‘ದುರ್ಯೋಧನ, ದುಶ್ಯಾಸನರಿಂದ ಮಹಿಳಾ ಪಾಲಿಕೆ ಸದಸ್ಯರನ್ನ ರಕ್ಷಿಸಿ’ : ಎನ್.ಆರ್.ರಮೇಶ್

ಈ ಸುದ್ದಿಯನ್ನು ಶೇರ್ ಮಾಡಿ

NRR

ಬೆಂಗಳೂರು, ಮೇ 20-ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಬೆಂಗಳೂರಿನ ಬಿಹಾರ ಇದ್ದ ಹಾಗೆ. ಇಲ್ಲಿನ ಶಾಸಕ ಮುನಿರತ್ನ ದುರ್ಯೋಧನನಂತೆ ಮತ್ತು ಆತನ ಬಲಗೈ ಭಂಟರಂತಿರುವ ಪಾಲಿಕೆ ಸದಸ್ಯರಾದ ಜಿ.ಕೆ.ವೆಂಕಟೇಶ್ ಹಾಗೂ ವೇಲುನಾಯ್ಕರ್ ಕೀಚಕ, ದುಶ್ಯಾಸನರಿದ್ದಂತೆ. ಇಂಥವರಿಂದ ಮಹಿಳಾ ಪಾಲಿಕೆ ಸದಸ್ಯರಿಗೆ ರಕ್ಷಣೆ ದೊರಕಿಸಿಕೊಡಬೇಕು ಎಂದು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.ಶಾಸಕ ಹಾಗೂ ಆತನ ಬೆಂಬಲಿಗರು ಪದೇ ಪದೇ ಕ್ಷೇತ್ರದಲ್ಲಿರುವ ವಿವಿಧ ಪಕ್ಷಗಳ ಮಹಿಳಾ ಪಾಲಿಕೆ ಸದಸ್ಯರ ಮೇಲೆ ಹಲ್ಲೆ ನಡೆಸಿಕೊಂಡೇ ಬಂದಿದ್ದಾರೆ. ಸ್ವತಃ ಕಾಂಗ್ರೆಸ್ ಪಕ್ಷದ ಸದಸ್ಯೆಯಾದ ಆಶಾ ಸುರೇಶ್, ಬಿಜೆಪಿಯ ಮಮತಾ ವಾಸುದೇವರಾವ್ ಹಾಗೂ ಜೆಡಿಎಸ್‍ನ ಮಂಜುಳಾ ನಾರಾಯಣಸ್ವಾಮಿ ಅವರ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸಲಾಗುತ್ತಿದೆ.ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ತಾವು ಮಹಿಳಾ ಸದಸ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಶಾಸಕ ಮತ್ತು ಆತನ ಬೆಂಬಲಿಗರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.  ಸ್ವತಃ ನಿರ್ಮಾಪಕರಾಗಿರುವ ಮುನಿರತ್ನ ಅವರು ಕೆಲವು ದಿನಗಳ ಹಿಂದೆ ಕುರುಕ್ಷೇತ್ರ ಹೆಸರಿನ ಚಲನಚಿತ್ರ ನಿರ್ಮಿಸುವುದಾಗಿ ಘೋಷಣೆ ಮಾಡಿದ್ದರು. ಪ್ರಸ್ತುತ ಆರ್.ಆರ್.ನಗರ ಪರಿಸ್ಥಿತಿ ಗಮನಿಸಿದರೆ ಕುರುಕ್ಷೇತ್ರ ಚಿತ್ರದಲ್ಲಿ ಶಾಸಕರೇ ದುರ್ಯೋಧನನ ಪಾತ್ರ ನಿರ್ವಹಿಸಬೇಕು ಹಾಗೂ ಆತನ ಬಲಗೈ ಭಂಟರಿಗೆ ಕೀಚಕ, ದುಶ್ಯಾಸನ ಪಾತ್ರ ನೀಡುವುದು ಒಳಿತು. ಇಂತಹ ಮಹಿಳಾ ವಿರೋಧಿಗಳ ವಿರುದ್ಧ ನೀವು ಕ್ರಮಕೈಗೊಳ್ಳದಿದ್ದರೆ ಖುದ್ದು ಧೃತರಾಷ್ಟ್ರನ ಪಾತ್ರ ನಿರ್ವಹಿಸಿ ಎಂದು ರಮೇಶ್ ದೂರಿನಲ್ಲಿ ಒತ್ತಾಯಿಸಿದ್ದಾರೆ.

ವಿಷ ಕುಡಿಯುತ್ತೇವೆ:

ಶಾಸಕ ಮುನಿರತ್ನ ವರ್ತನೆ ವಿರುದ್ಧ ಸಿಡಿದೆದ್ದಿರುವ ಕಾಂಗ್ರೆಸ್ ಸದಸ್ಯೆ ಆಶಾ ಸುರೇಶ್, ಬಿಜೆಪಿ ಸದಸ್ಯೆ ಮಮತಾ ವಾಸುದೇವರಾವ್ ಹಾಗೂ ನಿನ್ನೆ ಲಗ್ಗೆರೆ ಕಾರ್ಯಕ್ರಮದಲ್ಲಿ ಅವಮಾನ ಅನುಭವಿಸಿದ ಜೆಡಿಎಸ್‍ನ ಮಂಜುಳಾ ಅವರ ಪತಿ ನಾರಾಯಣಸ್ವಾಮಿ ಮತ್ತಿತರರು ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಮುನಿರತ್ನ ಮತ್ತು ಆತನ ಬೆಂಬಲಿಗರಿಂದ ಮಹಿಳಾ ಸದಸ್ಯರ ಮೇಲೆ ಆಗುತ್ತಿರುವ ದಬ್ಬಾಳಿಕೆಯನ್ನು ನಿಲ್ಲಿಸುವಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ.

ಆದರೆ ಮಠದಲ್ಲಿ ಶ್ರೀಗಳು ಇಲ್ಲದ ಕಾರಣ ನಾಳೆ ಮತ್ತೆ ಮಠಕ್ಕೆ ಬರಲು ತೀರ್ಮಾನಿಸಿರುವ ಈ ಮಹಿಳಾ ಮಣಿಗಳು ನಮಗೆ ನ್ಯಾಯ ಸಿಗದಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.  ಈ ಹಿಂದೆ ನನಗೆ ಮುನಿರತ್ನ ಕಿರುಕುಳ ನೀಡಿದ್ದಾಗ ಶ್ರೀಗಳೇ ಕರೆದು ಬುದ್ಧಿ ಹೇಳಿದ್ದರು. ಆ ಸಂದರ್ಭದಲ್ಲಿ ನಯವಂತಿಕೆ ಪ್ರದರ್ಶಿಸಿದ್ದ ಶಾಸಕರು, ಮತ್ತೆ ತಮ್ಮ ಹಳೇ ಚಾಳಿ ಮುಂದುವರೆಸಿದ್ದಾರೆ ಎಂದು ಆಶಾಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಸದಸ್ಯೆ ಮಂಜುಳಾ ಅವರ ಪತಿ ನಾರಾಯಣಸ್ವಾಮಿ ಮಾತನಾಡಿ, ನಿನ್ನೆ ನಡೆದ ಮುಖ್ಯಮಂತ್ರಿ ಅಧ್ಯಕ್ಷತೆಯ ಕಾರ್ಯಕ್ರಮದಲ್ಲೇ ಶಾಸಕರ ಬೆಂಬಲಿಗರು ನನ್ನ ಪತ್ನಿ ಮಂಜುಳಾ ಅವರ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಈ ಘಟನೆಯಿಂದ ಅಸ್ವಸ್ಥಗೊಂಡಿರುವ ಮಂಜುಳಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು.

ಒಕ್ಕಲಿಗ ಜನಾಂಗದ ವಿರುದ್ಧ ಶಾಸಕ ಮುನಿರತ್ನ ಹಗೆ ಸಾಧಿಸುತ್ತಿದ್ದಾನೆ. ಇಂತಹ ನಾಲಾಯಕ್ ಶಾಸಕರ ವಿರುದ್ಧ ಸಿಎಂ ಕ್ರಮಕೈಗೊಳ್ಳಬೇಕು ಹಾಗೂ ಮುನಿರತ್ನ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin