ಈ ವರ್ಷದ ಅಂತ್ಯಕ್ಕೆ ಚುನಾವಣೆ ನಡೆಯುವ ಸಾಧ್ಯತೆ : ಹೆಚ್‍ಡಿಕೆ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--01

ತುಮಕೂರು, ಮೇ 23-ರಾಜ್ಯದಲ್ಲಿ 2017ರ ಅಂತ್ಯಕ್ಕೆ ಚುನಾವಣೆ ಎದುರಾಗುವ ಎಲ್ಲಾ ಸಾಧ್ಯತೆಗಳಿದ್ದು,ಜನರು ಈ ಹಿಂದೆ ಮಾಡಿದ ತಪ್ಪನ್ನು ಮಾಡದೆ ಎಚ್ಚೆತ್ತುಕೊಳ್ಳಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.  ನಗರದ ಅಶೋಕ ರಸ್ತೆಯ ಪಕ್ಷದ ನವೀಕೃತ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳ ರಾಜ್ಯ ಸರಕಾರದ ಆಡಳಿತದಿಂದ ಜನ ಬೇಸತ್ತಿದ್ದಾರೆ.ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಚ್ಚಾಟಗಳು ಚುನಾವಣೆ ಸೃಷ್ಟಿಸುವ ಎಲ್ಲಾ ಸಾಧ್ಯತೆಗಳು ಇವೆ. ಹಾಗಾಗಿ ಕಾರ್ಯಕರ್ತರು,ಜನರ ಬಳಿಗೆ ಈ ಬಾರಿ ಜೆಡಿಎಸ್ ಪಕ್ಷಕ್ಕೆ ಅವಕಾಶ ನೀಡುವಂತೆ ಅವರ ಮನವೊಲಿಸುವ ಕೆಲಸ ಮಾಡಬೇಕೆಂದರು.ಕಳೆದ 15 ದಿನಗಳಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸುಮಾರು 6500 ಕಿ.ಮಿ. ಪ್ರವಾಸ ಮಾಡಿದ್ದು,ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳು ಬರದಿಂದ ತತ್ತರಿಸಿ ಹೋಗಿವೆ. ಕಲ್ಪತರು ನಾಡು ಎಂದು ಕರೆಯಲು ಕಾರಣವಾದ ತೆಂಗು ತೋಟವೂ ಒಣಗಿರುವುದನ್ನು ನೋಡಿದರೆ ನಮ್ಮ ಕಣ್ಣಲ್ಲಿಯೂ ನೀರು ತರಿಸುತ್ತದೆ. ಒಂದೆಡೆ ಮಳೆಯಿಲ್ಲದೆ ಗಿಡಗಳು ಒಣಗುತ್ತಿದ್ದರೆ,ಇನ್ನೊಂದೆಡೆ ಬೆಂಬಲ ಬೆಲೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ ಎಂದರು.

ಮಾಜಿ ಪ್ರಧಾನಿಯಾದ ಹೆಚ್.ಡಿ.ದೇವೇಗೌಡರು,ನಾಡಿನ ಹಲವು ರೈತ ಮುಖಂಡರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಬೆಂಬಲಬೆಲೆ ನಿಗಧಿ ಮತ್ತು ರೈತರ ಸಾಲ ಮನ್ನಾಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.ಆದರೆ ಕೈಗಾರಿ ಕೋದ್ಯಮಿಗಳ 13 ಲಕ್ಷ ಕೋಟಿ ಎನ್.ಪಿ.ಎ ಮನ್ನಾ ಮಾಡಿದ್ದಾರೆ.ರಾಜ್ಯ ಸರಕಾರವೂ ರೈತರ ಸಾಲ ಮನ್ನಾ ಮಾಡಲು ಮುಂದಾಗುತ್ತಿಲ್ಲ.ಹಾಗಾಗಿ ರೈತರು ಒಮ್ಮೆ ಜನತಾದಳ ಜ್ಯಾತ್ಯಾತೀತ ಪಕ್ಷವನ್ನು ಅಧಿಕಾರಕ್ಕೆ ತಂದರೆ ನಿಮ್ಮ ಎಲ್ಲಾ ಸಾಲಗಳನ್ನು ಮನ್ನಾ ಮಾಡಲಾಗುವುದು ಎಂಬ ಭರಸವೆಯನ್ನು ಹೆಚ್.ಡಿ.ಕೆ.ನೀಡಿದರು.

ಹತ್ತು ವರ್ಷಗಳ ಹಿಂದಿನ 150 ಕೋಟಿ ಕಪ್ಪ ಪಡೆದ ಕೇಸು ಮತ್ತು ಜಂತಕಲ್ಲು ಮೈನಿಂಗ್ ಪ್ರಕರಣದಲ್ಲಿ ನನ್ನನ್ನು ಸಿಕ್ಕಿಸಲು ಇನ್ನಿಲ್ಲದ ಪ್ರಯತ್ನವನ್ನು ರಾಜ್ಯ ಸರಕಾರ ನಡೆಸುತ್ತಿದೆ.ಇದಕ್ಕೆ ಕಾರ್ಯಕರ್ತರು ಹೆದರುವ ಅಗತ್ಯವಿಲ್ಲ.ಎರಡು ಪ್ರಕರಣಗಳಲ್ಲಿ ನಾನು ತಪ್ಪು ಮಾಡಿಲ್ಲ.ನನ್ನನ್ನು ಯಾರು ಬಂದರೂ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.  ದಾಖಲಾತಿ ಇಲ್ಲದೆ ಹೇಗೆ ನನ್ನ ಮೇಲೆ ಆರೋಪ ಮಾಡಿದರು. ಇದರ ಹಿಂದಿನ ವ್ಯಕ್ತಿ ಯಾರು ಎಂಬುದನ್ನು ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಯಡಿಯೂರಪ್ಪ ಅವರನ್ನು ನಂಬಿ ಏನಾದರೂ ವೀರಶೈವರು ಬಿಜೆಪಿಗೆ ಮತ ಹಾಕಿದರೆ,ತಮ್ಮ ಕೈಯಾರೆ ಅಧಿಕಾರವನ್ನು ಬೇರೆಯವರಿಗೆ ಕೊಟ್ಟಂತೆ,ಇದಕ್ಕೆ ಈ ಹಿಂದಿನ ಬಿಜೆಪಿ ನಡೆವಳಿಕೆಗಳೇ ಸಾಕ್ಷಿ ಎಂದರು.  ಜಿಲ್ಲಾ ಜೆಡಿಎಸ್ ಪಕ್ಷದ ಅಧ್ಯಕ್ಷ ಸಿ.ಚನ್ನಿಗಪ್ಪ ಮಾತನಾಡಿ,ಕಾರ್ಯಕರ್ತರು ಜಾತಿ ಮತ್ತು ಅಹಂಕಾರವನ್ನು ಬಿಟ್ಟು ಕೆಲಸ ಮಾಡಿದರೆ 2018ರ ಚುನಾವಣೆಯಲ್ಲಿ ಮತ್ತೊಮ್ಮೆ ಹೆಚ್.ಡಿ.ಕೆ. ಅವರನ್ನು ಮುಖ್ಯಮಂತ್ರಿ ಮಾಡಬಹುದು. ನಾನು ಯಾವುದೇ ಅಧಿಕಾರದ ಆಸೆಗೆ ಇಲ್ಲಿಗೆ ಬಂದಿಲ್ಲ.ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕೆಂಬುದೇ ನನ್ನ ಎಕೈಕ ಗುರಿ ಎಂದರು.

ಜಿ.ಪಂ.ಅಧ್ಯಕ್ಷೆ ಲತಾ, ಮಾಜಿ ಸಚಿವರಾದ ಸತ್ಯನಾರಾಯಣ, ಡಿ.ನಾಗರಾಜಯ್ಯ, ಶಾಸಕರಾದ ಎಸ್.ಆರ್.ಶ್ರೀನಿವಾಸ್, ಎಮ್.ಟಿ.ಕೃಷ್ಣಪ್ಪ, ಸುಧಾಕರಲಾಲ್, ವಿಧಾನಪರಿಷತ್ ಸದಸ್ಯರಾದ ಬೆಮಲ್ ಕಾಂತರಾಜು, ಚೌಡರೆಡ್ಡಿ ತೂಪಲ್ಲಿ, ರಮೇಶ್‍ಬಾಬು, ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಮತ್ತಿತರರು ಹಾಜರಿದ್ದರು.

Facebook Comments

Sri Raghav

Admin