ಒಳಜಗಳದಿಂದ ಪಕ್ಷಕ್ಕೆ ಹಾನಿಯುಂಟಾದರೆ ಸಹಿಸಿಕೊಳ್ಳುವುದಿಲ್ಲ : ‘ಕೈ’ ನಾಯಕರಿಗೆ ಹೈಕಮಾಂಡ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Vebugopal

ಬೆಂಗಳೂರು, ಮೇ 24-ಭಿನ್ನಮತ, ಬಂಡಾಯ, ಒಳಜಗಳಗಳು ತೀವ್ರವಾಗಿರುವ ಬೆಳಗಾವಿ ಮತ್ತು ಗುಲ್ಬರ್ಗಾ ಜಿಲ್ಲೆಗಳ ಕಂದಾಯ ವಿಭಾಗದ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಕಟ್ಟೆಚ್ಚರಿಕೆ ರವಾನಿಸಿದೆ. ಕಂದಾಯ ವಿಭಾಗವಾರು ಜಿಲ್ಲಾ ಮುಖಂಡರ ಸಭೆ ನಡೆಸುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಕಾಂಗ್ರೆಸ್ ನಾಯಕರ ಒಳಜಗಳದಿಂದ ಪಕ್ಷಕ್ಕೆ ಹಾನಿಯಾಗುವುದೇ ಆದರೆ ಅಂತಹ ನಾಯಕರನ್ನು ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.ಬೆಳಗಾವಿ, ಗುಲ್ಬರ್ಗಾ, ಬಳ್ಳಾರಿ, ರಾಯಚೂರು, ಹುಬ್ಬಳ್ಳಿ, ಧಾರವಾಡ ಜಿಲ್ಲೆಗಳ ಕಾಂಗ್ರೆಸ್ ನಾಯಕರ ನಡುವೆ ಪರಸ್ಪರ ಭಿನ್ನಮತವಿರುವುದು ಕಂಡು ಬಂದಿದೆ. ಬಳ್ಳಾರಿ, ಬೆಳಗಾವಿ ಜಿಲ್ಲೆಯಲ್ಲಿ ನಾಯಕರ ಸ್ವಪ್ರತಿಷ್ಠೆ ಹೆಚ್ಚಾಗಿ ಬಣ ರಾಜಕೀಯಗಳು ಮಿತಿ ಮೀರಿದೆ.  ಇದನ್ನು ಗುರುತಿಸಿರುವ ವೇಣುಗೋಪಾಲ್ ಜಿಲ್ಲಾ ನಾಯಕರಿಗೆ ಕಠಿಣ ಶಬ್ಧಗಳಲ್ಲಿ ಎಚ್ಚರಿಕೆ ನೀಡಿದ್ದು, ಎಲ್ಲ ಭಿನ್ನಮತಗಳನ್ನು ಬದಿಗಿಟ್ಟು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ನಿಮ್ಮ ಒಳಜಗಳದಿಂದ ಕಾಂಗ್ರೆಸ್ಸಿನ ವರ್ಚಸ್ಸಿಗೆ ಹಾನಿಯಾದರೆ ಶಿಸ್ತು ಕ್ರಮ ಜರುಗಿಸುವುದು ಅನಿವಾರ್ಯ ಎಂದು ಹೇಳಿದ್ದಾರೆ.

ಭಿನ್ನಾಭಿಪ್ರಾಯಗಳು ಎಲ್ಲಾ ಕಾಲದಲ್ಲೂ, ಎಲ್ಲ ಪಕ್ಷಗಳಲ್ಲೂ ಸರ್ವೇಸಾಮಾನ್ಯ. ಆದರೆ ಅವರಿಂದ ಪಕ್ಷದ ಗೆಲುವಿಗೆ ಅಡ್ಡಿಯಾಗಬಾರದು. ಚುನಾವಣೆ ಎದುರಾದಾಗ ಒಬ್ಬರನ್ನೊಬ್ಬರು ಕಾಲೆಳೆದು ಸೋಲು ಕಾಣುವುದನ್ನು ಮೊದಲು ಬಿಡಿ. ಕಾಂಗ್ರೆಸ್ ಸೋತರೆ ಪಕ್ಷಕ್ಕೂ ನಷ್ಟ, ನಾಯಕರಿಗೂ ನಷ್ಟ, ಕಾರ್ಯಕರ್ತರು, ಜನಸಾಮಾನ್ಯರೂ ತೊಂದರೆಗೀಡಾಗುತ್ತಾರೆ. ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿ ಪಕ್ಷವನ್ನು ಗೆಲ್ಲಿಸಿ. ಮೊದಲು ಅಧಿಕಾರ ನಮ್ಮ ಕೈಗೆ ಬರಲಿ. ಆನಂತರ ಮುಂದಿನ 5 ವರ್ಷಗಳ ಕಾಲ ಬೇಕಿದ್ದರೆ ಒಳಜಗಳ ಮುಂದುವರೆಸಿ. ನಿಮ್ಮ ಹಠ ಸಾಧನೆ, ಸ್ವಪ್ರತಿಷ್ಠೆಗಳು ಪಕ್ಷದ ಆಂತರಿಕ ವಿಷಯಗಳಾಗಿರಲಿ. ನಮ್ಮ ನಮ್ಮಲ್ಲಿ ನಾವು ಎಷ್ಟೇ ಜಗಳವಾಡಿದರೂ ಅದು ಹೊರ ಜಗತ್ತಿಗೆ ತಿಳಿಯದಂತೆ ಎಚ್ಚರವಹಿಸಿ ಎಂದರು.

ಕಾಂಗ್ರೆಸನ್ನು ಸೋಲಿಸಲು ಯಾವ ಪಕ್ಷದಿಂದಲೂ ಸಾಧ್ಯವಿಲ್ಲ. ನಮ್ಮಲ್ಲೇ ನಾವು ಜಗಳವಾಡಿದರೆ ಮಾತ್ರ ಸೋಲಿಗೆ ಕಾರಣವಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ. ಮೊದಲು ಗೆದ್ದು ಅಧಿಕಾರ ಹಿಡಿಯುವ ಕಡೆ ಗಮನ ಕೊಡಿ. ನಂತರ ಒಳಜಗಳ, ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಪರಿಹರಿಸೋಣ ಎಂದು ಹೇಳಿದ್ದಾರೆ.  ಬೆಳಗಾವಿ ಜಿಲ್ಲೆಯ ನಾಯಕರ ಸಭೆಯಲ್ಲಿ ವೇಣುಗೋಪಾಲ್ ಬುದ್ಧಿಮಾತಿಗೆ ನಾಯಕರು ಕಿವಿಗೊಡದೆ ತಮ್ಮದೇ ವಾದ ಮುಂದಿಟ್ಟಾಗ ಸಿಟ್ಟಾದ ವೇಣುಗೋಪಾಲ್ ಅವರು, ಯಾರು ಎಷ್ಟೇ ದೊಡ್ಡವರಾದರೂ ಪಕ್ಷದ ಶಿಸ್ತಿಗೆ ಬದ್ಧರಾಗಿರಲೇಬೇಕು. ಪಕ್ಷವನ್ನು ಮೀರಿ ಮಾತನಾಡಲು ಯಾರಿಗೂ ಅವಕಾಶ ಕೊಡುವುದಿಲ್ಲ. ಇದು ನಿಮ್ಮ ತಲೆಯಲ್ಲಿರಲಿ ಎಂದು ಖಾರವಾಗಿ ಹೇಳಿದ್ದಾರೆ.

ಇದರಿಂದ ತಬ್ಬಿಬ್ಬಾದ ಜಿಲ್ಲಾ ನಾಯಕರು ಸುಮ್ಮನಾಗಿದ್ದು, ರಾಜೀಸಂಧಾನಕ್ಕೂ ಸಮ್ಮತಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ನಾಯಕರ ಸಭೆಯಲ್ಲಿ ಇದೇ ರೀತಿಯ ಚರ್ಚೆಗಳಾಗಿವೆ. ಈಗಾಗಲೇ ಕಂದಾಯ ವಿಭಾಗದ ಕಾರ್ಯದರ್ಶಿಗಳು ಜಿಲ್ಲಾ ಮಟ್ಟದ ಸಭೆಗಳನ್ನು ನಡೆಸಿ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದÀರು.
ಅದರ ಮಾಹಿತಿ ಪಡೆದ ವೇಣುಗೋಪಾಲ್ ಬಳ್ಳಾರಿ ಜಿಲ್ಲೆಯಲ್ಲಿ ಹಣ ಮತ್ತು ತೋಳ್ಬಲದ ಅಬ್ಬರ ಹೆಚ್ಚಾಗಿದೆ. ಅಂತಹ ವಿಷಮ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಎದೆಗುಂದದೆ ಪಕ್ಷದ ಜೊತೆಯಲ್ಲಿದ್ದಾರೆ. ನಾಯಕರಾದವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸ್ವಾರ್ಥ ಮತ್ತು ಅಧಿಕಾರಕ್ಕಾಗಿ ಪಕ್ಷವನ್ನು ಬಲಿಕೊಡಲು ಸಾಧ್ಯವಿಲ್ಲ. ಎಲ್ಲರೊಂದಿಗೂ ಹೊಂದಾಣಿಕೆ ಮಾಡಿಕೊಂಡು ಒಂದೇ ಕುಟುಂಬದವರಂತೆ ಪಕ್ಷವನ್ನು ಸಂಘಟನೆ ಮಾಡಿ ಎಂದು ಸೂಚನೆ ನೀಡಿದ್ದಾರೆ.

ವೇಣುಗೋಪಾಲ್ ಅವರ ಮಾತುಗಳಿಗೆ ಪ್ರತ್ಯುತ್ತರ ನೀಡಲು ಸಾಧ್ಯವಾಗದೆ ಬಳ್ಳಾರಿ ಮುಖಂಡರು ಮೌನಕ್ಕೆ ಶರಣಾಗಿದ್ದಾರೆ. ಗುಲ್ಬರ್ಗಾ ಜಿಲ್ಲೆ ವಿಚಾರಗಳ ಚರ್ಚೆ ವೇಳೆ ಬಹುತೇಕ ನಾಯಕರು ಗೈರು ಹಾಜರಾದ ಬಗ್ಗೆ ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತು ವರದಿ ನೀಡುವಂತೆ ಜಿಲ್ಲಾಧ್ಯಕ್ಷರಿಗೆ ತಾಕೀತು ಮಾಡಿದ್ದಾರೆ.  ಹುಬ್ಬಳ್ಳಿ, ಧಾರವಾಡ ಜಿಲ್ಲಾ ನಾಯಕರ ಜೊತೆ ಸಮಾಲೋಚನೆ ವೇಳೆಯೂ ಒಳಜಗಳದಿಂದ ಪಕ್ಷಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲು ಎಚ್ಚರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin