ಅತ್ಯಾಚಾರ ಎಂಬುದು ಮನುಷ್ಯನ ವಿಕೃತಿಯ ಪಿಡುಗಾಗಿರುವುದು ದುರಂತ

ಈ ಸುದ್ದಿಯನ್ನು ಶೇರ್ ಮಾಡಿ

sexaabuse

ಅತ್ಯಾಚಾರ ಎಂಬುದು ಮನುಷ್ಯನ ವಿಕೃತಿಯ ಪಿಡುಗಾಗಿರುವುದು ದುರಂತ. ಜಾತಿ, ಜನಾಂಗ, ವರ್ಗ, ಪ್ರದೇಶ, ವಯಸ್ಸು, ಸಂಬಂಧ ಎಲ್ಲ ಬಗೆಯ ವ್ಯಾಪ್ತಿಯನ್ನು ಮೀರಿ ಈ ರೀತಿಯ ಹೇಯಕೃತ್ಯ ನಡೆಯುತ್ತಿದೆ. ಶಾಲೆ, ಕಾಲೇಜು, ಯೂನಿವರ್ಸಿಟಿ ಕ್ಯಾಂಪಸ್, ಕಾರ್ಯಸ್ಥಳ, ಹೊಲ-ಗದ್ದೆ ಬಯಲು, ಪಾಳು ಬಿದ್ದ ಕಟ್ಟಡ, ಮಿಲ್, ಕೈಗಾರಿಕಾ ಪ್ರದೇಶ, ರೈಲು ಬೋಗಿ, ಬಸ್, ಶೌಚಾಲಯ, ನಿರಾಶ್ರಿತರ ತಾಣ, ಕ್ಲಬ್, ಬಾರ್-ಹೀಗೆ ಎಲ್ಲೆಂದರಲ್ಲಿ ನಡೆಯುವ ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರ ಮನುಷ್ಯನಲ್ಲಿ ಅಂತರ್ಗತವಾಗಿರುವ ಮೃಗೀಯತನಕ್ಕೆ ಸಾಕ್ಷಿಯಂತಿದೆ.  ಕಳೆದ ವರ್ಷ ದೆಹಲಿಯಲ್ಲಿ ಬಸ್‍ನೊಳಗೆ ಯುವತಿ ಮೇಲೆ ನಡೆದ ಗ್ಯಾಂಗ್‍ರೇಪ್ ಮತ್ತು ಬರ್ಬರ ಕೊಲೆ ಪ್ರಕರಣವಂತೂ ಯಾರನ್ನೇ ಆಗಲಿ ಬೆಚ್ಚಿ ಬೀಳಿಸುವಂಥ ಅತಿ ಘೋರ ಘಟನೆ. ಈ ಕೃತ್ಯ ಜನರಲ್ಲಿ ಇನ್ನೂ ಅಚ್ಚಳಿ ಯದೆ ಇರುವಾಗಲೇ ಮುಂಬೈನ ನಿರ್ಜನ ಶಕ್ತಿ ಮಿಲ್ಸ್ ಆವರಣದಲ್ಲಿ ಆಂಗ್ಲ ದಿನಪತ್ರಿಕೆಯ ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದ ಐವರಿಂದ ಸಾಮೂಹಿಕ ಅತ್ಯಾಚಾರ ಇನ್ನಷ್ಟು ಆತಂಕ ಸೃಷ್ಟಿಸಿತು.
ದೆಹಲಿ, ಉತ್ತರಪ್ರದೇಶದಲ್ಲಂತೂ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಮಾಮೂಲಿ ಸಂಗತಿ ಎನ್ನುವಷ್ಟು ಸಲೀಸಾಗಿದೆ. ಹರ್ಯಾಣದ ರೋಹಟಕ್ ಜಿಲ್ಲೆಯ ಸೋನಾಪೇಟ್‍ನಲ್ಲಿ ದಲಿತ ಯುವತಿ ಮೇಲೆ ಏಳು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿ ಗುಪ್ತಾಂಗಕ್ಕೆ ಹರಿತವಾದ ಆಯುಧದಿಂದ ಚುಚ್ಚಿ ತಲೆಯನ್ನು ಇಬ್ಭಾಗವಾಗಿ ಸೀಳಿ ಕಗ್ಗೊಲೆ ಮಾಡಿದ ನಿರ್ಭಯಾ-2 ಪ್ರಕರಣದಿಂದ ಜನ ಆಕ್ರೋಶಗೊಂಡಿರುವಾಗಲೇ ಅದೇ ರೀತಿಯ ಗ್ಯಾಂಗ್ ರೇಪ್ ಪ್ರಕರಣ ದೆಹಲಿಯಲ್ಲಿ ಮರುಕಳಿಸಿದೆ.   ಚಲಿಸುತ್ತಿದ್ದ ಕಾರಿನಲ್ಲಿ ಯುವತಿಯೊಬ್ಬಳ ಮೇಲೆ ಗುಂಪು ಬಲತ್ಕಾರ ನಡೆಸಿದ ಮೂವರು ಕಾಮುಕರು ಆಕೆಯ ಮೇಲೆ ಮಾರಕ ಹಲ್ಲೆ ನಡೆಸಿ ರಸ್ತೆಗೆ ಎಸೆದು ಪರಾರಿಯಾಗಿರುವ ಪೈಶಾಚಿಕ ಕೃತ್ಯ ದೆಹಲಿಯ ಗುರುಗ್ರಾವ್‍ನಲ್ಲಿ ನಡೆದಿದೆ.  16 ವರ್ಷ ತುಂಬದವರೂ ರೇಪ್ ಮಾಡಿದ ಪ್ರಕರಣಗಳು, ಬಾಲಾಪರಾಧಿಗಳ ಕೃತ್ಯ ಘಟನೆಗಳು ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇವೆ. ಮಧ್ಯವಯಸ್ಕರು, 70 ವರ್ಷದ ಮುದುಕರೂ ಕೂಡ ಅತ್ಯಾಚಾರ ಕೃತ್ಯ ಎಸಗಿದ ನಿದರ್ಶನಗಳಿವೆ.ಮನುಷ್ಯ ಪಶುವಿಗಿಂತ ಕಡೆಯಾಗಿದ್ದಾನೆ. ಮೈಥುನ ಕ್ರಿಯೆಯನ್ನು ಪ್ರಾಣಿಗಳು ನಿಸರ್ಗದ ನಿಯಮದ ಪ್ರಕಾರ ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಉದ್ದೇಶಕ್ಕಾಗಿ ಮಾತ್ರ ಅನುಸರಿಸುತ್ತವೆ. ಆದರೆ ಮಾನವ ? ಮೈಥುನ ಕ್ರಿಯೆಯಲ್ಲಂತೂ ಮನುಷ್ಯನನ್ನು ಮೀರಿಸುವ ಪ್ರಾಣಿ ಈ ಜಗತ್ತಿನಲ್ಲಿ ಇನ್ನಾವುದಾದರೂ ಇದೆಯೇ ಎನ್ನುವಂತಾಗಿದೆ. ಸಣ್ಣವರು-ದೊಡ್ಡವರು, ಮಕ್ಕಳು, ಅಕ್ಕ-ತಂಗಿಯರು, ತಾಯಂದಿರು, ಗುರು-ಹಿರಿಯರೆಂಬ ಗೌರವ ಭಾವನೆ ಇಲ್ಲ. ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳ ಮೇಲಷ್ಟೇ ಅಲ್ಲ ಸ್ವಂತ ತಾವೇ ಹಡೆದ ಚಿಕ್ಕಮಕ್ಕಳ ಮೇಲೆ ಸುಶಿಕ್ಷಿತ ತಂದೆಯೇ ಅತ್ಯಾಚಾರ ಮಾಡುತ್ತಿರುವುದನ್ನು ಪತ್ರಿಕೆಗಳಲ್ಲಿ ಓದಿದಾಗ, ಕೇಳಿದಾಗ ಇದಕ್ಕಿಂತ ಹೆಚ್ಚಿನ ನೈತಿಕ ಅಧ:ಪತನ ಇನ್ನಾವುದಾದರೂ ಇದೆಯೇ ಎನ್ನುವಂತಾಗಿದೆ. ಕಾಮಾತುರಾಣಾಂ ನ ಲಜ್ಜಾ ನಭಯ ಎಂಬ ಮಾತು ಮನುಷ್ಯನಿಗೆ ಅನ್ವಯಿಸುತ್ತದೆ. ಮಾನವ ಇಂದು ದಾನವನಾಗಿದ್ದಾನೆ. ಹೀಗಾಗಿ ನಾವಿಂದು ಮಾಡಬಾರದ್ದನ್ನು ಮಾಡುತ್ತಿದ್ದೇವೆ, ನೋಡಬಾರದ್ದನ್ನು ನೋಡುತ್ತಿದ್ದೇವೆ, ಕೇಳಬಾರದ್ದನ್ನು ಕೇಳುತ್ತಿದ್ದೇವೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ವರದಿಯ ಪ್ರಕಾರ, ಜಗತ್ತಿನ ಬಹುತೇಕ ಭಾಗಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೈಹಿಕ ಹಾಗೂ ಲೈಂಗಿಕ ಹಿಂಸೆಯ ಪ್ರಮಾಣ ಶೇಕಡ 30ರಿಂದ 60ರಷ್ಟಿದೆ. ವರ್ಷದಿಂದ ವರ್ಷಕ್ಕೆ ರೇಪ್ ಕೇಸ್‍ಗಳ ಸಂಖ್ಯೆ ಏರುತ್ತಲೇ ಇದೆ. ಜಗತ್ತಿನ ರೇಪ್ ಕ್ಯಾಪಿಟಲ್ ಎಂದೇ ಕುಖ್ಯಾತಿ ಪಡೆದಿರುವ ಭಾರತದ ರಾಜಧಾನಿ ನವದಹೆಲಿಯಲ್ಲಿ ಹೆಚ್ಚು ಕಡಿಮೆ ದಿನಕ್ಕೆ ಎರಡು ರೇಪ್ ನಡೆಯುತ್ತದೆ. ಉದ್ಯಾನನಗರಿ ಬೆಂಗಳೂರು ಸಹ ಈ ಅಪಖ್ಯಾತಿಯಲ್ಲಿ ಕಡಿಮೆ ಇಲ್ಲ. ಅತ್ಯಾಚಾರ ವಿಕೃತ ಮನಸ್ಸಿನ ಘನಘೋರ ಕೃತ್ಯ. ಸಣ್ಣ ಮಗುವಿನಿಂದ ವೃದ್ದೆಯರವರೆಗೆ ಅಮಾಯಕ ಹೆಣ್ಣು ಮಕ್ಕಳು ಅತ್ಯಾಚಾರದ ಪಿಡುಗಿಗೆ ಬಲಿಯಾಗುತ್ತಿದ್ದಾರೆ. ಮಹಿಳೆಯರ ಮೇಲೆ ನಡೆಯುವ ಲೈಂಗಿಕ, ದೈಹಿಕ ದಾಳಿ ಇದಾದರೂ ಮಾನಸಿಕವಾಗಿಯೂ ಅವರು ಸಂಪೂರ್ಣ ಕುಗ್ಗಿ ಹೋಗುವಂತೆ ಮಾಡುವ ಕಾಮುಕರು, ದುರುಳರಿಗೆ ಕಠಿಣ ಶಿಕ್ಷೆ ಆಗಲೇಬೇಕು. ರಾಜಧಾನಿ ದೆಹಲಿಯ ಬಸ್‍ನಲ್ಲಿ ಅರೆ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ಮೇಲೆ ಮತ್ತು ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಇಂಥ ಕಟ್ಟುನಿಟ್ಟಿನ ಕ್ರಮದ ಅನಿವಾರ್ಯತೆಯನ್ನು ತೋರಿಸುತ್ತಿದೆ.
ರೇಪ್‍ಗೆ ಕೊನೆ ಎಂದು ?:ಅತ್ಯಾಚಾರಕ್ಕೆ ಒಳಗಾಗಿ ನರಕ ಯಾತನೆ ಅನುಭವಿಸುವ ಹೆಣ್ಣು ಮಕ್ಕಳ ದೈಹಿಕ, ಮಾನಸಿಕ ಸ್ಥಿತಿ ತುಂಬಾ ಕೆಟ್ಟದಾಗಿರುತ್ತದೆ. ಆಕೆಯ ಶಿಕ್ಷಣ, ಉದ್ಯೋಗ, ಖಾಸಗಿ ವೈವಾಹಿಕ ಭವಿಷ್ಯ ಆತಂಕದಲ್ಲಿರುತ್ತದೆ. ಆಕೆಗೆ ಎಷ್ಟರ ಮಟ್ಟಿಗೆ ಮನೋ ವ್ಶೆಜ್ಞಾನಿಕ ಸಲಹೆ, ಚಿಕಿತ್ಸೆ ಬೇಕಾಗುತ್ತದೆ ಎಂಬುದು ಆಪ್ತ ಸಮಾಲೋಚಕರು ನಿರ್ಧರಿಸಬೇಕು. ಇನ್ನು ಆಕೆಯ ಹೆತ್ತವರು ಅನುಭವಿಸುವ ಸಂಕಟ, ನೋವು ಮತ್ತು ಯಾತನೆ ಹೇಳತೀರದು. ಜೊತೆಗೆ ತನ್ನದಲ್ಲದ ತಪ್ಪಿಗಾಗಿ ಆಕೆ ಸಮಾಜದಲ್ಲಿ ಅತ್ಯಾಚಾರಕ್ಕೆ ಒಳಗಾದವಳು ಎಂಬ ಹಣೆಪಟ್ಟಿ ಆಕೆಯ ಜೀವನದಲ್ಲಿ ಎಂದೂ ಅಳಿಸಲಾರದಂಥ ಕಪ್ಪು ಚುಕ್ಕೆಯಾಗುತ್ತದೆ. ಆಕೆ ಇದರಿಂದ ಎಷ್ಟು ಮಾನಸಿಕ ಹಿಂಸೆ ಅನುಭವಿಸಬೇಕಾಗಬಹುದು ಎಂಬುದು ಅದನ್ನು ಅನುಭವಿಸಿದ ರೇಪ್ ವಿಕ್ಟಿಮ್‍ಗಳು ಮತ್ತು ನತದೃಷ್ಟೆಯರಿಗಷ್ಟೇ ಗೊತ್ತು.
ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಅನೇಕ ಅಧ್ಯಯನಗಳು ನಡೆದಿವೆ. ಅತ್ಯಾಚಾರ ಒಬ್ಬನಿಂದ ಆಗಲಿ ಅಥವಾ ಸಾಮೂಹಿಕವಾಗೇ ನಡೆದಿರಲಿ ಅದರಲ್ಲಿ ಪಾಲ್ಗೊಳ್ಳುವವರಲ್ಲಿ ಬಹುತೇಕರು ಸಾಮಾನ್ಯವಾಗಿ ಆ ಸಂತ್ರಸ್ತೆಗೆ ಪರಿಚಯದವರೇ ಆಗಿರುತ್ತಾರೆ.
ಕೆಲವೊಮ್ಮೆ ಗುಂಪಿನ ಒಬ್ಬ ಹುಡುಗ ಅಥವಾ ಆ ಹುಡುಗಿ ಗೆಳತಿಯೇ ಇಂಥ ಹೀನ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಾರೆ. ತೀರಾ ಸಣ್ಣ ಕಾರಣಕ್ಕಾಗಿ ಹುಡುಗಿಯರ ಮೇಲೆ ಸೇಡು ತೀರಿಸಿಕೊಳ್ಳಲು ಅತ್ಯಾಚಾರ ನಡೆಯುವುದು ಇದೆ. ಇಂಥ ಸ್ಥಿತಿಗೆ ಕಾರಣ ಏನು, ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದು ಈಗ ಸಮಾಜದ ಮುಂದೆ ಸವಾಲಾಗಿ ನಿಂತಿದೆ. ಪಾಶ್ಚಾತ್ಯ ಸಂಸ್ಕೃತಿ ಯ ಪ್ರಭಾವ, ವೇಷ ಭೂಷಣ, ಆಹಾರ ಪದ್ಧತಿ, ಸಿನಿಮಾ ಮತ್ತು ಟಿವಿ ಸಂಸ್ಕøತಿ, ಬಿಂದಾಸ್ ಜೀವನ ಶೈಲಿ ಎಲ್ಲವೂ ಇಂಥ ಕೃತ್ಯಕ್ಕೆ ಕೊಡುಗೆ ನೀಡುತ್ತವೆ. ವಿಶ್ವಾದ್ಯಂತ ಅತ್ಯಾಚಾರದ ಪಿಡುಗು ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿದೆ. ಅತ್ಯಾಚಾರಿಗಳ ವಿರುದ್ದ ಕಠಿಣ ಕಾನೂನು ಕ್ರಮಗಳನ್ನು ಜರುಗಿಸದೇ ಇರುವುದು ರೇಪಿಸ್ಟ್‍ಗಳು ಸ್ವೇಚ್ಚೆಯಿಂದ ವರ್ತಿಸಲು ಮುಖ್ಯ ಕಾರಣ ಎನ್ನಬಹುದು. ಆದ್ದರಿಂದ ಇದನ್ನು ಅಪಮಾನ ಎಂದು ಭಾವಿಸದೇ ದೂರು ನೀಡಬೇಕು. ನಿಜಕ್ಕೂ ಅಪಮಾನಕಾರಿ ಕೃತ್ಯ ಎಸಗಿದ್ದು ಆ ಆತ್ಯಾಚಾರಿ. ಹೀಗಾಗಿ ಆ ಮೂಲಕವಾದರೂ ರೇಪಿಸ್ಟ್‍ನನ್ನು ಸಾರ್ವಜನಿಕವಾಗಿ ಅಪಮಾನ ಮಾಡಬೇಕು.
ಅತ್ಯಾಚಾರವನ್ನು ಹೇಗೆ ತಡೆಗಟ್ಟಬೇಕು, ಅತ್ಯಾಚಾರಿಗಳಿಗೆ ಎಂಥ ಶಿಕ್ಷೆ ನೀಡಬೇಕು ಎಂಬುದು ಸಮಾಜಕ್ಕೆ, ಕಾನೂನಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಆದರೆ, ಅಂತರ್ಜಾಲದ ಮೇಲೊಮ್ಮೆ ಕಣ್ಣಾಡಿಸಿ ನೋಡಿದರೆ, ಜನ ಹೇಗೆ ರೊಚ್ಚಿಗೆದ್ದಿದ್ದಾರೆ ಎಂಬುದು ತಿಳಿಯುತ್ತದೆ. ಗಲ್ಲು ಶಿಕ್ಷೆ ತೀರಾ ಸರಳ. ಆದ್ದರಿಂದ ಅತ್ಯಾಚಾರಿಗಳಿಗೆ ಸಾರ್ವಜನಿಕವಾಗಿ ಜನನಾಂಗ ಛೇದನ ಮಾಡುವುದೇ ಸೂಕ್ತ ಶಿಕ್ಷೆ ಎಂದು ಬಹುತೇಕ ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕೋರ್ಟ್‍ಗಳಲ್ಲಿ ಇತ್ಯರ್ಥವಾಗದೇ ಉಳಿದಿ ರುವ ಅತ್ಯಾಚಾರದ ಹಳೇ ಪ್ರಕರಣಗಳನ್ನು ಕೂಡಲೇ ಹೊರ ತೆರೆದು ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕು, ಶಿಕ್ಷೆ ಎಷ್ಟರ ಮಟ್ಟಿಗೆ ಇರಬೇಕೆಂದರೆ ಇಂಥ ಘೋರ ಕೃತ್ಯ ಎಸಗುವವರಿಗೆ ಇದರ ಭಯ ತಟ್ಟಿ, ಅವರು ಈ ರೀತಿಯ ಹೀನ ಕೆಲಸಗಳಿಗೆ ಕೈ ಹಾಕಲು ಹಿಂಜರಿಯಬೇಕು.ಪೊಲೀಸರಿಗೆ ಇಂಥ ಪ್ರಕರಣಗಳ ಸೂಕ್ಷ್ಮತೆಯ ಬಗ್ಗೆ ಅರಿವು ಮೂಡಿಸಬೇಕು.
ಹೆಚ್ಚು ಸಂಖ್ಯೆ ಗಸ್ತು ಪೊಲೀಸರನ್ನು ನಿಯೋಜಿಸಬೇಕು; ಬಸ್‍ಗಳಲ್ಲಿ, ರೇಲ್ವೆ ಬೋಗಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾಧ್ಯವಾದಷ್ಟೂ ಸಿಸಿ ಟಿವಿಗಳನ್ನು ಅಳವಡಿಸಬೇಕು; ಮಹಿಳಾ ಸುರಕ್ಷತೆಗೆ ಸಂಬಂಧಪಟ್ಟ ಮಸೂದೆಗಳನ್ನು ಅಂದರೆ ಮಹಿಳೆಯರ ವಿರುದ್ದ ಆಕೆಯ ಕಾರ್ಯಸ್ಥಳ ಹಾಗೂ ಇತರೆಡೆ ನಡೆಯಬಹುದಾದ ಲೈಂಗಿಕ ಕಿರುಕುಳ, ಅತ್ಯಾಚಾರದಂಥ ದೌರ್ಜನ್ಯಗಳನ್ನು ತಡೆಗಟ್ಟಲು ಇರುವ ಮಸೂದೆಗಳನ್ನು ಕೂಡಲೇ ಜಾರಿಗೊಳಿಸಬೇಕು.
ಸಾಧಾರಣವಾಗಿ ಇಂಥ ಕೃತ್ಯ ನಡೆದಾಗ ಸಮಾಜ ರೊಚ್ಚಿಗೇಳುತ್ತದೆ. ಕ್ರಮೇಣ ತಣ್ಣಗಾಗುತ್ತದೆ. ವಿಚಾರಣೆ ತಡವಾಗುತ್ತದೆ. ಇದರಿಂದಾಗಿ ಶಿಕ್ಷೆ ಅಪರಾಧಿಗಳ ಬಳಿ ಸುಳಿಯುವುದಿಲ್ಲ. ಮುಂದೆ ಅತ್ಯಾಚಾರಿಗಳು ರಾಜಾರೋಷದಿಂದ ಓಡಾಡಿಕೊಂಡು ಇರುತ್ತಾರೆ. ದೆಹಲಿ ಮತ್ತು ಮುಂಬೈನಲ್ಲಿ ನಡೆದ ಗ್ಯಾಂಗ್‍ರೇಪ್ ಪ್ರಕರಣಗಳು ಹೆಣ್ಣು ಮಗಳೊಬ್ಬಳ ಬಾಳಿಗಷ್ಟೇ ಕಪ್ಪು ಚುಕ್ಕೆ ಅಲ್ಲ.  ಅದು ಈಗ ವಿಶ್ವದ ಕಣ್ಣಿನಲ್ಲಿ ಇಡೀ ಭಾರತ ದೇಶಕ್ಕೆ ದೊಡ್ಡ ಕಪ್ಪು ಚುಕ್ಕೆ. ಅತ್ಯಾಚಾರಿಗೆ ಏನು ಶಿಕ್ಷೆ ನೀಡಬೇಕು ಎಂದು ಚರ್ಚಿಸುವುದಕ್ಕಿಂತ ಅದಕ್ಕೆ ಆಸ್ಪದವೇ ನೀಡದಂತೆ ಅತ್ಯಾಚಾರ ನಡೆಯುವುದನ್ನು ತಡೆಗಟ್ಟುವುದೇ ಸೂಕ್ತ ಪರಿಹಾರ. ಯಾವ ಸ್ಥಳದಲ್ಲಿ ಎಷ್ಟು ಹೊತ್ತಿನಲ್ಲಾಗಲೀ ಧೈರ್ಯವಾಗಿ ಓಡಾಡಿಕೊಂಡಿರುವುದು ಮಹಿಳೆಯ ಜನ್ಮಸಿದ್ದ ಹಕ್ಕು. ಇದನ್ನು ಅವಳು ಪಡೆದುಕೊಳ್ಳುವಂತೆ ಮಾಡುವುದು ದೇಶವನ್ನು ಆಳುವವರ ಹೊಣೆ ಮತ್ತು ಕರ್ತವ್ಯ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin