ಯಡಿಯೂರಪ್ಪನವರೇ ನಮ್ಮ ನಾಯಕರು, ಕುತ್ತಿಗೆ ಕೊಯ್ದರು ನಾನು ಬಿಜೆಪಿ ಬಿಡಲ್ಲ : ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Eshwarappa--01

ತುಮಕೂರು, ಮೇ 15-ಬಿ.ಎಸ್.ಯಡಿಯೂರಪ್ಪನವರೇ ನಮ್ಮ ನಾಯಕರು. ಅವರ ನೇತೃತ್ವದಲ್ಲಿಯೇ ನಾವೆಲ್ಲರೂ ಬರ ಅಧ್ಯಯನ ಪ್ರವಾಸ ಮಾಡಲಿದ್ದೇವೆ. ನಾವ್ಯಾರೂ ಪ್ರತ್ಯೇಕವಾಗಿ ಪ್ರವಾಸ ಕೈಗೊಂಡಿಲ್ಲ ಎಂದು ವಿಧಾನಪರಿಷತ್‍ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಜಿಲ್ಲಾ ಬಿಜೆಪಿ ಮುಖಂಡ ಎಂ.ಬಿ.ನಂದೀಶ್ ಅವರ ಮನೆಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸಂಜೆ ವಿಜಯಪುರದಲ್ಲಿ ಕನಕ ಪುತ್ಥಳಿ ಅನಾವರಣಕ್ಕೆ ಆಹ್ವಾನಿಸಿದ್ದಾರೆ. ಆ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಬರ ಪರಿಹಾರ ಕಾರ್ಯ ಕುರಿತು ಮಾಹಿತಿ ಪಡೆಯಲಿದ್ದೇನೆ ಎಂದು ಹೇಳಿದರು.ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನಾಗಿ ಇದು ನನ್ನ ಜವಾಬ್ದಾರಿಯಾಗಿದೆ. ಇದನ್ನೇ ಈಶ್ವರಪ್ಪ ಅವರು ಪ್ರತ್ಯೇಕ ಬರ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ ಎಂದು ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಕುತ್ತಿಗೆ ಕೊಯ್ದರು ನಾನು ಬಿಜೆಪಿ ಬಿಡಲ್ಲ. ನಾನು ಬೇರೆ ಪಕ್ಷಕ್ಕೆ ಹೋಗುತ್ತೇನೆಂಬುದು ಸುಳ್ಳು ವದಂತಿ ಎಂದರು.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಡಿಯೋ ಕಾನ್ಫರೆನ್ಸ್ ಸಿಎಂ ಆಗಿದ್ದಾರೆ ಎಂದು ಟೀಕಿಸಿದ ಅವರು, ರಾಜ್ಯದಲ್ಲಿ ಬರ ಆವರಿಸಿದ್ದರೂ ಯಾವ ಜಿಲ್ಲೆಗೂ ಸರಿಯಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಆಯಾ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಬರುತ್ತಾರೆ. ಪರಿಶೀಲನೆ ಸಭೆ ನಡೆಸಿದರೆ ಬರ ಪರಿಹಾರ ಕಾರ್ಯ ಚುರುಕಿನಿಂದ ನಡೆಯುತ್ತದೆ. ಆದರೆ ಮುಖ್ಯಮಂತ್ರಿಗಳು ಇದ್ಯಾವುದನ್ನೂ ಮಾಡಿಲ್ಲ ಎಂದು ಆರೋಪಿಸಿದರು.

ವಿಶ್ವ ಗೆದ್ದ ಅಹಂ:

ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಗೆದ್ದಿರುವುದು ಮುಖ್ಯಮಂತ್ರಿಗಳಿಗೆ ವಿಶ್ವವನ್ನೇ ಗೆದ್ದಷ್ಟು ಅಹಂಕಾರ ಬಂದಿದೆ ಎಂದು ಲೇವಡಿ ಮಾಡಿದ ಅವರು, ಅವರು ರೈತರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು. ಯಡಿಯೂರಪ್ಪ ಅವರ ಜೊತೆ ನಾನು ಬರ ಅಧ್ಯಯನ ಪ್ರವಾಸಕ್ಕೆ ಹೋಗುತ್ತಿದ್ದೇನೆ. ಇದರಲ್ಲಿ ಯಾವುದೇ ರೀತಿ ರಾಜಕೀಯ ದುರುದ್ದೇಶವಿಲ್ಲ. ಬರ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಂತರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.  ಮುಖಂಡರಾದ ಶಿವಣ್ಣ, ನಂದೀಶ್ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin