ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣ : ಎಸ್ಐಟಿ ವಿಚಾರಣೆ ಎದುರಿಸಿದ ಎಚ್.ಡಿ.ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

hdk1

ಬೆಂಗಳೂರು, ಮೇ 18- ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೆ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಶೇಷ ತನಿಖಾ ತಂಡದ ಎದುರು ಇಂದು ವಿಚಾರಣೆಗೆ ಹಾಜರಾದರು. ಗಂಗಾನಗರದಲ್ಲಿರುವ ಎಸ್‍ಐಟಿ ಕಚೇರಿಯಲ್ಲಿ ತಮ್ಮ ವಕೀಲರೊಂದಿಗೆ ಹಾಜರಾದ ಅವರು, ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದರು. ವಿಚಾರಣೆಗೆ ಹಾಜರಾಗುವ ಮುನ್ನ ಸಂಭಾವ್ಯ ಪ್ರಶ್ನೆಗಳಿಗೆ ನೀಡಬೇಕಾದ ಉತ್ತರದ ಬಗ್ಗೆ ಅವರು ತಮ್ಮ ವಕೀಲರೊಂದಿಗೆ ಸಮಾಲೋಚನೆ ನಡೆಸಿ ತನಿಖಾ ತಂಡದ ಎದುರು ವಿಚಾರಣೆಗೆ ಹಾಜರಾದರು.ಜಂತಕಲ್ ಗಣಿಗಾರಿಕೆಗೆ ಪರವಾನಗಿ ನೀಡಿದ ವಿಚಾರದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಾಗಿದ್ದ ಹಾಗೂ ಪ್ರಸ್ತುತ ಕಂದಾಯ ಇಲಾಖೆ ಪ್ರಧಾನಕಾರ್ಯದರ್ಶಿಯಾಗಿರುವ, ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಅವರನ್ನು ಬಂಧಿಸಿ ವಿಶೇಷ ತನಿಖಾ ತಂಡ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ಜಂತಕಲ್ ಕಂಪೆನಿಗೆ ಪರವಾನಗಿ ನೀಡಲು ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಒತ್ತಡ ಹೇರಿದ್ದರು ಎಂದು ಹೇಳಿದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಸ್‍ಐಟಿ ತನಿಖಾಧಿಕಾರಿಗಳು ನೋಟೀಸ್ ನೀಡಿದ್ದ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಪಡೆದು ಅಧಿಕಾರಿಗಳ ಎದುರು ಇಂದು ವಿಚಾರಣೆ ಎದುರಿಸಿದರು.
ಈ ಪ್ರಕರಣದಲ್ಲಿ ಯಾವುದೇ ರೀತಿಯ ತಪ್ಪೆಸಗದಿದ್ದರೂ ಷಡ್ಯಂತ್ರದಲ್ಲಿ ಸಿಲುಕಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ವಕೀಲರ ಸಲಹೆ ಮೇರೆಗೆ ನಿರೀಕ್ಷಣಾ ಜಾಮೀನು ಪಡೆದಿರುವುದಾಗಿ ಕುಮಾರಸ್ವಾಮಿ ತಿಳಿಸಿದ್ದರು.  ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಪ್ರವಾಸದಲ್ಲಿದ್ದ ಅವರು ಎಸ್‍ಐಟಿ ಎದುರು ಇಂದು ವಿಚಾರಣೆಗೆ ಹಾಜರಾಗಿ ಅವರ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin