ಕೆಪಿಸಿಸಿ ಅಧ್ಯಕ್ಷರ ನೇಮಕ : ದೆಹಲಿಯಲ್ಲಿ ಡಿ.ಕೆ.ಶಿವಕುಮಾರ್ ಪರ ಹೆಚ್ಚಿದ ಲಾಬಿ

ಈ ಸುದ್ದಿಯನ್ನು ಶೇರ್ ಮಾಡಿ

DKshi

ಬೆಂಗಳೂರು, ಮೇ 18-ತಿಂಗಳಾಂತ್ಯದಲ್ಲಿ ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ದಟ್ಟವಾಗಿದ್ದು, ಕೆಪಿಸಿಸಿ ಸಾರಥ್ಯ ಡಿ.ಕೆ.ಶಿವಕುಮಾರ್ ಹೆಗಲಿಗೇರುವುದು ಬಹುತೇಕ ಖಚಿತವಾಗಿದೆ. ಡಿ.ಕೆ.ಶಿವಕುಮಾರ್ ಪರವಾಗಿ ದೆಹಲಿ ಮಟ್ಟದಲ್ಲಿ ಲಾಬಿ ಬಹಳ ಜೋರಾಗಿದೆ. ಕರ್ನಾಟಕ ಕಾಂಗ್ರೆಸ್‍ನಲ್ಲಿ ಯಾವುದೇ ಮಹತ್ವದ ಬದಲಾವಣೆ ಮಾಡಬೇಕಾದರೆ ರಾಜ್ಯ ಕಾಂಗ್ರೆಸ್‍ಹಿರಿಯ ಮುಖಂಡ, ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರ ಅಭಿಪ್ರಾಯವನ್ನು ಹೈಕಮಾಂಡ್ ಪಡೆಯುತ್ತದೆ. ಹಾಗಾಗಿ ಡಿಕೆಶಿ ಬೆಂಬಲಿಗರು ಖರ್ಗೆ ಅವರ ಮನವೊಲಿಸುವಲ್ಲಿ ಸಫಲವಾಗಿದ್ದಾರೆ ಎಂದು ತಿಳಿದುಬಂದಿದೆ.
ಡಿಕೆಶಿ ಪರ ರಾಹುಲ್ ಗಾಂಧಿ ಬಳಿ ರಮ್ಯಾ ಲಾಬಿ ನಡೆಸಿದರೆ, ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಹಲವರು ಖರ್ಗೆ ಅವರ ಮನವೊಲಿಕೆ ಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಡಿಕೆಶಿ ಪರವಾಗಿ ಸೋನಿಯಾ ಗಾಂಧಿಯವರ ಮನವೊಲಿಸುವಂತೆ ಖರ್ಗೆ ಮತ್ತಿತರ ಮುಖಂಡರಲ್ಲಿ ಮನವಿ ಮಾಡಿದ್ದಾರೆ. ಬೇರೆ ಯಾರನ್ನೇ ಕೆಪಿಸಿಸಿಗೆ ಅಧ್ಯಕ್ಷರನ್ನಾಗಿ ಮಾಡಿದರೂ ಪಕ್ಷ ಅಧಿಕಾರಕ್ಕೆ ಬರುವುದು ಕಷ್ಟಸಾಧ್ಯವಾಗುತ್ತದೆ. ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಡಿಕೆಶಿಗೆ ಅಧ್ಯಕ್ಷ ಸ್ಥಾನ ಕೊಡಿಸುವಂತೆ ಸೋನಿಯಾಗಾಂಧಿ ಮತ್ತು ರಾಹುಲ್‍ಗಾಂಧಿಯವರ ಮನವೊಲಿಸುವಂತೆ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ.  ಕಳೆದೆರಡು ದಿನಗಳ ಹಿಂದೆ ಸದಾಶಿವನಗರದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿದ ನಾಯಕರು, ಖರ್ಗೆ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದಾಗ ಹೈಕಮಾಂಡ್ ಜೊತೆ ಮಾತುಕತೆ ನಡೆಸಿ ಡಿಕೆಶಿಗೆ ಪಟ್ಟ ಕಟ್ಟಲು ಖರ್ಗೆ ಅವರು ಸಹಮತ ವ್ಯಕ್ತಪಡಿಸಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಬಹುತೇಕ ಡಿ.ಕೆ.ಶಿವಕುಮಾರ್ ಅವರು ಅಧ್ಯಕ್ಷರಾಗಿ ನೇಮಕವಾಗುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಪ್ರಸ್ತುತ ಅಧ್ಯಕ್ಷರಾಗಿರುವ ಪರಮೇಶ್ವರ್ ಅವರು ಸುದೀರ್ಘ ಅವಧಿಗೆ ಅಧ್ಯಕ್ಷರಾಗಿದ್ದಾರೆ. ಆರು ವರ್ಷಕ್ಕೂ ಹೆಚ್ಚು ಕಾಲ ಕೆಪಿಸಿಸಿ ಅಧ್ಯಕ್ಷಗಾದಿಯಲ್ಲಿರುವ ಅವರು ಮತ್ತೊಮ್ಮೆ ತಮ್ಮನ್ನೇ ಮುಂದುವರೆಸುವಂತೆ ಮನವಿ ಮಾಡಿದ್ದಾರೆ.  ಈ ನಡುವೆ ಉತ್ತರ ಕರ್ನಾಟಕದ ಲಿಂಗಾಯತ ಮುಖಂಡರಿಗೆ ಅಧ್ಯಕ್ಷಗಾದಿ ನೀಡಬೇಕೆಂದು ಎಂ.ಬಿ.ಪಾಟೀಲ್, ಎಸ್.ಆರ್.ಪಾಟೀಲ್ ತಮ್ಮ ಹಕ್ಕು ಮಂಡಿಸಿದ್ದಾರೆ.  ದಲಿತರು, ಒಕ್ಕಲಿಗರು, ಲಿಂಗಾಯತರಲ್ಲಿ ಈ ಸ್ಥಾನ ಪಡೆಯಲು ತೀವ್ರ ಪೈಪೋಟಿ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್.ಆರ್.ಪಾಟೀಲ್ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆಯಾದರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷಗಾದಿ ನೀಡಲಾಗುವುದು ಎಂಬ ಸುದ್ದಿ ಕಳೆದ ಆರು ತಿಂಗಳಿಂದ ಪ್ರಚಲಿತದಲ್ಲಿದ್ದು, ಚುನಾವಣೆ ಸಮೀಪಿಸುವ ಸಂದರ್ಭದಲ್ಲಿ ಅದನ್ನು ನೀಡಿ ಚುನಾವಣೆಗೆ ಹೋಗುವ ಇರಾದೆ ಕಾಂಗ್ರೆಸ್‍ನದ್ದಾಗಿತ್ತು. ಈಗ ಚುನಾವಣೆಗೆ ಒಂದು ವರ್ಷ ಬಾಕಿ ಇರುವಂತೆಯೇ ಮೂರೂ ಪಕ್ಷಗಳಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಮುಂದುವರೆದಿವೆ. ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಈಗಾಗಲೇ ಅಖಾಡಕ್ಕಿಳಿದು ಕಸರತ್ತು ನಡೆಸುತ್ತಿವೆ. ಕಾಂಗ್ರೆಸ್‍ನಲ್ಲಿ ಅಧ್ಯಕ್ಷಗಾದಿಯ ಗೊಂದಲಗಳು ಮುಂದುವರೆದಿರುವ ಹಿನ್ನೆಲೆಯಲ್ಲಿ ತಿಂಗಳಾಂತ್ಯದಲ್ಲಿ ಹೈಕಮಾಂಡ್ ಈ ಗೊಂದಲಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin