ಬೀಗ ಹಾಕುವ ಸ್ಥಿತಿ ತಲುಪಿದ ಈಶ್ವರಪ್ಪನವರ ಬ್ರಿಗೇಡ್ ಸಾಮ್ರಾಜ್ಯ

ಈ ಸುದ್ದಿಯನ್ನು ಶೇರ್ ಮಾಡಿ

Eshwarappa-Brigade--01

ಬೆಂಗಳೂರು,ಜೂ.1- ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳಲ್ಲಿ ಯಾವುದೇ ಬಿಜೆಪಿ ನಾಯಕರು ಪಾಲ್ಗೊಳ್ಳುವಂತಿಲ್ಲ ಎಂದು ದೆಹಲಿ ವರಿಷ್ಠರು ಕಟ್ಟುನಿಟ್ಟಾಗಿ ಆದೇಶ ಸೂಚಿಸಿರುವ ಬೆನ್ನಲ್ಲೇ ವಿಧಾನ ಪರಿಷತ್‍ನ ಪ್ರತಿ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ಬ್ರಿಗೇಡ್ ಚಟುವಟಿಕೆಗಳಿಂದ ದೂರ ಉಳಿದಿದ್ದು, ಅದಕ್ಕೆ ಬೀಗ ಹಾಕುವ ಸ್ಥಿತಿ ಬಂದಿದೆ.  ರಾಯಣ್ಣ ಬ್ರಿಗೇಡ್‍ನ್ನು ಹುಟ್ಟುಹಾಕಿದ ಹಿಂದುಳಿದ ವರ್ಗಗಳ ನಾಯಕರುಗಳು, ಈಶ್ವರಪ್ಪನವರನ್ನು ಬ್ರಿಗೇಡ್‍ನ ಮುಂಚೂಣಿಯಲ್ಲಿ ನಿಲ್ಲಿಸಿ ಬ್ರಿಗೇಡ್ ಚಟುವಟಿಕೆಗಳನ್ನು ನಡೆಸುವ ಮೂಲಕ ಸಂಘಟನೆ ನಡೆಸಿದ್ದರು. ಆದರೆ, ಈಗ ಈಶ್ವರಪ್ಪನವರು ಈ ಸಂಘಟನೆಯ ಚಟುವಟಿಕೆಗಳಿಂದ ದೂರ ಉಳಿಯುವ ಅನಿವಾರ್ಯತೆಗೆ ಸಿಲುಕಿರುವುದರಿಂದ ಬ್ರಿಗೇಡ್‍ಗೆ ಗಟ್ಟಿಯಾದ ರಾಜಕೀಯ ಮುಖಂಡರನ್ನು ಹುಡುಕಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಜನಪ್ರಿಯ ಮುಖಂಡರು ಬ್ರಿಗೇಡ್‍ನ ಜತೆ ಗುರುತಿಸಿಕೊಳ್ಳುವುದು ಕಷ್ಟ. ಹಾಗಾಗಿ ಬ್ರಿಗೇಡ್ ಬಂದ್ ಆಗುವ ಸಾಧ್ಯತೆಗಳೇ ಹೆಚ್ಚಿವೆ.  ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ನಿಂದ ರಾಜ್ಯ ಬಿಜೆಪಿಯಲ್ಲಿ ಬಿರುಗಾಳಿಯೇ ಎದ್ದಿತ್ತು. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಕೆ.ಎಸ್. ಈಶ್ವರಪ್ಪ ನಡುವಿನ ವಿರಸಕ್ಕೂ ಈ ಬ್ರಿಗೇಡ್ ಕಾರಣವಾಗಿತ್ತು. ಬ್ರಿಗೇಡ್‍ನಿಂದ ಬಿಜೆಪಿ ಮುಖಂಡರ ಜಗಳ ಹಾದಿರಂಪ-ಬೀದಿರಂಪ ಆಗಿತ್ತು. ಈ ಹಿನ್ನೆಲೆಯಲ್ಲಿ ವರಿಷ್ಠರು ಮಧ್ಯೆ ಪ್ರವೇಶಿಸಿ ಇಬ್ಬರೂ ನಾಯಕರನ್ನು ಕರೆಸಿ ಸಂಧಾನ ನಡೆಸಿದ್ದರು.

ಬ್ರಿಗೇಡ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಸೂಚನೆಯನ್ನು ಬಿಜೆಪಿ ನಾಯಕರಿಗೆ ರವಾನಿಸಲಾಗಿತ್ತು. ಆದರೂ ಈಶ್ವರಪ್ಪ ಅವರು ಬ್ರಿಗೇಡ್‍ನ ಒಂದೆರಡು ಸಭೆಗಳಲ್ಲಿ ಪಾಲ್ಗೊಂಡಿದ್ದರು. ಜತೆಗೆ ಬ್ರಿಗೇಡ್ ಚಟುವಟಿಕೆಗಳು ನಿಲ್ಲುವುದಿಲ್ಲ ಎಂದು ಹೇಳಿ ಗೊಂದಲ ಸೃಷ್ಟಿಸಿದ್ದರು. ಈ ಎಲ್ಲಾ ಗೊಂದಲಗಳ ಹಿನ್ನೆಲೆಯಲ್ಲಿ ಬಿಜೆಪಿಯ ಹೈಕಮಾಂಡ್ ಬ್ರಿಗೇಡ್ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಶಿಸ್ತು ಕ್ರಮ ನಿಶ್ಚಿತ ಎಂಬ ಸಂದೇಶ ರವಾನಿಸಿತ್ತು.

ಹೈಕಮಾಂಡ್‍ನ ಕಟ್ಟಪ್ಪಣೆ ಹಿನ್ನೆಲೆಯಲ್ಲಿ ಈಶ್ವರಪ್ಪನವರು ಕೆಲ ದಿನಗಳ ಹಿಂದೆ ರಾಯಚೂರಿನಲ್ಲಿ ನಡೆದ ಬ್ರಿಗೇಡ್‍ನ ಅಭ್ಯಾಸವರ್ಗದಲ್ಲಿ ಪಾಲ್ಗೊಂಡಿರಲಿಲ್ಲ. ಇದಾದ ನಂತರ ನಡೆದ ಬಿಜೆಪಿ ಕೋರ್ ಕಮಿಟಿಯ ಸಭೆಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ಸಂಪೂರ್ಣ ಜವಾಬ್ದಾರಿಯನ್ನು ಈಶ್ವರಪ್ಪನವರಿಗೆ ವಹಿಸುವ ತೀರ್ಮಾನವನ್ನು ಕೈಗೊಳ್ಳಲಾಯಿತು.   ಈ ತೀರ್ಮಾನದ ಹಿನ್ನೆಲೆಯಲ್ಲಿ ಈಶ್ವರಪ್ಪನವರು ಈಗ ಯಾವುದೇ ಹಿಂದುಳಿದ ವರ್ಗದ ಸಮಾವೇಶವನ್ನು ಪಕ್ಷದ ಮೂಲಕವೇ ನಡೆಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಹಾಗಾಗಿ ಬ್ರಿಗೇಡ್ ಚಟುವಟಿಕೆಗಳು ಮುಂದುವರೆಯುವ ಸಾಧ್ಯತೆಗಳು ವಿರಳ ಎನ್ನಲಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin