ತಮಿಳುನಾಡಿನಲ್ಲಿ ಕಾಡಾನೆ ದಾಳಿಗೆ ನಾಲ್ವರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Attack--001

ಕೊಯಮತ್ತೂರು, ಜೂ.2-ಕಾಡಾನೆಯೊಂದು ನಡೆಸಿದ ಭಯಾನಕ ದಾಳಿಗೆ ಬಾಲಕಿಯೊಬ್ಬಳು ಸೇರಿದಂತೆ ನಾಲ್ವರು ಮೃತಪಟ್ಟ ಭೀಕರ ಘಟನೆ ಇಂದು ಮುಂಜಾನೆ ತಮಿಳುನಾಡಿನ ಕೊಯಮತ್ತೂರು ಹೊರವಲಯದ ವೆಲ್ಲಾಲೂರಿನಲ್ಲಿ ಸಂಭವಿಸಿದೆ. ಗಜದ ಕ್ರೌರ್ಯಕ್ಕೆ ಇನ್ನಿಬ್ಬರು ತೀವ್ರ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.   ಪೋತನೂರು ಗ್ರಾಮದ ವಾಸಿಗಳಾದ ಗಾಯತ್ರಿ, ಪಳನಿಸ್ವಾಮಿ, ನಾಗಮ್ಮಾಳ್ ಮತ್ತು ಜ್ಯೋತಿಮಣಿ ಆನೆ ತುಳಿತಕ್ಕೆ ಮೃತಪಟ್ಟ ದುರ್ದೈವಿಗಳು.ಪೋತನೂರು ಅರಣ್ಯಕ್ಕೆ ಹೊಂದಿಕೊಂಡ ಗ್ರಾಮವಾಗಿದ್ದು, ತಮ್ಮ ಮನೆ ಹೊರಗೆ ಮಲಗಿದ್ದ ಈ ನಾಲ್ವರು ಕಾಡಾನೆಯ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ. ಮಡುಕ್ಕರೈ ಅರಣ್ಯದಿಂದ ಕೆಲವು ದಿನಗಳ ಹಿಂದೆ ಗ್ರಾಮಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ ಈ ಕಾಡಾನೆ ಮುಂಜಾನೆ 3.30ರ ಸಮಯದಲ್ಲಿ ಮನೆಯ ವರಾಂಡದಲ್ಲಿ ಮಲಗಿದ್ದ 12 ವರ್ಷದ ಬಾಲಕಿಯನ್ನು ಹೊಸಕಿ ಹಾಕಿತು. ನಂತರ ಪಕ್ಕದ ಮನೆಗೆ ನುಗ್ಗಿದ ಆನೆಯು ಇಬ್ಬರು ಮಹಿಳೆಯರೂ ಸೇರಿದಂತೆ ಮೂವರ ಮೇಲೆ ದಾಳಿ ನಡೆಸಿ ತೀವ್ರ ಗಾಯಗೊಳಿಸಿತು. ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕೊಂಡ್ಯೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಇನ್ನಿಬ್ಬರು ಗಾಯಾಳುಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಶೋಚನೀಯವಾಗಿದೆ.

ನರ ಹಂತಕ ಕಾಡಾನೆಯನ್ನು ಅರಣ್ಯಕ್ಕೆ ಓಡಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಒಂಟಿ ಸಲಗವನ್ನು ಬೆದರಿಸಿ ಅಡವಿಗೆ ಅಟ್ಟಲು ಕುಮ್ಮಿಗಳನ್ನು (ಪಳಗಿದ ಆನೆಗಳು) ಬಳಸಲಾಗುತ್ತಿದೆ. ಹಾಗೂ ಅರವಳಿಕೆ ಮದ್ದು ನೀಡಿ ಅದನ್ನು ಸೆರೆ ಹಿಡಿಯಲು ಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಒಂಟಿ ಸಲಗವೊಂದು ಇತ್ತೀಚೆಗೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ ಇಬ್ಬರು ಯೋಧರನ್ನು ತುಳಿದು ಕೊಂದ ಘಟನೆ ನಡೆದಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin