ನಿಯಂತ್ರಣ ತಪ್ಪಿ ಉರುಳಿ ಬಿದ್ದ ಕಾರು, ಮೂವರು ಎಂಜಿನಿಯರ್ ವಿದ್ಯಾರ್ಥಿಗಳು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

accident

ಕಲಬುರಗಿ, ಮೇ 23– ಚಾಲಕನ ನಿಯಂತ್ರಣ ತಪ್ಪಿ ಕಾರು ಉರುಳಿ ಬಿದ್ದು ಮೂವರು ಎಂಜಿನಿಯರ್ ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಶರಣ ಬಸಪ್ಪ (22), ಪ್ರತ್ಯಕ್ಷ (22), ಪ್ರತಿಮಾ (23) ಮೃತಪಟ್ಟಿದ್ದು, ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ನಗರದ ಹೊರವಲಯದ ಗೀತಾನಗರ ಬಳಿ ನಿನ್ನೆ ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿ ಹಳ್ಳಕ್ಕೆ ಉರುಳಿ ಬಿದ್ದಿದೆ.ಮೃತ ದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತಪಟ್ಟ ಮೂರು ಮಂದಿಯೂ ನಗರ ನಿವಾಸಿಗಳೇ. ಒಟ್ಟು ಐದು ಮಂದಿ ಗೀತಾ ನಗರದ ಬ್ರಹ್ಮಕುಮಾರಿ ತಾಣಕ್ಕೆ ಹೋಗಿ ವಾಪಸು ಬರುವಾಗ ಈ ದುರ್ಘಟನೆ ನಡೆದಿದೆ.  ಗಾಯಗೊಂಡವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶ್ವ ವಿದ್ಯಾಲಯ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ಪಿಡಿಎ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಸ್ನೇಹಿತರ ಮರಣಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಪೋಷಕರ ದುಃಖದ ಕಟ್ಟೆ ಒಡೆದಿದ್ದು, ವಿದ್ಯಾರ್ಥಿಗಳೇ ಸಮಾಧಾನ ಪಡಿಸುತ್ತಿದ್ದುದು ಕಂಡುಬಂದಿತು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin