ಗೋಹತ್ಯೆ ನಿಷೇಧವನ್ನು ವಿರೋಧಿಸುವುದು ಸರಿ ಅಲ್ಲ : ಸಾದ್ವಿ ನಿರಂಜನ್ ಜ್ಯೋತಿ

ಈ ಸುದ್ದಿಯನ್ನು ಶೇರ್ ಮಾಡಿ

saadvi-niranjan-jyothi

ಬೆಂಗಳೂರು, ಮೇ 29- ಗೋ ಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ಕೇರಳ ಮತ್ತಿತರೆಡೆ ನಡೆಯುತ್ತಿರುವ ವಿರೋಧ ಸರಿಯಲ್ಲ ಎಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ ರಾಜ್ಯ ಸಚಿವರಾದ ಸಾದ್ವಿ ನಿರಂಜನ್ ಜ್ಯೋತಿ ಹೇಳಿದರು. ಭಾರತೀಯ ಕೈಗಾರಿಕಾ ಮತ್ತು ವಾಣಿಜ್ಯ ಮಹಾ ಮಂಡಳ ಆಯೋಜಿಸಿದ್ದ ಆಹಾರ ಸಂಸ್ಕರಣೆಯಲ್ಲಿ ಹಿಂದುಳಿದವರ ಸಂಪರ್ಕ ಬಲಪಡಿಸುವ ಕುರಿತಾದ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋ ಹತ್ಯೆ ವಿರೋಧಿಸಿ ನಡೆಸಲಾಗುತ್ತಿರುವ ಪ್ರತಿಭಟನೆಯನ್ನು ಖಂಡಿಸುವುದಾಗಿ ತಿಳಿಸಿದರು. ಗೋವಿನ ಬಗ್ಗೆ ಧಾರ್ಮಿಕ ಭಾವನೆ ಜತೆಗೆ ರೈತರ ಜೀವ ನಾಡಿಯೂ ಆಗಿದೆ. ಬರಡು ರಾಸುಗಳನ್ನು ಗೋ ಶಾಲೆಗಳಲ್ಲಿ ಪಾಲನೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಇದಕ್ಕೂ ಮುನ್ನ ವಿಚಾರ ಸಂಕಿರಣದಲ್ಲಿ ಮಾತನಾಡಿದ ಸಚಿವರು, ಆಹಾರ ಸಂಸ್ಕರಣೆಗೆ ಸಂಬಂಧಿಸಿದಂತೆ ರೈತ ಸಮೂಹಗಳು ನಿರ್ಮಿಸಿಕೊಳ್ಳುವ ಶೀತಲ ಗೃಹಗಳಿಗೆ 5 ಕೋಟಿ ರೂ.ವರೆಗೂ ಸಹಾಯ ಧನ ನೀಡಲಾಗುವುದು. ಆಹಾರ ಪದಾರ್ಥಗಳ ಸಂಸ್ಕರಣೆಗೆ ದೇಶಾದ್ಯಂತ 2 ಸಾವಿರ ಶೀತಲ ಗೃಹಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.  ಆಹಾರ ಸಂಸ್ಕರಣೆ ಸಮಸ್ಯೆಗಳು ನಿವಾರಣೆಯಾಗು ವವರೆಗೂ ರೈತರು ಸಬಲರಾಗುವುದಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರ ಸಂಪದ ಯೋಜನೆಯಡಿ ಸಹಾಯ ಧನ ನೀಡುತ್ತಿದ್ದು, ರೈತರು ಸಣ್ಣ ಸಣ್ಣ ಗುಂಪು ಅಥವಾ ಸಮೂಹ ಗಳನ್ನು ಮಾಡಿಕೊಂಡು ಯೋಜನೆಯ ಪ್ರಯೋಜನ ಪಡೆಯುವಂತೆ ಕರೆ ನೀಡಿದರು.

ಅನ್ನದಾತರಾದ ರೈತ ಸಮುದಾಯ ದೇಶದಲ್ಲಿ ಶೋಚನೀಯ ಸ್ಥಿತಿಯಲ್ಲಿದೆ. ಸುಧಾರಣೆಯಾಗಿ ರೈತರ ಬೆಳೆಗೆ ಉತ್ತಮ ಬೆಲೆ ಸಿಗುವಂತಾಗಬೇಕು ಎಂದು ಹಲವು ಯೋಜನೆಗಳನ್ನು ರೂಪಿಸಿದ್ದು, 2020ರ ವೇಳೆಗೆ ರೈತರ ಆದಾಯ ದ್ವಿಗುಣ ಆಗಬೇಕು ಎಂಬ ಗುರಿ ಹೊಂದಲಾಗಿದೆ. ಇದಕ್ಕಾಗಿ ಆಹಾರ ಸಂಸ್ಕರಣಾ ಉದ್ಯಮದ ಬೆಳವಣಿಗೆಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದರು.  ದೇಶದ ನಾಲ್ಕು ದಿಕ್ಕುಗಳಲ್ಲಿ ಬೃಹತ್ ಫುಡ್ ಪಾರ್ಕ್ ನಿರ್ಮಿಸಲಾಗುತ್ತಿದ್ದು, ಕರ್ನಾಟಕ ತುಮಕೂರಿನಲ್ಲಿ ಒಂದು ಫುಡ್‍ಪಾರ್ಕ್ ನಿರ್ಮಾಣ ಮಾಡಲಾಗುತ್ತಿದ್ದು, ನಮ್ಮ ಸರ್ಕಾರ ಬಂದ ಮೇಲೆ 63 ಶೀತಲ ಗೃಹಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.  ಸಂಸ್ಥೆಯ ಅಧ್ಯಕ್ಷ ಆರ್.ಶಿವಕುಮಾರ್, ಸಲಹೆಗಾರ ಡಾ.ವಸಂತಕುಮಾರ್, ಸಹ ಅಧ್ಯಕ್ಷ ಎಸ್.ಬಾಬು, ಮಯ್ಯಾಸ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸದಾನಂದ ಮಯ್ಯ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin