ಕರ್ನಾಟಕದಲ್ಲೂ ವ್ಯಾಪಂ ಮಾದರಿ ಹಗರಣ ಬೆಳಕಿಗೆ..!

ಈ ಸುದ್ದಿಯನ್ನು ಶೇರ್ ಮಾಡಿ

Fake-Marks-cards
ಬೆಂಗಳೂರು,ಮೇ 17-ಇತ್ತೀಚೆಗೆ ಬೆಂಗಳೂರು ನಗರ ಪೊಲೀಸರು ನಕಲಿ ಅಂಕಪಟ್ಟಿ ಜಾಲವನ್ನು ಭೇದಿಸಿದ್ದ ಪ್ರಕರಣ ಈಗ ಮತ್ತೊಂದು ಹೊಸ ತಿರುವು ಪಡೆದುಕೊಂಡಿದೆ.   ನಕಲಿ ಅಂಕಪಟ್ಟಿ ಪಡೆದಿದ್ದ 400 ಮಂದಿ ಈಗಾಗಲೇ ಸರ್ಕಾರಿ ಹುದ್ದೆ ಸೇರಿದಂತೆ ಕೆಲವು ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲೂ ಕೆಲಸ ಗಿಟ್ಟಿಸಿಕೊಂಡಿರುವುದು ಬೆಳಕಿಗೆ ಬಂದಿದೆ.   ಮಧ್ಯಪ್ರದೇಶದಲ್ಲಿ ನಡೆದಿದ್ದ ವ್ಯಾಪಂ ಪ್ರಕರಣವನ್ನೇ ಹೋಲುವಂತಹ ಪ್ರಕರಣ ಇದಾಗಿದ್ದು , ಈ ಜಾಲ ದೇಶಾದ್ಯಂತ ಅನೇಕ ಕಡೆ ಇಂತಹುದೇ ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ದೇಶಾದ್ಯಂತ ಒಟ್ಟು 180 ಮಧ್ಯವರ್ತಿಗಳು ನಕಲಿ ಅಂಕಪಟ್ಟಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದು , ಎಸ್ಸೆಸ್ಸೆಲ್ಸಿ , ಪಿಯುಸಿ, ಪದವಿ, ಸ್ನಾತಕೋತ್ತರ ಸೇರಿದಂತೆ ವಿವಿಧ ಶ್ರೇಣಿಯ ಅಂಕಪಟ್ಟಿಗಳನ್ನು ತಯಾರಿಸಿ ದೊಡ್ಡ ಮಟ್ಟದಲ್ಲಿ ಮಾರಾಟ ಮಾಡಿದ್ದಾರೆ. ಕಳೆದ ವಾರ ಬೆಂಗಳೂರಿನ ಸಿಸಿಬಿ ಪೊಲೀಸರು ಪ್ರಕರಣವನ್ನು ಭೇಧಿಸಿದಾಗ ನಕಲಿ ಅಂಕಪಟ್ಟಿ ಜಾಲ ಪತ್ತೆಯಾಗಿತ್ತು. ಸುಮಾರು 400 ಮಂದಿಗೆ ಪ್ರತಿ ಅಂಕಪಟ್ಟಿಗೆ ಒಂದು ಲಕ್ಷದ ಅರವತ್ತು ಸಾವಿರ ರೂ.ಗೆ ಮಾರಾಟ ಮಾಡಲಾಗಿತ್ತೆಂದು ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ.

ಇವರಿಂದ ಅಂಕಪಟ್ಟಿ ಪಡೆದಿದ್ದ ಕೆಲವರು ಈಗಾಗಲೇ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿ ಕೆಲಸವನ್ನು ಪಡೆದಿದ್ದಾರೆ. ಇನ್ನು ಪ್ರತಿಷ್ಠಿತ ಐಟಿಬಿಟಿ ಹಾಗೂ ಖಾಸಗಿ ಕಂಪನಿಗಳಲ್ಲಿ ಹಲವಾರು ಮಂದಿ ಉನ್ನತ ಹುದ್ದೆಗಳನ್ನು ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ.  ಬಂಧಿತರ ಇಮೇಲ್, ವಾಟ್ಸಪ್‍ಗಳನ್ನು ಪರಿಶೀಲಿಸಿದ ವೇಳೆ ಕೇವಲ ಕರ್ನಾಟಕವಲ್ಲದೆ ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ಬಿಹಾರ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಈ ತಂಡ ನಕಲಿ ಅಂಕಪಟ್ಟಿಗಳನ್ನು ಮಾರಾಟ ಮಾಡಿದ್ದಾರೆ.

 

ಎರಡನೇ ವ್ಯಾಪಂ ಹಗರಣ:

ಮಧ್ಯಪ್ರದೇಶದಲ್ಲಿ ವ್ಯಾಪಂ ಹಗರಣವನ್ನೇ ಹೋಲುವಂತಹ ಪ್ರಕರಣ ಇದಾಗಿದ್ದು , ಈ ಜಾಲ ಇನ್ನು ಅನೇಕ ರಾಜ್ಯಗಳಲ್ಲಿ ತಮ್ಮ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.  ಪ್ರತಿಷ್ಠಿತರ ಮಕ್ಕಳನ್ನೇ ಗುರಿಯಾಗಿಟ್ಟುಕೊಳ್ಳುತ್ತಿದ್ದ ಈ ಗುಂಪು ಒಂದೂವರೆಯಿಂದ ಮೂರು ಲಕ್ಷದವರೆಗೆ ಹಣ ಪಡೆದು ಅಂಕಪಟ್ಟಿ ಮಾರಾಟ ಮಾಡುತ್ತಿದ್ದರು. ಸಾಮಾಜಿಕ ತಾಣಗಳ ಮೂಲಕ ಶ್ರೀಮಂತ ಮಕ್ಕಳನ್ನು ಸಂಪರ್ಕಿಸುತ್ತಿದ್ದರು. ಆನ್‍ಲೈನ್ ಮೂಲಕವೇ ಹಣ ಪಡೆದು ಶೇ.75ರಷ್ಟು ಅಂಕಗಳಿಗೆ ಒಂದೂವರೆ ಲಕ್ಷ ಶೇ.85ಕ್ಕೆ ಒಂದು ಲಕ್ಷದ ಎಪ್ಪತ್ತೈದು ಸಾವಿರ, ಶೇ.90ಕ್ಕೆ ಎರಡರಿಂದ ಎರಡೂವರೆ ಲಕ್ಷ ಹಣ ಪಡೆದಿದ್ದಾರೆ.  ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕವೇ ಹಣ ಪಡೆದ ನಂತರ ಅವರ ಪಾಸ್‍ಫೋರ್ಟ್ ಅಳತೆಯ ಫೋಟೊ ಪಡೆದು ನಂತರ ಒಂದೇ ವಾರದಲ್ಲಿ ಅಂಕಪಟ್ಟಿ ನೀಡುತ್ತಿದ್ದರು.  ಇದು ವ್ಯವಸ್ಥಿತವಾಗಿ ನಡೆಸಿರುವ ಹವಾಲ ದಂಧೆಯಂತಿದ್ದು , ಹೊರರಾಜ್ಯಗಳಲ್ಲಿ ತಲೆಮರೆಸಿಕೊಂಡಿರುವವರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.  ಅಂಕಪಟ್ಟಿ ತಯಾರಿಸಲು ಕೆಲವು ವೃತ್ತಿಪರಿಣಿತ ಸಾಫ್ಟ್ ವೆರ್  ಇಂಜಿನಿಯರ್‍ಗಳು ಇದರಲ್ಲಿ ಶಾಮೀಲಾಗಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin