ಜು.30ರೊಳಗೆ ಸಾಲಮನ್ನಾ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಬಿಎಸ್‍ವೈ ಗಡುವು

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--01

ಬೆಂಗಳೂರು, ಮೇ 27– ಸಹಕಾರಿ ಸಂಘಗಳಿಂದ ರೈತರು ಪಡೆದಿರುವ ಸಾಲವನ್ನು ಜು.30ರೊಳಗೆ ಮನ್ನಾ ಮಾಡದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಲಕ್ಷಾಂತರ ರೈತ ರೊಂದಿಗೆ ಬೃಹತ್ ಹೋರಾಟ ನಡೆಸಲಾಗುವುದೆಂದು ಬಿ.ಎಸ್. ಯಡಿಯೂರಪ್ಪ ಎಚ್ಚರಿಸಿದ್ದಾರೆ.  ಸಹಕಾರ ಸಂಘಗಳಲ್ಲಿನ ಸಾಲ ಮನ್ನಾ ಮಾಡುವುದು ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿ. ಕೇಂದ್ರದ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ರೈತರ ಸಾಲ ಮನ್ನಾ ಮಾಡಲೇಬೇಕು. ಈ ಸಂಬಂಧ ಜುಲೈ ತಿಂಗಳಿನಲ್ಲಿ 4 ರಿಂದ 5 ಲಕ್ಷ ರೈತರ ಸಮಾವೇಶ ನಡೆಸುವುದಾಗಿ ತಿಳಿಸಿದರು.


ಬೆಂಗಳೂರು ಪ್ರೆಸ್‍ಕ್ಲಬ್ ಹಾಗೂ ವರದಿಗಾರರ ಕೂಟ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಯಡಿಯೂರಪ್ಪ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.  ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ರೈತರ ಸಾಲ ಮನ್ನಾ ಮಾಡದೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಅಲ್ಲಿನ ಸರ್ಕಾರ ರೈತರ ಸಾಲ ಮನ್ನಾ ಮಾಡಿರುವಾಗ ನಿಮ್ಮ ಸರ್ಕಾರಕ್ಕೆ ಸಾಲ ಮನ್ನಾ ಮಾಡಲು ಏನು ದಾಢಿ ಎಂದು ಖಾರವಾಗಿ ಪ್ರಶ್ನಿಸಿದರು.

24 ಗಂಟೆಗಳಲ್ಲಿ ಸಾಲ ಮನ್ನಾ:

ನಮ್ಮ ಸರ್ಕರ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರೈತರು ಸಹಕಾರಸಂಘಗಳಿಂದ ಪಡೆದಿರುವ ಸಾಲ ಮನ್ನಾ ಮಾಡುವುದಾಗಿ ಯಡಿಯೂರಪ್ಪ ತಿಳಿಸಿದರು. ಹಿಂದೆ ನಾನು ಉಪಮುಖ್ಯಮಂತ್ರಿಯಾಗಿದ್ದ ವೇಳೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಆದ್ದರಿಂದಲೇ ಸಹಕಾರ ಸಂಘಗಳ ಸಾಲದ ಮೇಲಿನ ಬಡ್ಡಿ ಮೊತ್ತವನ್ನು ಕಡಿಮೆ ಮಾಡಿದ್ದೆ. ಬಳಿಕ ನನ್ನ ಅವಧಿಯಲ್ಲೇ 25 ಸಾವಿರ ಹಾಗೂ ಜಗದೀಶ್‍ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ರೈತರ 25 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದ್ದೇವೆ ಎಂದು ತಿಳಿಸಿದರು.

ಭ್ರಷ್ಟಾಚಾರದಲ್ಲಿ ನಂಬರ್ ಒನ್:

ನಾಲ್ಕು ವರ್ಷ ಆಡಳಿತ ಪೂರೈಸಿರುವ ಮುಖ್ಯಮಂತ್ರಿ ಸಿದ್ದು ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಕರ್ನಾಟಕವನ್ನು ನಂಬರ್ 1 ಸ್ಥಾನಕ್ಕೆ ಕೊಂಡೊಯ್ದಿರುವುದೇ ನಾಲ್ಕು ವರ್ಷದ ಮಹಾನ್ ಸಾಧನೆ ಎಂದು ಹೇಳಿದರು.  ಕರ್ನಾಟಕ ಮತ್ತು ಕನ್ನಡಿಗರು ಮುಖ ತೋರಿಸದಂತೆ ಭ್ರಷ್ಟಾಚಾರವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡಿದೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ಅಧಿಕಾರಿಗಳನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಲೋಕಾಯುಕ್ತ ಸಂಸ್ಥೆಯನ್ನು ನಿಷ್ಕ್ರಿಯೆಗೊಳಿಸಿದ್ದೇ ಎರಡನೇ ಸಾಧನೆ ಎಂದರು.

ಮುಖ್ಯಮಂತ್ರಿ ಕೈ ಕೆಳಗೆ ಕೆಲಸ ಮಾಡುತ್ತಿರುವ ಎಸಿಬಿ ಕಾಂಗ್ರೆಸ್ ಮುಖಂಡರನ್ನು ರಕ್ಷಿಸಿ ವಿರೋಧಿಗಳನ್ನು ಹಣಿಯುವ ಪ್ರಯತ್ನ ಮಾಡುತ್ತಿದೆ. ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಇತ್ತೀಚೆಗೆ ನಿಗೂಢವಾಗಿ ಸಾವನ್ನಪ್ಪಿದ ಅನುರಾಗ್ ತಿವಾರಿ ಪ್ರಕರಣ ಸಾಕ್ಷಿಯಾಗಿದೆ ಎಂದು ಬಿಎಸ್‍ವೈ ಹೇಳಿದರು.
ಸಿದ್ದರಾಮಯ್ಯ ಕೂಡ ಭ್ರಷ್ಟಾಚಾರದಿಂದ ಹೊರತಾಗಿಲ್ಲ. ಲೋಕಾಯುಕ್ತ ಸಂಸ್ಥೆಯಲ್ಲಿ ಅವರ ವಿರುದ್ಧ ಅನೇಕ ಪ್ರಕರಣ ದಾಖಲಾಗಿದೆ. ಸ್ವಜನ ಪಕ್ಷಪಾತ, ಪುತ್ರನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲ್ಯಾಬ್ ನೀಡಿರುವುದು ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.

ರಾಜಕಾರಣಕ್ಕೆ ಬಳಸಿಕೊಂಡಿಲ್ಲ:

ತಾವು ದಲಿತರ ಕೇರಿಗಳಿಗೆ ಭೇಟಿ ನೀಡುತ್ತಿರುವುದು ಅವರ ವಾಸ್ತವ ಸ್ಥಿತಿಗತಿ ಅರಿಯಲು. ನನಗೆ ಸಿಗುತ್ತಿರುವ ಅಭೂತಪೂರ್ವ ಬೆಂಬಲ ನೋಡಿ ಕಾಂಗ್ರೆಸ್ ನಾಯಕರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ದಲಿತರ ಕೇರಿಗಳು ಅಭಿವೃದ್ಧಿಯಾಗಿಲ್ಲ. ನಾನು ದಲಿತರ ಕೇರಿಗೆ ಹೋಗುತ್ತಿರುವುದು ರಾಜಕಾರಣ ಮಾಡಲಲ್ಲ ಎಂದು ಸ್ಪಷ್ಟಪಡಿಸಿದರು.  ಸಿದ್ದರಾಮಯ್ಯ ಹೆಲಿಕಾಪ್ಟರ್‍ನಲ್ಲಿ ಸುತ್ತಾಡುವುದನ್ನು ಬಿಟ್ಟು ಒಂದು ಬಾರಿಯಾದರೂ ದಲಿತರ ಕೇರಿಗೆ ಹೋಗಲಿ. ಆಗ ಅಲ್ಲಿನ ಸ್ಥಿತಿ ಏನೆಂಬುದು ಅರ್ಥವಾಗುತ್ತದೆ. ವಿನಾಕಾರಣ ಒಬ್ಬರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಮೋದಿ ಬೇರೆಯಲ್ಲ ಬಿಜೆಪಿ ಬೇರೆ ಅಲ್ಲ:

ಪ್ರಧಾನಿ ನರೇಂದ್ರ ಮೋದಿ ಅವರ ನಾಮಬಲದ ಮೇಲೆ 2018ರ ವಿಧಾನಸಭಾ ಚುನಾವಣೆಗೆ ಧುಮುಕಲಿದ್ದೇವೆ. ಕಳೆದ 3 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಸಾಧನೆಗಳು, ಮೋದಿ ವರ್ಚಸ್ಸು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಚಾಣಾಕ್ಷತೆ ನಮ್ಮ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ಅಷ್ಟೆ ಬಿಜೆಪಿ ಗೆಲುವು ಶತಸಿದ್ಧ ಎಂದರು.   ಮಿಷನ್ 150 ಯಾವ ಕಾರಣಕ್ಕೂ ವಿಫಲಗೊಳ್ಳುವುದಿಲ್ಲ. ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಪರಿಸ್ಥಿತಿ ಉದ್ಭವವಾಗುವುದಿಲ್ಲ ಎಂದು ಖಚಿತ ಮಾತಿನಲ್ಲಿ ಹೇಳಿದರು.
ಪಕ್ಷದಲ್ಲಿನ ಎಲ್ಲ ಗೊಂದಲಗಳು ನಿವಾರಣೆಯಾಗಿವೆ. ಇನ್ನೇನಿದ್ದರೂ ಎಲ್ಲರೂ ಒಗ್ಗೂಡಿ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿ ಎಂದು ಯಡಿಯೂರಪ್ಪ ತಿಳಿಸಿದರು.  ಮುಖಂಡರಾದ ಆರ್.ಅಶೋಕ್, ಅರವಿಂದ ಲಿಂಬಾವಳಿ, ಪಿ.ಸಿ.ಮೋಹನ್, ಬಿ.ಜೆ.ಪುಟ್ಟಸ್ವಾಮಿ, ಅಶ್ವಥ್‍ನಾರಾಯಣ್, ವಿಜಯಕುಮಾರ್, ಸುರೇಶ್‍ಕುಮಾರ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin