ಅಕ್ರಮ ಗಣಿಗಾರಿಕೆ : ಎಸ್.ಎಂ.ಕೃಷ್ಣ ಸೇರಿದಂತೆ ಒಟ್ಟು 11 ಮಂದಿಗೆ ಸಮನ್ಸ್ ನೀಡಲು ಎಸ್‍ಐಟಿ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

Janthkal

ಬೆಂಗಳೂರು,ಮೇ 18- ಅಕ್ರಮ ಗಣಿಗಾರಿಕೆ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‍ಐಟಿ ) ಇನ್ನು ಕೆಲವು ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಸಮನ್ಸ್ ನೀಡಲು ಮುಂದಾಗಿದೆ.  ಜಯಂತ್ಕಲ್ ಮೈನಿಂಗ್ಸ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸೆಷನ್ಸ್ ನ್ಯಾಯಾಲಯ ನಿನ್ನೆಯಷ್ಟೇ ಜಾಮೀನು ನೀಡಿತ್ತು.   ಇದರ ನಡುವೆ ವಿಚಾರಣೆಗೆ ಹಾಜರಾಗುವಂತೆ ಎಸ್‍ಐಟಿ ಕುಮಾರಸ್ವಾಮಿ ಅವರಿಗೆ ಈಗಾಗಲೇ ಸಮನ್ಸ್ ಜಾರಿ ಮಾಡಿದೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಹಾಗೂ ಧರ್ಮಸಿಂಗ್ ಸೇರಿದಂತೆ ಒಟ್ಟು 11 ಮಂದಿಗೆ ಸಮನ್ಸ್ ನೀಡಲು ಸಜ್ಜಾಗಿದೆ.   ಸುಪ್ರೀಂಕೋರ್ಟ್ ನಿರ್ದೇಶನದಂತೆ ಮರು ತನಿಖೆ ನಡೆಸುತ್ತಿರುವ ಎಸ್‍ಐಟಿ ಈಗಾಗಲೇ ಕಂದಾಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಗಂಗಾರಾಮ್ ಬಡಿರಿಯಾ ಅವರನ್ನು ಬಂಧಿಸಿದೆ.ಇದೇ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಹಿರಿಯ ಅಧಿಕಾರಿಗಳಾದ ಬಸಪ್ಪ ರೆಡ್ಡಿ , ಐಆರ್ ಪೆರುಮಾಳ್, ಜೀಜಾ ಹರಿಸಿಂಗ್, ಮಹೇಂದ್ರ ಜೈನ್ ಹಾಗೂ ಕೆ.ಎಸ್.ಮಂಜುನಾಥ್ ವಿರುದ್ಧ ಈಗಾಗಲೇ ಎಫ್‍ಐಆರ್ ದಾಖಲಿಸಲಾಗಿದೆ.  ಯಾವುದೇ ವೇಳೆ ಒಟ್ಟು 11 ಅಧಿಕಾರಿಗಳಿಗೆ ಎಸ್‍ಐಟಿ ಸಮನ್ಸ್ ಜಾರಿ ಮಾಡಿ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.  ಎಸ್.ಎಂ.ಕೃಷ್ಣ ಮೀಸಲು ಅರಣ್ಯ ಪ್ರದೇಶವನ್ನು ಡಿನೋಟಿಫೈ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳದೆ ಅವರು ಏಕಪಕ್ಷೀಯವಾಗಿ ಈ ತೀರ್ಮಾನ ಕೈಗೊಂಡಿದ್ದಾರೆಂಬ ಆರೋಪವಿದೆ.
ಕೃಷಿಗೆ ಮೀಸಲಿಟ್ಟಿದ್ದ ಪಟ್ಟ ಭೂಮಿಯಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ಕೊಟ್ಟ ಆರೋಪ ಧರಂಸಿಂಗ್ ಅವರ ಮೇಲಿದೆ. ಈ ಇಬ್ಬರು ಮಾಜಿ ಮುಖ್ಯಮಂತ್ರಿಗಳು ತೆಗೆದುಕೊಂಡ ನಿರ್ಧಾರದಿಂದಾಗಿ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರ ಟಿ.ಜೆ.ಅಬ್ರಾಹಿಂ ಸುಪ್ರೀಂಕೋಟ್‍ಗೆ ದೂರು ಸಲ್ಲಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದ ಗಂಗರಾಮ್ ಬಡೆರಿಯಾ ಜಂತ್ಕಲ್ ಮೈನ್ಸಿಂಗ್‍ಗೆ ಗಣಿಗಾರಿಕೆ ನಡೆಸಲು 10 ಲಕ್ಷ ಹಣ ಪಡೆದಿರುವುದು ಲೋಕಾಯುಕ್ತ ತನಿಖೆಯಲ್ಲಿ ಸಾಬೀತಾಗಿತ್ತು.  ಇದರ ಜೊತೆಗೆ ಇದೇ ಪ್ರಕರಣದಲ್ಲಿ ಐಎಎಸ್, ಐಪಿಎಸ್ ಹಾಗೂ ಐಎಫ್‍ಎಸ್ ಸೇರಿದಂತೆ ಕೆಲ ಹಿರಿಯ ಅಧಿಕಾರಿಗಳು ಶಾಮೀಲಾಗಿರುವುದನ್ನು ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎಂ.ಸಂತೋಷ್ ಹೆಗಡೆ ವರದಿಯಲ್ಲಿ ಪತ್ತೆಹಚ್ಚಿದ್ದರು.
ಈಗ ಸುಪ್ರೀಂಕೋರ್ಟ್ ಮೂರು ತಿಂಗಳೊಳಗೆ ಮರು ತನಿಖೆ ನಡೆಸಿ ವರದಿ ನೀಡಬೇಕೆಂದು ಎಸ್‍ಐಟಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಸೇರಿದಂತೆ ಘಟಾನುಘಟಿಗಳಿಗೆ ತೂಗುಗತ್ತಿ ಎದುರಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin