ಮಳೆಗಾಲದಲ್ಲಿ ತಪ್ಪದ ಬೆಂಗಳೂರಿಗರ ಬವಣೆ

ಈ ಸುದ್ದಿಯನ್ನು ಶೇರ್ ಮಾಡಿ

Rain-03

ಬೆಂಗಳೂರು, ಮೇ 27-ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ನಗರದಲ್ಲಿ 76ಮರಗಳು ಧರೆಗುರುಳಿ ಬಿದ್ದಿದ್ದು, 28 ತಗ್ಗುಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‍ಗೂ ನೀರು ನುಗ್ಗಿ ಸಾಕಷ್ಟು ಅನಾಹುತ ಉಂಟಾಗಿದೆ.  ಪೂರ್ವ ವಿಭಾಗದಲ್ಲಿ 38, ದಕ್ಷಿಣ 13, ಪಶ್ಚಿಮ 12, ಬೊಮ್ಮಸಂದ್ರ 5, ಯಲಹಂಕ 3, ಆರ್‍ಆರ್‍ನಗರ 2, ದಾಸರಹಳ್ಳಿ 1 ಹಾಗೂ ಮಹದೇವಪುರದಲ್ಲಿ 2 ಬೃಹದಾಕಾರದ ಮರಗಳು ಉರುಳಿ ಬಿದ್ದಿವೆ.

ಅದೇ ರೀತಿ ಬೊಮ್ಮನಹಳ್ಳಿ ಪೂರ್ವ, ಪಶ್ಚಿಮ ಸೇರಿದಂತೆ 8 ವಲಯಗಳ 28 ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ರಾತ್ರಿಯಿಡೀ ಕಾರ್ಯಾಚರಣೆ ನಡಸಿದ ಬಿಬಿಎಂಪಿ ಸಿಬ್ಬಂದಿ ಕೆಲವು ಪ್ರದೇಶಗಳಲ್ಲಿ ಮನೆಗೆ ನುಗ್ಗಿದ್ದ ನೀರನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಬೆಳಕು ಹರಿಯುವುದರೊಳಗೆ 42 ಮರಗಳನ್ನು ತೆರವುಗೊಳಿಸಿದ್ದ ಸಿಬ್ಬಂದಿ, ಇಂದು ಮಧ್ಯಾಹ್ನದವರೆಗೂ ಬಿಟ್ಟು ಬಿಡದೆ ಕಾರ್ಯಾಚರಣೆ ನಡೆಸಿ ಎಲ್ಲಾ ಮರಗಳನ್ನು ತೆರವುಗೊಳಿಸಿದರು.


ಸಂಚಾರ ದಟ್ಟಣೆ:

ಮೆಜೆಸ್ಟಿಕ್, ಕೆ.ಆರ್.ಸರ್ಕಲ್, ಕೆ.ಆರ್.ಮಾರುಕಟ್ಟೆ, ಶಾಂತಿನಗರ, ಮಲ್ಲೇಶ್ವರಂ, ಶೇಷಾದ್ರಿಪುರಂ, ಹೆಬ್ಬಾಳ, ನಾಗವಾರ, ಬಾಣಸವಾಡಿ, ಆರ್.ಟಿ.ನಗರ, ಮೈಸೂರು ರಸ್ತೆ, ಎಂ.ಜಿ.ರಸ್ತೆ, ಬಿಟಿಎಂ ಬಡಾವಣೆ, ರಾಜಭವನ ರಸ್ತೆ, ವಿಲ್ಸನ್‍ಗಾರ್ಡನ್, ಜೆ.ಸಿ.ನಗರ, ಮಲ್ಯ ಆಸ್ಪತ್ರೆ ರಸ್ತೆ ಸೇರಿದಂತೆ ಕೆಲ ಪ್ರಮುಖ ರಸ್ತೆಗಳಲ್ಲಿ ಮರಗಳು ಉರುಳಿಬಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.

ಮರಗಳು ಉರುಳಿ ಬಿದ್ದ ಹಿನ್ನೆಲೆಯಲ್ಲಿ ಬಹುತೇಕ ಕಡೆಗಳಲ್ಲಿ ಕಿಲೋ ಮೀಟರ್ ಉದ್ದದಷ್ಟು ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಮನೆ ಸೇರಲು ಪರದಾಡಿದರು. ಇದರ ಮಧ್ಯೆ ಕೆಲ ರಸ್ತೆಗಳು, ಕೆಳಸೇತುವೆಗಳು ಕೆರೆಗಳಾಗಿ ಪರಿವರ್ತನೆಗೊಂಡಿದ್ದವು.   ಸುಬ್ರಹ್ಮಣ್ಯನಗರ, ವಿಲ್ಸನ್‍ಗಾರ್ಡನ್, ಭೂಪಸಂದ್ರ, ಮಾರುತಿ ನಗರ, ಹೊಸಕೆರೆ ಹಳ್ಳಿ, ಆನೆಪಾಳ್ಯ, ಹೆಬ್ಬಾಳ, ಯಲಹಂಕ ಸುತ್ತಮುತ್ತಲಿನ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಇಲ್ಲಿನ ನಾಗರಿಕರು ರಾತ್ರಿಯಿಡೀ ಜಾಗರಣೆ ಆಚರಿಸುವಂತಾಯಿತು. ಕೆಲ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಉರುಳಿ ಬಿದ್ದ ಹಿನ್ನೆಲೆಯಲ್ಲಿ ಅರ್ಧ ಬೆಂಗಳೂರು ರಾತ್ರಿಯಿಡೀ ಕತ್ತಲೆ ಕೊಂಪೆಯಾಗಿತ್ತು.

IMG-20170527-WA0059

ನಡುಗಡ್ಡೆಯಾದ ಬಡಾವಣೆ:

ರಾತ್ರಿ ಅತಿ ಹೆಚ್ಚು ಮಳೆಯಾದ ಯಲಹಂಕದಲ್ಲಿ ಸಾಕಷ್ಟು ಅನಾಹುತ ಸಂಭವಿಸಿದ್ದು, ರಸ್ತೆಗಳು, ಕೆಳ ಸೇತುವೆಗಳು ನೀರಿನಿಂದ ಮುಚ್ಚಿಹೋಗಿದ್ದು, ಸಮೀಪದ ಸುರಭಿ ಬಡಾವಣೆ ಅಕ್ಷರಶಃ ನಡುಗಡ್ಡೆಯಾಗಿತ್ತು. ಇಡೀ ಯಲಹಂಕ ಮಳೆ ಅನಾಹುತದಿಂದ ತತ್ತರಿಸಿ ಹೋಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ಏರ್ ಪೋರ್ಟ್ ಗೂ ಮಳೆ ಹೊಡೆತ:

ವರುಣ ಆರ್ಭಟಕ್ಕೆ ದೇವನಹಳ್ಳಿ ತಾಲೂಕಿನ ಬುಳ್ಳಹಳ್ಳಿ, ಸಣ್ಣ ಅಮಾನಿಕೆರೆ ಹಾಗೂ ರೈಲ್ವೆ ನಿಲ್ದಾಣ ಸಮೀಪದ ಅಂಡರ್‍ಪಾಸ್‍ಗಳಲ್ಲಿ ಆಳುದ್ದ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು.  ದೇವನಹಳ್ಳಿ ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಳೆಯ ರಭಸಕ್ಕೆ ತತ್ತರಿಸಿಹೋಗಿತ್ತು. ಮಳೆಯಿಂದ ಏರ್ ಪೋರ್ಟ್ ಟರ್ಮಿನಲ್‍ಗೆ ನೀರು ನುಗ್ಗಿ ಸಾಕಷ್ಟು ಅನಾಹುತ ಉಂಟಾಯಿತು.  ಪ್ರಾಧಿಕಾರದ ಅಧಿಕಾರಿಗಳು ರಾತ್ರಿಯಿಡೀ ಸಾಹಸ ಪಟ್ಟು, ಟರ್ಮಿನಲ್‍ನ್ನು ನೀರಿನಿಂದ ಮುಕ್ತಿಗೊಳಿಸುವಲ್ಲಿ ಯಶಸ್ವಿಯಾದರು.


ವಾಹನಗಳು ಜಖಂ:

subramanya pura

ದೊಮ್ಮಲೂರು, ಯಲಹಂಕ ಮತ್ತಿತರ ಕೆಲ ಪ್ರದೇಶಗಳಲ್ಲಿ ಕಾರುಗಳ ಮೇಲೆ ಮರ ಉರುಳಿ ಬಿದ್ದು, ವಾಹನಗಳು ಸಂಪೂರ್ಣ ಜಖಂಗೊಂಡಿವೆ.

ಕೆರೆಯಲ್ಲಿ ನೊರೆ:

ಬೆಳ್ಳಂದೂರು, ವರ್ತೂರು ಕೆರೆಗಳ ನಂತರ ನೊರೆ ಉಕ್ಕುವ ಸರದಿ ಸುಬ್ರಹ್ಮಣ್ಯಪುರ ಕೆರೆಗೆ ಸಂದಿದೆ.  ಕಳೆದ ಶನಿವಾರ ಸುರಿದ ಮಳೆ ಸಂದರ್ಭದಲ್ಲಿ ಸುಬ್ರಹ್ಮಣ್ಯಪುರ ಕೆರೆಯಲ್ಲಿ ನೊರೆ ಉಕ್ಕಿಬಂದಿತ್ತು. ಆದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿರಲಿಲ್ಲ. ನಿನ್ನೆ ರಾತ್ರಿ ಸುರಿದ ಮಳೆಗೂ ಕೆರೆಯಲ್ಲಿ ನೊರೆ ಉಕ್ಕಿ ಬಂದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.  ಈ ಕೆರೆಯನ್ನು 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದರೂ ಸುತ್ತಮುತ್ತಲ ಅಪಾರ್ಟ್‍ಮೆಂಟ್‍ನವರು ತ್ಯಾಜ್ಯ ನೀರನ್ನು ಕೆರೆಗೆ ಹರಿದು ಬಿಡುತ್ತಿರುವ ಕಾರಣ ನೊರೆ ಬರುತ್ತಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮಾಲಿನ್ಯ ನಿಯಂತ್ರಣಾ ಮಂಡಳಿ ಅಧಿಕಾರಿ ಅನಿಲ್‍ಕುಮಾರ್ ಕೆರೆಯಲ್ಲಿ ನೊರೆ ಉಕ್ಕಲು ತ್ಯಾಜ್ಯ ನೀರು ಬಿಡುತ್ತಿರುವುದೇ ಕಾರಣ. ಯಾವ ಅಪಾರ್ಟ್‍ಮೆಂಟ್‍ನವರು ಕೆರೆಗೆ ತ್ಯಾಜ್ಯ ನೀರು ಬಿಡುತ್ತಿದ್ದಾರೋ ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.

ಮೇಯರ್ ಕಾರ್ಯಾಚರಣೆ:

Rain--02

ರಾತ್ರಿ ಮಳೆ ಆರಂಭವಾಗುತ್ತಿದ್ದಂತೆ ಕಾರ್ಯಾಚರಣೆಗಿಳಿದ ಮೇಯರ್ ಜಿ.ಪದ್ಮಾವತಿ ಅವರು ಬೆಳಗಿನ ಜಾವ ನಾಲ್ಕು ಗಂಟೆಯವರೆಗೂ ನಗರ ಪ್ರದಕ್ಷಿಣೆ ನಡೆಸಿದರು.  ವಿಶೇಷ ಆಯುಕ್ತರಾದ ವಿಜಯ್‍ಶಂಕರ್ ಮತ್ತು ಮನೋಜ್‍ಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳೊಂದಿಗೆ ಬಿಬಿಎಂಪಿ ಕೇಂದ್ರ ಕಚೇರಿಯ ನಿಯಂತ್ರಣಾ ಕೊಠಡಿಗೆ ದೌಡಾಯಿಸಿದ ಮೇಯರ್ ಅವರು ಸ್ವತಃ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.  ಅನಾಹುತ ಹೆಚ್ಚಾಗುತ್ತಿದ್ದಂತೆ 16 ತಂಡಗಳನ್ನು ರಚಿಸಿದ ಮೇಯರ್ ಅವರು, ಕೆಲ ತಂಡಗಳನ್ನು ಮಳೆ ಅನಾಹುತ ಪ್ರದೇಶಕ್ಕೆ ರವಾನಿಸಿದರು. ತಾವೂ ಕೂಡ ಒಂದು ತಂಡದೊಂದಿಗೆ ವಿವಿಧ ಪ್ರದೇಶಗಳಿಗೆ ತೆರಳಿ ಸ್ವತಃ ತೆರವು ಕಾರ್ಯಾಚರಣೆಗೆ ಸಾಕ್ಷಿಯಾದರು.

ಎಲ್ಲೆಲ್ಲಿ ಎಷ್ಟೆಷ್ಟು ಮಳೆ:

ಯಲಹಂಕ 93.5, ಕೊಡಿಗೇಹಳ್ಳಿ88, ಜಕ್ಕೂರು 88, ದೊಡ್ಡಬೊಮ್ಮಸಂದ್ರ 36, ಲಾಲ್‍ಬಾಗ್ 80,ಬಿಟಿಎಂ ಬಡಾವಣೆ 79, ವಿವಿಪುರಂ 82.5, ಬ್ಯಾಟರಾಯನಪುರ 85.5, ಪಟ್ಟಾಭಿರಾಮನಗರ 69.5, ಗಾಳಿ ಆಂಜನೇಯ ಬಡಾವಣೆ 63.5, ವಿದ್ಯಾಪೀಠ 50, ಆರ್‍ಆರ್‍ನಗರ 66, ಬಸವನಗುಡಿ 52, ಬೊಮ್ಮನಹಳ್ಳಿ 56, ಬನ್ನೇರುಘಟ್ಟ 76 ಮತ್ತು ಕೋಣನಕುಂಟೆಯಲ್ಲಿ 52 ಮಿಲಿ ಮೀಟರ್‍ನಷ್ಟು ಮಳೆಯಾಗಿದೆ.

IMG-20170527-WA0072

ದಕ್ಷಣ ಕನ್ನಡದಲ್ಲಿ ಅತಿ ಹೆಚ್ಚು 135ಮಿ.ಮೀ. ಮಳೆಯಾಗಿದ್ದು, ಉಳಿದಂತೆ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ.  ಬೆಂಗಳೂರು-110 ಮಿ.ಮೀ., ಬೆಂಗಳೂರು ಗ್ರಾಮಾಂತರ-104, ರಾಮನಗರ-87, ಕೋಲಾರ-112, ಚಿಕ್ಕಬಳ್ಳಾಪುರ-80, ದಕ್ಷಿಣ ಕನ್ನಡ-135, ಮೈಸೂರು-74, ಚಾಮರಾಜನಗರ-92, ಮಂಡ್ಯ-75, ಹಾಸನ-84, ಕೊಡಗು-64ಮಿ.ಮೀ. ಮಳೆಯಾಗಿದ್ದು, ಉಳಿದಂತೆ ಚಿತ್ರದುರ್ಗ, ತುಮಕೂರು, ದಾವರಣಗೆರೆ ಮುಂತಾದೆಡೆ ಮಳೆಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin