ಮೋದಿ ಭ್ರಷ್ಟಾಚಾರ ರಹಿತ ಆಡಳಿತ ನಮ್ಮ ಮುಂದಿನ ಚುನಾವಣೆಗೆ ಆನೆ ಬಲ : ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

R-Ashok
ಬೆಂಗಳೂರು,ಮೇ 30-ಪ್ರಧಾನಿ ನರೇಂದ್ರ ಮೋದಿ ಅವರ ಭ್ರಷ್ಟಾಚಾರ ರಹಿತ ಆಡಳಿತ ಹಾಗೂ ಜನಪ್ರಿಯತೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಆನೆ ಬಲ ತರಲಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದ್ದಾರೆ.  ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ಪ್ರಚುರಪಡಿಸುವ ಮೋದಿ ಫೆಸ್ಟ್ ವಾಹನಕ್ಕೆ ಪಕ್ಷದ ಕಚೇರಿಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.   ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಒಂದೇ ಒಂದು ಭ್ರಷ್ಟಾಚಾರ ಆರೋಪಕ್ಕೆ ಸಿಲುಕಿಲ್ಲ. ನರೇಂದ್ರ ಮೋದಿ ಅವರು ಪ್ರಧಾನಿ ಆದಮೇಲೆ ಇಡೀ ದೇಶದ ಚಿತ್ರಣವೇ ಬದಲಾಗಿದೆ ಎಂದು ಹೇಳಿದರು.ನರೇಂದ್ರ ಮೋದಿ, ಅಮಿತ್ ಷಾ ಅವರ ಚಾಣಕ್ಷತೆ, ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ನಾಯಕತ್ವ ಬಿಜೆಪಿಗೆ ಭೀಮ ಬಲ ತರಲಿದೆ. ಕಾರ್ಯಕರ್ತರ ಪಡೆ ನಮ್ಮ ಬೆನ್ನಿಗೆ ಬಿದ್ದಿರುವುದರಿಂದ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ಹಿಂದೆ ಎರಡು ಅವಧಿಗೆ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆಕಾಶದಿಂದ ಪಾತಾಳದವರೆಗೆ ಭ್ರಷ್ಟಾಚಾರ ನಡೆಸಿತ್ತು. ಇದರಿಂದ ಭಾರತ ಎಂದರೆ ಭ್ರಷ್ಟಾಚಾರಗಳ ಸ್ವರ್ಗ ಎಂದು ವಿದೇಶಿ ಗರ ಅಪಮಾನ ಮಾಡುತ್ತಿದ್ದರು. ಅಂತಹ ಕಳಂಕವನ್ನು ತೊಡೆದು ಹಾಕಿ ವಿಶ್ವದಲ್ಲೇ ಭಾರತವನ್ನು ಎತ್ತರಕ್ಕೆ ಕೊಂಡೊ ಯ್ದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಪ್ರಶಂಸಿಸಿದರು.

2018ರ ವಿಧಾನಸಭೆ ಚುನಾವಣೆಯನ್ನು ನಾವು ಸವಾಲಾಗೇ ತೆಗೆದುಕೊಂಡಿದ್ದೇವೆ. ಈಗಾಗಲೇ ಚುನಾವಣೆಗೆ ಬೇಕಾದ ಎಲ್ಲ ಸಿದ್ದತೆಗಳನ್ನು ಆರಂಭಿಸಿದ್ದೇವೆ. ರಾಜ್ಯ ಸರ್ಕಾರದ ವೈಫಲ್ಯಗಳು ಹಾಗೂ ಕಾಂಗ್ರೆಸ್‍ನ ಆಂತರಿಕ ಕಚ್ಚಾಟ ಬಿಜೆಪಿಗೆ ವರದಾನವಾಗಲಿದೆ ಎಂದರು.  ಯಾರು ಏನೇ ಹೇಳಿದರೂ ಮುಂದಿನ ಚುನಾವಣೆ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ದ ಸಣ್ಣಪುಟ್ಟ ಗೊಂದಲಗಳು ನಿವಾರಣೆಯಾಗಿರುವುದರಿಂದ ಕಾರ್ಯಕರ್ತರು ಒಗ್ಗೂಡಿ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದೇವೆ ಎಂದು ಹೇಳಿದರು.  ಸಂಸದ ಪಿ.ಸಿ.ಮೋಹನ್, ಶಾಸಕ ಅಶ್ವಥ್ ನಾರಾಯಣ್, ಬೆಂಗಳೂರು ನಗರಾಧ್ಯಕ್ಷ ಸದಾಶಿವ ಸೇರಿದಂತೆ ಮತ್ತಿತರರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin