ಗುಡುಗು,ಸಿಡಿಲಿಗೆ ಪ್ರಾಣತೆತ್ತ ಕುಟುಂಬಗಳಿಗೆ ಶಾಸಕರಿಂದ ಪರಿಹಾರ

ಈ ಸುದ್ದಿಯನ್ನು ಶೇರ್ ಮಾಡಿ

datta
ಕಡೂರು, ಮೇ 16- ಕಳೆದ ಮೂರು ದಿನಗಳ ಹಿಂದೆ ಕಡೂರು ಸುತ್ತಮುತ್ತ ಗುಡುಗು-ಸಿಡಿಲು ಸಮೇತ ಬಿದ್ದ ಭಾರೀ ಮಳೆಯಿಂದ ಸಾವಿಗೀಡಾದ ಕುರುಬಗೆರೆಯ ಆಶಾ ಮತ್ತು ಅರುಣ ಎಂಬುವವರ ಕುಟುಂಬಕ್ಕೆ ಶಾಸಕ ವೈ.ಎಸ್.ವಿ.ದತ್ತ ವೈಯಕ್ತಿಕವಾಗಿ ತಲಾ 10,000ರೂ.ಗಳನ್ನು ನೀಡಿದರು.
ದತ್ತ ಅವರು ಕುರುಬಗೆರೆ ಗ್ರಾಮದ ಆಶಾ ಮತ್ತು ಅರುಣ ಅವರ ಮನೆಗಳಿಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ನಂತರ ಸಾರ್ವಜನಿಕರೊಂದಿಗೆ ಮಾತನಾಡಿ, ಮಳೆ ತಾಲೂಕಿನಾದ್ಯಂತ ಸಮೃದ್ಧಿಯಾಗಿ ಬರಬೇಕು. ಅದು ಸಂತೋಷಕರ. ಇದರ ಜತೆಗೆ ಮುಂಗಾರಿನಲ್ಲಿ ಅವಘಡಗಳು ಸಂಭವಿಸುತ್ತವೆ. ಇದೇ ರೀತಿ ಕುರುಬಗೆರೆಯಲ್ಲಿ ಅವಘಡ ಸಂಭವಿಸಿದಾಗ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡಿ ಸರ್ಕಾರಕ್ಕೆ ತಕ್ಕ ವರದಿ ನೀಡಿರುತ್ತಾರೆ. ಸರ್ಕಾರ ಸಿಡಿಲು ಬಡಿದು ಸತ್ತರೆ ರಾಷ್ಟ್ರೀಯ ವಿಪತ್ತು ಯೋಜನೆಯಡಿ ಈ ಹಿಂದೆ ಎರಡು ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು.

 

ಈಗ ನಾಲ್ಕು ಲಕ್ಷವನ್ನು ಸರ್ಕಾರ ನೀಡುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ತರೀಕೆರೆ ಉಪವಿಭಾಗಾಧಿಕಾರಿಗಳೊಂದಿಗೆ ಮಾತನಾಡಿರುವುದಾಗಿ ತಿಳಿಸಿದರು.ಇದೇ 19ರಂದು ಎರಡೂ ಕುಟುಂಬಗಳಿಗೆ ಪರಿಹಾರ ಚೆಕ್ ವಿತರಿಸಲಾಗುವುದು. ಎರಡೂ ಜೀವಗಳು ಹೋಗಿವೆ, ಆ ಕುಟುಂಬಗಳಿಗೆ ಭದ್ರತೆ ಸಿಗಬೇಕಿದೆ. ಬೇರೆ ಯೋಜನೆಗಳಿಂದಲೂ ಸಹಾಯ ಮಾಡಲಾಗುವುದು. ಅರುಣ್ ಅವರ ಕುಟುಂಬಕ್ಕೆ ಮನೆಯೂ ಇಲ್ಲದಾಗಿದೆ. ತಂದೆ ಹೊನ್ನಪ್ಪ ಇವರಿಗೆ ಜಾಗೃತಿ ಸಮಿತಿ ಯೋಜನೆಯಡಿ ಮನೆ ಮಂಜೂರು ಮಾಡಿಸಲಾಗುವುದು ಎಂದು ಭರವಸೆ ನೀಡಿದರು.ತಾಪಂ ಸದಸ್ಯ ತಿಮ್ಮಯ್ಯ, ಕೆ.ಎಂ. ಮಹೇಶ್ವರಪ್ಪ, ಜಿಗಣೇಹಳ್ಳಿ ನೀಲಕಂಠಪ್ಪ, ಮಚ್ಚೇರಿ ಮಹೇಶ್ವರಪ್ಪ, ಎಸ್. ಗೋವಿಂದಪ್ಪ, ಕೃಷ್ಣಾನಾಯ್ಕ ಹಾಗೂ ಇತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin