ಬೆಳ್ಳಂದೂರು ಕರೆ ಸ್ವಚ್ಚಗೊಳಿಸಲು ಕಾಲಾವಕಾಶ ಕೋರಿದ ರಾಜ್ಯ ಸರ್ಕಾರಕ್ಕೆ  ಎನ್‍ಜಿಟಿ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

Bellandur
ನವದೆಹಲಿ, ಮೇ 18-ವಿಪರೀತ ಮಲಿನಗೊಂಡು ಬೆಂಕಿಯೊಂದಿಗೆ ದಟ್ಟ ಹೊಗೆ ಭುಗಿಲೆದ್ದು ತೀವ್ರ ವಿವಾದಕ್ಕೆ ಕಾರಣವಾಗಿರುವ ಬೆಂಗಳೂರಿನ ಬೆಳ್ಳಂದೂರು ಕೆರೆಯನ್ನು ಸ್ವಚ್ಛಗೊಳಿಸಲು ರಾಜ್ಯ ಸರ್ಕಾರ ಮತ್ತಷ್ಟು ಕಾಲಾವಕಾಶ ಕೋರಿದೆ. ಸರ್ಕಾರದ ಈ ಮನವಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‍ಜಿಟಿ) ಮತ್ತೆ ಗರಂ ಆಗಿದೆ.  ಬೆಳ್ಳಂದೂರು ಕೆರೆಗೆ ಬೆಂಕಿ ಬಿದ್ದ ಪ್ರಕರಣದ ಬಗ್ಗೆ ಇಂದು ಎನ್‍ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ವಿಚಾರಣೆ ಮುಂದುವರಿಸಿದರು.  ನಗರಾಭಿವೃದ್ದಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಮತ್ತು ಹಿರಿಯ ಅಧಿಕಾರಿಗಳು ವಿಚಾರಣೆಗೆ ಹಾಜರಾಗಿ ಕೆರೆ ಸ್ವಚ್ಛಗೊಳಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಮಾಣ (ಅಫಿಡವಿಟ್) ಪತ್ರ ಸಲ್ಲಿಸಿದರು.
ಕೆರೆಯನ್ನು ಸ್ವಚ್ಚಗೊಳಿಸಲು ನೀಡಿರುವ ಕಾಲಾವಕಾಶವನ್ನು ವಿಸ್ತರಿಸಬೇಕು. ಜುಲೈವರೆಗೂ ಇದಕ್ಕೆ ಅವಕಾಶ ನೀಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದರು. ಇದರಿಂದ ಗರಂ ಆದ ನ್ಯಾ. ಸ್ವತಂತ್ರ ಕುಮಾರ್ ಕೆರೆ ಸಂರಕ್ಷಣೆಗೆ ಈ ಮೊದಲೇ ಸೂಕ್ತ ಕ್ರಮ ಕೈಗೊಂಡಿದ್ದರೆ ಇಂಥ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಈಗ ಪರಿಸ್ಥಿತಿ ಕೈಮೀರಿರುವಾಗ ನೀವು ಮತ್ತೆ ಕಾಲಾವಕಾಶ ಕೇಳುತ್ತಿದ್ದೀರಿ ಎಂದು ನಗರಾಭಿವೃದ್ದಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಈ ಪ್ರಕರಣದ ಬಗ್ಗೆ ಎನ್‍ಜಿಟಿ ಸ್ವಯಂ ದೂರು ದಾಖಲಿಸಿಕೊಂಡು ರಾಜ್ಯ ಸರ್ಕಾರ, ನಗರಾಭಿವೃದ್ದಿ ಇಲಾಖೆ ಹಾಗೂ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಈ ಹಿಂದಿನ ವಿಚಾರಣೆಗಳ ಸಂದರ್ಭದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.  ಆದಾಗ್ಯೂ ಕೆರೆ ಸಂರಕ್ಷಣೆ ಕುರಿತು ಕೆಲವು ಸಲಹೆ ಮತ್ತು ನಿರ್ದೇಶನಗಳನ್ನು ನೀಡಿದೆ. ಕೊಳಚೆ ನೀರನ್ನು ಕೆರೆಗೆ ಬಿಡಬಾರದು. ನಿಯಮಿತವಾಗಿ ಕೆರೆ ಸ್ವಚ್ಛತೆಗೆ ಮೇಲ್ವಿಚಾರಣೆ ನಡೆಸಬೇಕು. ರಾಜ್ಯ ಪರಿಸರ ನಿಯಂತ್ರಣ ಮಂಡಳಿ ಇದಕ್ಕೆ ಸಹಕಾರ ನೀಡಬೇಕು.


 

ಜಂಟಿ ತಂಡದ ಮೂಲಕ ಕಾಲಕಾಲಕ್ಕೆ ತಪಾಸಣೆ ನಡೆಸಬೇಕು. ರಾಷ್ಟ್ರೀಯ ಹಸಿರು ಮಂಡಳಿ ನೀಡಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಕೆರೆಯ ಸುತ್ತಮುತ್ತ ಇರುವ ಅಪಾರ್ಟ್‍ಮೆಂಟ್‍ಗಳು, ಫ್ಲಾಟ್‍ಗಳು ಮತ್ತು ಕಾಂಪ್ಲೆಕ್ಸ್‍ಗಳು ಕೆರೆ ನೀರನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು. ಸುತ್ತಮುತ್ತ ಇರುವ 97 ಕೈಗಾರಿಕೆಗಳು ಬಳಸುವ ನೀರಿನ ಬಗ್ಗೆ ಮಾಹಿತಿ ನೀಡಬೇಕು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜು.13ಕ್ಕೆ ಮುಂದೂಡಲಾಗಿದೆ ಎಂದು ಸೂಚಿಸಿದೆ.   ಅಲ್ಲದೆ, ಕೆರೆ ಸುತ್ತಮುತ್ತ ಇರುವ ಕೈಗಾರಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಮುಚ್ಚಿಸುವಂತೆ ಆದೇಶ ನೀಡಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin