ಡಾ.ಪಾರ್ವತಮ್ಮ ರಾಜ್‍ಕುಮಾರ್ ಅವರ ಆರೋಗ್ಯದಲ್ಲಿ ಗಣನೀಯ ಚೇತರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Parvathamma

ಬೆಂಗಳೂರು, ಮೇ 19- ಉಸಿರಾಟದ ತೊಂದರೆಯಿಂದ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವರನಟ ಡಾ.ರಾಜ್‍ಕುಮಾರ್ ಅವರ ಧರ್ಮಪತ್ನಿ ಪಾರ್ವತಮ್ಮ ರಾಜ್‍ಕುಮಾರ್ ಅವರ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡಿದೆ. ಪಾರ್ವತಮ್ಮ ಅವರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರಿಗೆ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ನಿನ್ನೆಗಿಂತ ಇಂದು ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.  ಇಂದು ಬೆಳಗ್ಗೆ ಅವರಿಗೆ ಡಯಾಲಿಸಿಸ್ ಮಾಡಲಾಗಿದ್ದು, ಬಿಪಿ, ಶುಗರ್ ನಿಯಂತ್ರಣದಲ್ಲಿದೆ ಎಂದು ವೈದ್ಯರಾದ ನರೇಶ್‍ಶೆಟ್ಟಿ, ಡಾ.ಸಂಜಯ್‍ಕುಲಕರ್ಣಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. 
ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ನಿನ್ನೆಗಿಂತ ಇಂದು ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು, ಅವರಿಗೆ ನೀಡಿರುವ ಜೀವರಕ್ಷಕಗಳನ್ನು ಹಂತ ಹಂತವಾಗಿ ಕಡಿಮೆ ಮಾಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದರು.  ಮುಂದಿನ 24 ಗಂಟೆಗಳ ಕಾಲ ತೀವ್ರ ನಿಗಾವಹಿಸಿ ಚಿಕಿತ್ಸೆ ಮುಂದುವರೆಸಲಾಗುವುದು ಎಂದು ಹೇಳಿದರು.  ಪಾರ್ವತಮ್ಮ ಅವರ ಪುತ್ರ ರಾಘವೇಂದ್ರರಾಜ್‍ಕುಮಾರ್ ಮಾತನಾಡಿ, ನಿನ್ನೆಗಿಂತ ಇಂದು ಅಮ್ಮ ಸುಧಾರಿಸಿದ್ದಾರೆ. ನಾನು ನೋಡಲು ಹೋದಾಗ ದೊಡ್ಡವನೆಲ್ಲಿ, ಚಿಕ್ಕವನೆಲ್ಲಿ ಎಂದು ಕೇಳಿದರು. ಮನೆಗೆ ಹೋಗೋಣ ಎಂದು ಹಾಸಿಗೆಯಿಂದ ಏಳಲು ಪ್ರಯತ್ನಿಸಿದರು. ಅಳವಡಿಸಿರುವ ಈ ಜೀವರಕ್ಷಕಗಳನ್ನು ತೆಗೆಸು ಎಂದು ಹೇಳಿದರು.

 

ನಮ್ಮ ಅಮ್ಮ ಪ್ರತಿ ವಿಷಯದಲ್ಲೂ ಹೋರಾಟ ಮಾಡುತ್ತಲೇ ಬೆಳೆದವರು. ಆರೋಗ್ಯ ವಿಚಾರದಲ್ಲೂ ಕೂಡ ಅವರು ಹೋರಾಟ ಮಾಡುತ್ತಿದ್ದಾರೆ. ಔಟಾಫ್‍ಡೇಂಜರ್ ಎಂದು ಹೇಳಲು ಬರುವುದಿಲ್ಲ. ವೆಂಟಿಲೇಟರ್ ತೆಗೆದು ಅವರು ಸ್ವತಂತ್ರವಾಗಿ ಉಸಿರಾಡಲು ಶುರು ಮಾಡಿದರೆ ಆಗ ನಮಗೆ ನೆಮ್ಮದಿ ಸಿಗುತ್ತದೆ. ಈಗ ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಾರೆ. ಅವರು ಸುಧಾರಣೆ ಆಗುವ ವಿಶ್ವಾಸ ನಮಗಿದೆ ಎಂದರು.  ಶಿವಣ್ಣ, ಅಪ್ಪು ಎಲ್ಲ ಬಂದು ನೋಡಿಕೊಂಡು ಹೋಗಿದ್ದಾರೆ. ಅಮ್ಮನ ಆರೋಗ್ಯ ಸುಧಾರಿಸಲಿ ಎಂದು ಸಾಕಷ್ಟು ಜನ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಂದರ್ಶಕರ ಸಂಖ್ಯೆ ಕಡಿಮೆ ಮಾಡಿ ಎಂದು ವೈದ್ಯರ ಸಲಹೆ ಹಿನ್ನೆಲೆಯಲ್ಲಿ ಹೆಚ್ಚು ಜನರಿಗೆ ಅವಕಾಶ ನೀಡಿಲ್ಲ ಎಂದು ತಿಳಿಸಿದರು.  ಡಾ.ರತ್ನ, ಡಾ.ನಳಿನಾಕಿಲಾರಿ, ಡಾ.ಮಹೇಶ್ ಸೇರಿದಂತೆ ಹಲವು ವೈದ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin