ಜೂನ್ ಮೊದಲ ವಾರದಲ್ಲೇ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ

ಈ ಸುದ್ದಿಯನ್ನು ಶೇರ್ ಮಾಡಿ

mansoonRain
ಬೆಂಗಳೂರು, ಮೇ 26- ನೈರುತ್ಯ ಮುಂಗಾರು ಮೇ ಅಂತ್ಯಕ್ಕೆ ಕೇರಳ ಕರಾವಳಿ ಪ್ರವೇಶ ಮಾಡುವ ನಿರೀಕ್ಷೆಯಿದ್ದು, ಜೂನ್ ಮೊದಲ ವಾರದಲ್ಲೇ ರಾಜ್ಯವನ್ನು ಕೂಡ ಪ್ರವೇಶ ಮಾಡಲಿದೆ ಎಂದು ಹವಾಮಾನ ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಿಗದಿತ ಅವಧಿಗಿಂತ ಒಂದು ವಾರ ಮುಂಚೆಯೇ ಮುಂಗಾರು ಮಾರುತಗಳು ಆರಂಭಗೊಂಡಿದ್ದರೂ ಅಂಡಮಾನ್-ನಿಕೋಬಾರ್ ದ್ವೀಪದ ಬಳಿ ಐದಾರು ದಿನಗಳ ಕಾಲ ತಟಸ್ಥವಾಗಿದ್ದವು ಎಂದು ತಜ್ಞರು ಮಾಹಿತಿ ನೀಡಿದ್ದಾರೆ.  ಕೇರಳ ಮತ್ತು ಕರ್ನಾಟಕದಲ್ಲಿ ಮಳೆ ಕ್ರಿಯಾಶೀಲವಾಗಿದೆ. ಕರ್ನಾಟಕದಲ್ಲೂ ಚದುರಿದಂತೆ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಮುಂಗಾರುಪೂರ್ವ ಮಳೆ ಆಗುತ್ತಿದೆ.ಮುಂಗಾರು ಆರಂಭಕ್ಕೆ ಪೂರಕವಾದ ವಾತಾವರಣ ಇದುವರೆಗೂ ಕಂಡುಬಂದಿದ್ದು, ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಮೇ ಅಂತ್ಯಕ್ಕೆ ಕೇರಳ ತಲುಪುವ ಮುಂಗಾರು ಒಂದೆರಡು ದಿನಗಳಲ್ಲಿ ರಾಜ್ಯವನ್ನೂ ಕೂಡ ಪ್ರವೇಶ ಮಾಡಲಿದೆ. ಚಾಮರಾಜನಗರದ ಮೂಲಕ ರಾಜ್ಯ ಪ್ರವೇಶಿಸುವ ಮುಂಗಾರು ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಮೂಲಕ ಉತ್ತರ ಕರ್ನಾಟಕದ ಕಡೆ ಮುನ್ನಡೆಯಲಿದೆ. ಆರಂಭಗೊಂಡ ಒಂದು ವಾರದಲ್ಲಿ ರಾಜ್ಯದ ಮೂಲಕ ಮಹಾರಾಷ್ಟ್ರ ತಲುಪಲಿದೆ ಎಂದು ಹೇಳಿದರು.  ಮೇ ಅಂತ್ಯಕ್ಕೆ ಕೇರಳ ಕರಾವಳಿಯನ್ನು ಮುಂಗಾರು ಮಾರುತಗಳು ತಲುಪಲಿದ್ದು, ಜೂನ್ ಮೊದಲ ವಾರದಲ್ಲೇ ರಾಜ್ಯವನ್ನು ಮುಂಗಾರು ಮಳೆ ವ್ಯಾಪಿಸಲಿದೆ ಎಂದು ಹವಾಮಾನ ತಜ್ಞ ವಿ.ಎಸ್.ಪ್ರಕಾಶ್ ತಿಳಿಸಿದರು.

ಮೇ 30ರ ವೇಳೆಗೆ ಕೇರಳವನ್ನು ಮುಂಗಾರು ತಲುಪುವ ನಿರೀಕ್ಷೆ ಇದ್ದು, ಜೂನ್ 2 ರಿಂದ 5ರವರೆಗೆ ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆ ಬೀಳಲಿದೆ ಎಂದು ಅವರು ತಿಳಿಸಿದರು.  ಆನಂತರ ಮೂರ್ನಾಲ್ಕು ದಿನದಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದೆ. ಮತ್ತೆ ಜೂನ್ 9 ರಿಂದ 12ರವರೆಗೂ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಹೇಳಿದರು.  ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಅವರ ಪ್ರಕಾರ ಮುಂಗಾರು ಮಳೆ ಆಗಮನಕ್ಕೆ ಪೂರಕವಾದ ವಾತಾವರಣವಿದೆ.

ಅವಧಿಗೂ ಮುನ್ನ ಮುಂಗಾರು ಮಾರುತಗಳು ಕಂಡು ಬಂದರೂ ಅಂಡಮಾನ್-ನಿಕೋಬಾರ್ ದ್ವೀಪದ ಬಳಿ ಐದಾರು ದಿನ ತಟಸ್ಥವಾಗಿದ್ದವು. ಆದರೂ ಕೂಡ ಮೇ ಅಂತ್ಯದ ವೇಳೆಗೆ ಮುಂಗಾರು ಆಗಮಿಸುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಜೂನ್ 1 ರಿಂದ 5ರವರೆಗೆ ಮುಂಗಾರು ಆಗಮನದ ಸಕಾಲ. ಆ ವೇಳೆಯಲ್ಲಿ ಮುಂಗಾರು ಪ್ರಾರಂಭವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.  ಜೂನ್ ಮೊದಲ ವಾರದಲ್ಲೇ ಮುಂಗಾರು ಮಾರುತಗಳು ವ್ಯಾಪಿಸಲಿವೆ. ಉತ್ತಮ ಮಳೆಯಾಗುವ ನಿರೀಕ್ಷೆಯೂ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin