ಕಿರಿಯ ವೈದ್ಯರು ಮುಷ್ಕರ : ಬಿಹಾರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ 8 ರೋಗಿಗಳ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

BIhar--01

ಪಾಟ್ನಾ, ಮೇ 25– ಬಿಹಾರದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಎಂಟು ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರಕದೇ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಕಿರಿಯ ವೈದ್ಯರ ಮೇಲೆ ಲಾಠಿ ಪ್ರಹಾರ ನಡೆದದ್ದನ್ನು ಖಂಡಿಸಿ ಕಿರಿಯ ವೈದ್ಯರು ಮುಷ್ಕರ ನಡೆಸಿದ್ದರಿಂದ, ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಚಿಕಿತ್ಸೆ ದೊರಕಿಲ್ಲ ಎಂದು ಹೇಳಲಾಗಿದೆ.  ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಮುಷ್ಕರನಿರತ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದರಿಂದ ಆರೋಗ್ಯ ಸೇವೆ ದಿನವಿಡೀ ಅಸ್ತವ್ಯಸ್ತಗೊಂಡಿತ್ತು.



ಸರ್ಕಾರ ನಿರ್ವಹಿಸುವ ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇದಾಗಿದ್ದು, ತುರ್ತುಸೇವೆ ಹಾಗೂ ಹೊರರೋಗಿಗಳ ವಿಭಾಗ ಕೂಡಾ ಕಾರ್ಯನಿರ್ವಹಿಸಲಿಲ್ಲ. ರಾಜ್ಯದ ಎಲ್ಲ ಏಳು ಸರ್ಕಾರಿ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜುಗಳ ವೈದ್ಯರು ಬುಧವಾರ ಒಂದು ದಿನದ ಮುಷ್ಕರ ನಡೆಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲದ ಕಾರಣ ನೂರಾರು ರೋಗಿಗಳು ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್‍ಗಳಲ್ಲಿ ಸರದಿಯಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು.

ಮುಷ್ಕರದ ಹಿನ್ನೆಲೆಯಲ್ಲಿ 50 ಹೆಚ್ಚುವರಿ ವೈದ್ಯರ ಸೇವೆ ಒದಗಿಸುವಂತೆ ಸರ್ಕಾರಕ್ಕೆ ಕೋರಿದ್ದೆವು. ಆದರೆ 15 ಮಂದಿಯನ್ನಷ್ಟೇ ನಿಯೋಜಿಸಲಾಗಿದೆ. ಇವರು ತುರ್ತು ಸೇವಾ ಘಟಕದಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ಪಿಎಂಸಿಎಚ್ ಪ್ರಾಚಾರ್ಯ ಡಾ.ಎಸ್ . ಎನ್ .ಸಿನ್ಹಾ ಹೇಳಿದ್ದಾರೆ. ಆದರೆ ಮುಷ್ಕರದಿಂದಾಗಿ ರೋಗಿಗಳು ಮೃತಪಟ್ಟ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin