ಹುಕ್ಕಾ ಬಾರ್‍ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

HUkka--01

ನವದೆಹಲಿ, ಮೇ 27-ದೇಶದ ಅನೇಕ ನಗರಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಹುಕ್ಕಾ ಬಾರ್‍ಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಲು ಕೇಂದ್ರ ಸರ್ಕಾರ ಮುಂದಾಗಿದೆ.   ನಿಯೋಜಿತ ಧೂಮಪಾನ ವಲಯದಲ್ಲಿ ಆಹಾರ ಮತ್ತು ಪಾನೀಯ ಪೂರೈಸುವುದನ್ನು ನಿಷೇಧಿಸಲಾಗಿದ್ದು, ಆ ಮೂಲಕ ಹೊಟೇಲ್‍ಗಳು ಮತ್ತು ರೆಸ್ಟೋರೆಂಟ್‍ಗಳಲ್ಲಿ ಹುಕ್ಕಾ ಬಳಕೆಗೆ ಕಡಿವಾಣ ಹಾಕಿದೆ.   ಸೇಬು, ಪುದಿನ, ಚೆರ್ರಿ, ಚಾಕೋಲೆಟ್, ಕಲ್ಲಂಗಡಿ ಮುಂತಾದ ಸ್ವಾದಗಳನ್ನು ತಂಬಾಕು ಉತ್ಪನ್ನಗಳಿಗೆ ಲೇಪಿಸಿ ಹುಕ್ಕಾ ಪೈಪ್‍ಗಳಲ್ಲಿ ಸೇದಲು ಹೋಟೆಲ್‍ಗಳಲ್ಲಿ ಗ್ರಾಹಕರಿಗೆ ಅವಕಾಶ ನೀಡಲಾಗುತ್ತಿದೆ. ಇದು ಮೇಲ್ನೋಟಕ್ಕೆ ಅಷ್ಟೇನೂ ಹಾನಿಕರವಲ್ಲವೆಂದು ಕಂಡುಬಂದರೂ, ಇದು ಸಿಗರೇಟ್‍ನಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿನ ದುಷ್ಪರಿಣಾಮ ಬೀರುತ್ತವೆ. ಇದರಿಂದ ಬಾಯಿ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್‍ನಂಥ ಗಂಭೀರ ರೋಗಗಳು ಅಮರಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈ ಅಂಶಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿದೆ.

ಇದಲ್ಲದೇ, ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು ಮತ್ತು ವಿಮಾನನಿಲ್ದಾಣಗಳಲ್ಲಿ ಧೂಮಪಾನಕ್ಕೆ ಅವಕಾಶ ಇರುವ ಸ್ಥಳಗಳಲ್ಲಿ ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ವಿಧಿಸುವ ಫಲಕಗಳನ್ನು ಪ್ರದರ್ಶಿಸಲಾಗುತ್ತದೆ. ಧೂಮಪಾನ ನಿಮ್ಮ ಆರೋಗ್ಯಕ್ಕೆ ಹಾಗೂ ಧೂಮಪಾನ ಮಾಡದವರ ಆರೋಗ್ಯಕ್ಕೂ ಹಾನಿಕರ ಎಂಬ ಬೋರ್ಡ್‍ಗಳು ದೊಡ್ಡದಾಗಿ ರಾರಾಜಿಸಲಿವೆ.  ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ನಿಯಮಗಳು, 2008ರ ಕಾನೂನಿಗೆ ಬದಲಾವಣೆಗಳನ್ನು ಮಾಡುವ ನಿಟ್ಟಿನಲ್ಲಿ ಆರೋಗ್ಯ ಸಚಿವಾಲಯವು ಹೊಸ ಕಾನೂನುಗಳ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಸಚಿವಾಲ ಯವು ನಿರ್ದಿಷ್ಟ ಮಾರ್ಗಸೂಚಿಗಳನ್ನು ಪಾಲಿಸುವಂತೆಯೂ ಎಚ್ಚರಿಕೆ ಸಂದೇಶವನ್ನು ಸಹ ನೀಡಿದೆ.18 ವರ್ಷಗಳ ಕೆಳ ವಯೋಮಾನದವರಿಗೆ ಧೂಮಪಾನ ಪ್ರದೇಶದಲ್ಲಿ ಅವಕಾಶ ಇಲ್ಲ ಎಂಬ ಸೂಚನೆಯನ್ನೂ ಈ ಫಲಕ ಒಳಗೊಂಡಿದೆ. ಇದು ಆಂಗ್ಲ ಮತ್ತು ಅನ್ವಯವಾಗುವ ಒಂದು ಭಾರತೀಯ ಭಾಷೆಯಲ್ಲಿರುತ್ತದೆ.  ಈ ಹಿಂದಿನ ನಿಯಮದಲ್ಲಿದ್ದ ಧೂಮಪಾನ ವಲಯದ ಮಾರ್ಗಸೂಚಿಗಳನ್ನು ಹಲವಾರು ಹೋಟೆಲ್‍ಗಳು ಮತ್ತು ರೆಸ್ಟೋರೆಂಟ್‍ಗಳು ಪಾಲಿಸುತ್ತಿಲ್ಲ ಹಾಗೂ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ದುರ್ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಸ್ಪಷ್ಟ ಮತ್ತು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುತ್ತಿದೆ.  ಎಲ್ಲ ಸಾರ್ವಜನಿಕ ವಲಯಗಳಲ್ಲಿ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳನ್ನು ಕಡ್ಡಾಯವಾಗಿ ನಿರ್ಬಂಧಿಸಲು ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin