ಚೆನ್ನಸಂದ್ರ, ರಾಮೋಹಳ್ಳಿಯಲ್ಲಿ ಘರ್ಜಿಸಿದ ಜೆಸಿಬಿಗಳು, 210 ಎಕರೆ ಒತ್ತುವರಿ ತೆರವು

ಈ ಸುದ್ದಿಯನ್ನು ಶೇರ್ ಮಾಡಿ
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಬೆಂಗಳೂರು, ಮೇ 20- ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯವನ್ನು ಮುಂದು ವರೆಸಿರುವ ಬೆಂಗಳೂರು ನಗರ ಜಿಲ್ಲಾಡಳಿತ ಇಂದು ಬೆಳ್ಳಂಬೆಳಗ್ಗೆ ನೂರಾರು ಕೋಟಿ ರೂ. ಮೌಲ್ಯದ ಬೆಲೆಬಾಳುವ ಭೂಮಿಯನ್ನು ನಿರ್ದಾಕ್ಷಿಣ್ಯವಾಗಿ ವಶಪಡಿಸಿಕೊಂಡಿತು. ಜಿಲ್ಲಾಧಿಕಾರಿ ವಿ.ಶಂಕರ್ ನೇತೃತ್ವದ ಅಧಿಕಾರಿಗಳ ತಂಡ ಬೆಂಗಳೂರು ದಕ್ಷಿಣ ಹಾಗೂ ಉತ್ತರ ತಾಲೂಕಿನಲ್ಲಿ ಕಾರ್ಯಾಚರಣೆ ನಡೆಸಿದರು. ಬೆಂಗಳೂರಿನ ದಕ್ಷಿಣ ತಾಲೂಕಿನ ಚನ್ನಸಂದ್ರ ಗ್ರಾಮದ ಆರ್‍ಎನ್‍ಎಸ್ ಕಾಲೋನಿ ಬಳಿ ಸರ್ವೆ ನಂ.22ರಲ್ಲಿ 40 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಯಿತು.ಚನ್ನಸಂದ್ರದ ಕೃಷ್ಣಪ್ಪ , ಬಿ.ಗೋಪಾಲ್, ಮುನಿಶಾಮಪ್ಪ ಮತ್ತಿತರರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿ ಮನೆ ಕಟ್ಟಿಕೊಂಡಿದ್ದರು. ಜಿಲ್ಲಾಧಿಕಾರಿ ವಿ.ಶಂಕರ್ ನೇತೃತ್ವದ ತಂಡ ತೆರವುಗೊಳಿಸಲು ಬಂದಿದ್ದನ್ನು ಕಂಡು ಸ್ಥಳೀಯರು ತೀವ್ರ ಪ್ರತಿರೋಧ ಒಡ್ಡಿದರು. ಯಾವುದೇ ಕಾರಣಕ್ಕೂ ಮನೆ ಒಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.  ಆದರೂ ಅಧಿಕಾರಿಗಳ ತಂಡ ನಿರ್ದಾಕ್ಷಿಣ್ಯವಾಗಿ ಒತ್ತುವರಿಯನ್ನು ತೆರವುಗೊಳಿಸಿದರು. ಅದೇ ರೀತಿ ಬೆಂಗಳೂರು ಉತ್ತರ ತಾಲೂಕಿನ ರಾವತ್‍ಹಳ್ಳಿಯಲ್ಲಿ 30 ಎಕರೆ ಸರ್ಕಾರಿ ಭೂಮಿಯನ್ನು ತೆರವುಗೊಳಿಸಲಾಯಿತು.

ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯ ಮಟ್ನಹಳ್ಳಿ ಗ್ರಾಮದ ಸರ್ವೆ ನಂ.81ರಲ್ಲಿ 1.16ಎಕರೆ, ಗೋಳಿಮಂಗಲ ಗ್ರಾಮದ ಸರ್ವೆ ನಂ.22ರಲ್ಲಿ 6.03, ಬಿ.ಹೊಸಹಳ್ಳಿ ಸರ್ವೆ ನಂ.37ರಲ್ಲಿ 1.02, ಅತ್ತಿಬೆಲೆ ಹೋಬಳಿಯ ಮಾಯಸಂದ್ರದ ಸರ್ವೆ ನಂ.255ರಲ್ಲಿ 1.20 ಎಕರೆ ಸರ್ಕಾರಿ ಕೆರೆ ಒತ್ತುವರಿ.
ಹಿಚ್ಚಂಗೂರು ಗ್ರಾಮದ ಸರ್ವೆ ನಂ.70ರಲ್ಲಿ 0.16 ಗುಂಟೆ ಸರ್ಕಾರಿ ಗುಂಡುತೋಪು, ಸೊಪ್ಪಹಳ್ಳಿ ಸರ್ವೆ ನಂ.16ರಲ್ಲಿ 1.04 ಸರ್ಕಾರಿ ಕೆರೆ, ಹಾರಗದ್ದೆ ಸರ್ವೆ ನಂ.105ರಲ್ಲಿ 0.20ಗುಂಟೆ ಗುಂಡುತೋಪು ಜಾಗವನ್ನು ವಶಪಡಿಸಿಕೊಳ್ಳಲಾಯಿತು.

ಕೆಂಗೇರಿಯ ಸರ್ವೆ ನಂ.137ರಲ್ಲಿ ಒಟ್ಟು 160 ಎಕರೆ ಒತ್ತುವರಿ ಭೂಮಿಯನ್ನು ತೆರವುಗೊಳಿಸಿ ಸರ್ಕಾರದ ಸ್ವತ್ತೆಂದು ಫಲಕ ಅಳವಡಿಸಲಾಯಿತು.
ಒಟ್ಟಾರೆ ಇಂದು ಕೋಟ್ಯಂತರ ಮೌಲ್ಯದ ನೂರಾರು ಎಕರೆ ಭೂಮಿಯನ್ನು ಜಿಲ್ಲಾಡಳಿತ ನಿರ್ದಾಕ್ಷಿಣ್ಯವಾಗಿ ವಶಪಡಿಸಿಕೊಂಡಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin