ತಿರುಮಲದಲ್ಲಿ ದೇವೇಗೌಡರ ಕುಟುಂಬದಿಂದ ತಿರುಪತಿ ತಿಮ್ಮಪ್ಪನಿಗೆ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

HDD
ಬೆಂಗಳೂರು, ಮೇ 18- ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು 84 ವರ್ಷಗಳನ್ನು ಪೂರ್ಣಗೊಳಿಸಿ 85ನೆ ವರ್ಷಕ್ಕೆ ಪಾದಾರ್ಪಣೆ ಮಾಡಿದರು.ನಿನ್ನೆ ಸಂಜೆ ಕುಟುಂಬ ಸದಸ್ಯರೊಂದಿಗೆ ವಿಶೇಷ ವಿಮಾನದ ಮೂಲಕ ತಿರುಪತಿಗೆ ತೆರಳಿದ್ದ ಗೌಡರು ಇಂದು ಬೆಳಗ್ಗೆ ತಿರುಮಲದಲ್ಲಿ ವೆಂಕಟೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು.ಗೌಡರ ಪತ್ನಿ ಚನ್ನಮ್ಮ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಗೌಡರ ಪುತ್ರಿಯರಾದ ಅನುಸೂಯ, ಶೈಲಜಾ, ಸೊಸೆ ಭವಾನಿ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶ ಸಿ.ಎನ್.ಮಂಜುನಾಥ್ ಅವರ ಅಳಿಯ ಶ್ರೇಯಸ್ ಅವರು ಕೂಡ ವೆಂಕಟೇಶ್ವರನ ದರ್ಶನ ಪಡೆದರು. ನಂತರ ಪದ್ಮಾವತಿ ದೇವಿ ದರ್ಶನ ಪಡೆದು ಬೆಂಗಳೂರಿಗೆ ಮರಳಿದರು.ರಾಜ್ಯದಲ್ಲಿ ತೀವ್ರವಾದ ಬರ ಪರಿಸ್ಥಿತಿಯಿರುವ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳದೆ ಇಂದು ತಮ್ಮ ನಿವಾಸದಲ್ಲಿ ಕುಟುಂಬದ ಸದಸ್ಯರೊಂದಿಗೆ ಸರಳವಾಗಿ ಆಚರಿಸಿಕೊಂಡರು.  ಅಲ್ಲಿ ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರು, ಅಭಿಮಾನಿ ಗಳು, ಹಿತೈಷಿಗಳು ಪುಷ್ಪಗುಚ್ಛ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದರು.

 

ಹಣ್ಣು-ಹಂಪಲು ವಿತರಣೆ: ದೇವೇಗೌಡರ 85ನೆ ವರ್ಷದ ಹುಟ್ಟುಹಬ್ಬದ ಅಂಗವಾಗಿ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ನಗರದ ವಿವಿಧೆಡೆ ಸಾರ್ವಜನಿಕರಿಗೆ ಹಣ್ಣು- ಹಂಪಲು ವಿತರಣೆ ಮಾಡಿದರು.ಬೆಂಗಳೂರು ಮಹಾನಗರ ಜೆಡಿಎಸ್ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ನೇತೃತ್ವದಲ್ಲಿ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಂಪಲು ಹಾಗೂ ಬ್ರೆಡ್ ವಿತರಿಸುವ ಮೂಲಕ ಗೌಡರ ಹುಟ್ಟುಹಬ್ಬವನ್ನು ಆಚರಿಸಿದರು.
ಅದೇ ರೀತಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿಯ ನಿಸರ್ಗ ಪ್ರೌಢಶಾಲೆಯಲ್ಲಿ ಬಿಬಿಎಂಪಿ ಸದಸ್ಯರಾದ ಪದ್ಮಾವತಿ ನರಸಿಂಹಮೂರ್ತಿ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಸಲಾಯಿತು.
ಗಂಗಮ್ಮ-ತಿಮ್ಮಯ್ಯ ಎಜುಕೇಷನ್ ಟ್ರಸ್ಟ್ ವತಿಯಿಂದ ಸಮಾಜ ಸೇವಕ ಎಸ್.ಟಿ.ಆನಂದ್ ನೇತೃತ್ವದಲ್ಲಿ ಶ್ರೀರಾಂಪುರದಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ, ಮಧುಮೇಹ, ರಕ್ತದೊತ್ತಡ, ಹೃದ್ರೋಗ, ಕ್ಯಾನ್ಸರ್ ತಪಾಸಣಾ ಶಿಬಿರ ನಡೆಸಲಾಯಿತು.ಮಂಡ್ಯ, ಮೈಸೂರು, ತುಮಕೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇದೇ ರೀತಿ ಆರೋಗ್ಯ ಶಿಬಿರ ಆಯೋಜಿಸಿದ್ದಲ್ಲದೆ, ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ಗೌಡರ ಹುಟ್ಟುಹಬ್ಬದ ಅಂಗವಾಗಿ ವಿತರಣೆ ಮಾಡಿದರು.
ಚಿಂತನಾ ಗೋಷ್ಠಿ: ದೇವೇಗೌಡರ ಹುಟ್ಟುಹಬ್ಬದ ಅಂಗವಾಗಿ ಇಂದು ಸಂಜೆ ನಗರದ ಭಾರತೀಯ ವಿದ್ಯಾಭವನದಲ್ಲಿ ಐಟಿ ಕನ್ನಡಿಗರ ಕೂಟ ಹಾಗೂ ಮುನ್ನೋಟ ಸಂಸ್ಥೆಗಳು, ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಸ್ತುತತೆ ಕುರಿತ ಚಿಂತನಾಗೋಷ್ಠಿ ಆಯೋಜಿಸಿವೆ.ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾಯತ್ತತೆ ಕುರಿತು ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಉಪನ್ಯಾಸ ನೀಡಲಿದ್ದಾರೆ. ಶಾಸಕ ವೈ.ಎಸ್.ವಿ.ದತ್ತ ಅವರು ರಾಷ್ಟ್ರೀಯ ಪಕ್ಷದಿಂದ ಕರ್ನಾಟಕಕ್ಕೆ ಸಂದಿರುವ ನ್ಯಾಯ-ಅನ್ಯಾಯ ಕುರಿತು ಮಾತನಾಡಲಿದ್ದಾರೆ. ಎನ್.ಎ.ಎಂ. ಇಸ್ಮಾಯಿಲ್ ಅವರು ಹಿಂದಿ ಹೇರಿಕೆಯ ಸಾಂಸ್ಕøತಿಕ ಮತ್ತು ರಾಜಕೀಯ ಪರಿಣಾಮಗಳ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ. ಈ ಚಿಂತನಾಗೋಷ್ಠಿಯಲ್ಲಿ ಗೌಡರು ಕೂಡ ಪಾಲ್ಗೊಂಡು ತಮ್ಮ ಪ್ರತಿಕ್ರಿಯೆ ನೀಡಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin