ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ ಮೂವರು ಪಾಕ್ ಪ್ರಜೆಗಳು ಸೇರಿ ನಾಲ್ವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Bengaluru-Police

ಬೆಂಗಳೂರು,ಮೇ 25-ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದ ಮೂವರು ಪಾಕಿಸ್ತಾನದ ಪ್ರಜೆಗಳು ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕುಮಾರಸ್ವಾಮಿ ಲೇಔಟ್‍ನ ಯಾರಬ್‍ನಗರದಲ್ಲಿ ಅಕ್ರಮವಾಗಿ ವಾಸವಾಗಿದ್ದ ಸಮೀರ ಅಬ್ದುಲ್ ರೆಹಮಾನ್(25), ಕಿರಣ ಗುಲಾಂ ಅಲಿ(26) ಹಾಗೂ ಖಾಸೀಬ್ ಸಂಷುದ್ದೀನ್(30) ಬಂಧಿತ ಪಾಕ್ ಪ್ರಜೆಗಳು.  ಇವರೊಂದಿಗೆ ಕೇರಳ ಮೂಲದ ಮೊಹಮ್ಮದ್ ಸಿಹಾಬ್ ಎಂಬಾತನನ್ನು ಬಂಧಿಸಲಾಗಿದೆ. ಪಾಕಿಸ್ತಾನದ ಮೂವರು ಪ್ರಜೆಗಳು ಯಾವುದೇ ಪಾಸ್‍ಪೋರ್ಟ್ ಇಲ್ಲದೆ ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ರಾತ್ರಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಮೊಹಮ್ಮದ್ ಸಿಹಾಬ್ ಕತಾರ್‍ನಲ್ಲಿ ಕೆಲಸ ಮಾಡುವಾಗ ಕಿರಣ ಗುಲಾಂ ಅಲಿಯೊಂದಿಗೆ ಪ್ರೇಮಾಂಕುರವಾಗಿದ್ದು , ಇವರ ವಿವಾಹಕ್ಕೆ ಕಿರಣ್ ಕುಟುಂಬದವರು ಸಮ್ಮತಿಸಿಲ್ಲ ಎನ್ನಲಾಗಿದೆ.



ಇದರಿಂದ ಸಿಹಾಬ್ ತನ್ನ ಪ್ರೇಯಸಿ ಕಿರಣ, ನಾದಿನಿ ಸಮೀರ, ಭಾವಮೈದುನ ಸಂಶುದ್ದೀನ್‍ನೊಂದಿಗೆ ಕತಾರ್‍ನಿಂದ ಮಸ್ಕಟ್‍ಗೆ ಅಲ್ಲಿಂದ ಕಠ್ಮಂಡು -ಪಾಟ್ನಾ ಮೂಲಕ ಭಾರತಕ್ಕೆ ನುಸುಳಿ ಅಲ್ಲಿಂದ ನಗರಕ್ಕೆ ಬಂದು ನೆಲೆಸಿದ್ದಾರೆ ಎಂದು ವಿಚಾರಣೆಯಿಂದ ತಿಳಿದುಬಂದಿರುವುದಾಗಿ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಯಾರಬ್‍ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದ ಮೂವರು ಪಾಕ್ ಪ್ರಜೆಗಳು ನಕಲಿ ಬೇರೆ ಬೇರೆ ಹೆಸರುಗಳನ್ನು ನೀಡಿ ನಕಲಿ ದಾಖಲೆ ಸೃಷ್ಟಿಸಿ ಆಧಾರ್‍ಕಾರ್ಡ್ ಮತ್ತಿತರ ದಾಖಲೆಗಳನ್ನು ಮಾಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.   ಪಾಕ್ ಪ್ರಜೆಗಳು ಅಕ್ರಮವಾಗಿ ನೆಲೆಸಿರುವುದರ ಬಗ್ಗೆ ಕೇಂದ್ರ ಗೃಹ ಇಲಾಖೆ ಹಾಗೂ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದ್ದು , ಕೇಂದ್ರ ಗುಪ್ತಚರ ಅಧಿಕಾರಿಗಳು ಹಾಗೂ ಎನ್‍ಐಎ ತಂಡ ನಗರಕ್ಕೆ ಆಗಮಿಸಿ ಬಂಧಿತರ ವಿಚಾರಣೆ ನಡೆಸಲಿದೆ ಎಂದು ಅವರು ಹೇಳಿದರು.   ಪತ್ರಿಕಾಗೋಷ್ಠಿಯಲ್ಲಿ ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ರವಿ, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮಾಲಿನಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin