್ ಅವರ ವಿರುದ್ಧ ಎಸಿಬಿ ಕಚೇರಿಗೆ 25ಕ್ಕೂ ಹೆಚ್ಚು ದೂರು ದಾಖಲಾಗಿದ್ದವು.

ಯತೀಶ್ ಅವರು ಸಿಎಂ ಆಪ್ತರೆಂದೇ ಗುರುತಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಬಿಬಿಎಂಪಿ ಆಯುಕ್ತರೇ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದರು.
ಅಂತಹ ವ್ಯಕ್ತಿಯ ವಿರುದ್ಧ ದೂರು ದಾಖಲಾದ ಕೂಡಲೇ ಕಾರ್ಯಾಚರಣೆಗಿಳಿದ ಖಡಕ್ ಅಧಿಕಾರಿ ಗಿರೀಶ್ ಅವರು ಯತೀಶ್ ಸೇರಿದಂತೆ ನಾಲ್ವರು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಏಕಾಏಕಿ ದಾಳಿ ನಡೆಸಿ ಆದಾಯಕ್ಕಿಂತ ಹೆಚ್ಚು ಕೋಟ್ಯಂತರ ಆಸ್ತಿ ಹೊಂದಿದ್ದನ್ನು ಪತ್ತೆಹಚ್ಚಿದ್ದರು.  ಜಿ.ಕೃಷ್ಣಮೂರ್ತಿ ಮತ್ತು ಡಾ.ಯತೀಶ್‍ಕುಮಾರ್ ಅವರ ಬಣ್ಣ ಬಯಲು ಮಾಡಿದ ನಂತರ ಬೆಂಗಳೂರು ನಾಗರಿಕರಲ್ಲಿ ಗಿರೀಶ್ ಅವರ ಬಗ್ಗೆ ನಂಬಿಕೆ ವೃದ್ಧಿಸಿತ್ತು.

ಮತ್ತೆ ಭ್ರಷ್ಟರನ್ನು ಸದೆಬಡಿಯುವ ಮತ್ತೊಬ್ಬ ಅಧಿಕಾರಿ ಬಂದರಲ್ಲಾ ಎಂದು ನಿಟ್ಟುಸಿರು ಬಿಡುತ್ತಿದ್ದಾಗಲೇ ಸರ್ಕಾರ ಗಿರೀಶ್ ಅವರನ್ನು ಎಸಿಬಿ ಕಚೇರಿಯ ಆಡಳಿತ ವಿಭಾಗಕ್ಕೆ ವರ್ಗಾವಣೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.  ಗಿರೀಶ್ ಅವರು ಎಸಿಬಿ ಕಚೇರಿಯ ಆಡಳಿತ ವಿಭಾಗದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದರೂ ಅವರಿಗೆ ಭ್ರಷ್ಟರ ಮೇಲೆ ರೇಡ್ ಮಾಡಲು ಅವಕಾಶವಿಲ್ಲ. ಹೀಗಾಗಿ ಅವರನ್ನು ಆಡಳಿತ ವಿಭಾಗದಿಂದ ಮುಕ್ತಿಗೊಳಿಸಿ ಮತ್ತೆ ಭ್ರಷ್ಟರನ್ನು ಸದೆಬಡಿಯುವ ಕಾರ್ಯಕ್ಕೆ ನಿಯೋಜಿಸುವ ಅವಶ್ಯಕತೆ ಇದೆ.

ಸರ್ಕಾರಕ್ಕೆ ಭ್ರಷ್ಟಾಚಾರವನ್ನು ಮಟ್ಟಹಾಕಬೇಕು ಎಂಬ ನೈಜ ಕಾಳಜಿ ಇದ್ದರೆ ಕೂಡಲೇ ಆಡಳಿತ ವಿಭಾಗಕ್ಕೆ ವರ್ಗಾವಣೆಗೊಂಡಿರುವ ನಿಷ್ಠಾವಂತ ಅಧಿಕಾರಿ ಗಿರೀಶ್ ಅವರನ್ನು ಮತ್ತೆ ಎಸಿಬಿ ಬೆಂಗಳೂರು ವಿಭಾಗದ ಎಸ್‍ಪಿಯನ್ನಾಗಿ ನೇಮಿಸಬೇಕೆಂದು ಸಾರ್ವಜನಿಕರ ಒಕ್ಕೊರಲ ಆಗ್ರಹವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin