ಮನಸ್ಸಿನ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದನ್ನು ಹೇಳಿಕೊಡುತ್ತೆ ಈ ಕಥೆ ..!

ಈ ಸುದ್ದಿಯನ್ನು ಶೇರ್ ಮಾಡಿ

Emotions--01

ಮನುಷ್ಯನಿಗೆ ಮುಖವೇ ಮನಸ್ಸಿನ ಕನ್ನಡಿ ಎಂಬ ಮಾತು ಜನಜನಿತ. ಆದರೆ ಇಂತಹ ಮಾತನ್ನು ಕೇಳಿದಾಗ ಅದರ ಅನುಭವ ನಮಗಿರುವುದಿಲ್ಲ. ಮನುಷ್ಯನ ಸ್ವಭಾವ, ನಡತೆ, ಗುಣ ಏನೇ ಇದ್ದರೂ ಅವುಗಳ ಸಮ್ಮಿಳಿತವಾದ ಒಂದು ಭಾವ ಮುಖದಲ್ಲಿ ಗೋಚರಿಸುತ್ತದೆ. ಹೀಗಾಗಿ ಅವನ ಮನಸ್ಸನ್ನು ಭಾವನೆಗಳ ಪ್ರತಿಬಿಂಬದಂತೆ ಮುಖ ಕಾಣುತ್ತದೆ ಎಂಬುದು ಇದರ ಒಳಾರ್ಥ. ಇಂತಹ ಅದೆಷ್ಟೊ ನುಡಿಗಟ್ಟುಗಳು ಜೀವನವನ್ನು ಅರ್ಥೈಸಿಕೊಳ್ಳುವಲ್ಲಿ ನಮಗೆ ಮಾರ್ಗದರ್ಶಕವಾಗಿವೆ. ಅದು ನಮ್ಮ ಹಿರಿಯರು, ಅನುಭವಿಗಳು, ಋಷಿಮುನಿಗಳು ಸೇರಿದಂತೆ ಅನೇಕ ಮಹಾನೀಯರು ಹಾಕಿಕೊಟ್ಟಿರುವ ದಿಕ್ಸೂಚಿಗಳು ಎಂದರೂ ತಪ್ಪಲ್ಲ.ಮನುಷ್ಯನ ನಡವಳಿಕೆಗಳಿಗೆ ಮಾತ್ರವಲ್ಲದೆ ಜೀವನದಲ್ಲಿನ ಆಗುಹೋಗುಗಳಿಗೆ ಸಂಬಂಧಿಸಿದಂತೆಯೂ ಇಂತಹ ನುಡಿಗಟ್ಟುಗಳು ಪ್ರಚಲಿತದಲ್ಲಿದೆ. ಅದಕ್ಕೆ ಉದಾಹರಣೆ ಸಾಕಷ್ಟಿವೆ. ಆದರೆ ಬುದ್ಧ , ಬಸವಣ್ಣನವರು ಸಮಾಜ ಬದಲಾವಣೆಯ ಕೇಂದ್ರ ಬಿಂದುವಾಗಿದ್ದರು ಎಂಬುದಕ್ಕೆ ಅವರು ಅನುರಿಸಿದ ಮಾರ್ಗ, ಹಾಕಿಕೊಟ್ಟ ದಾರಿ ಮನುಷ್ಯ ತನ್ನನ್ನು ತಾನು ತಿದ್ದಿಕೊಂಡು ಬದುಕಲು ಅನುವು ಮಾಡಿದಂತವು. ಅಂತಹ ಒಂದು ಕಥೆ ಇಲ್ಲಿದೆ.   ಬುದ್ಧ ತನ್ನ ಅನುಯಾಯಿಗಳೊಂದಿಗೆ ಊರಿಂದ ಊರಿಗೆ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಒಂದು ಊರಿಗೆ ಬಂದಿದ್ದರು. ಬುದ್ಧನಿಗೆ ದಾಹ ಉಂಟಾಗಿದ್ದರಿಂದ ತನ್ನ ಅನುಯಾಯಿಗಳಿಗೆ ನೀರು ತರಲು ಹೇಳುತ್ತಾರೆ.

ಅನುಯಾಯಿಗಳು ಸಮೀಪದಲ್ಲೇ ಕೊಳವಿರುವುದು ಕಂಡುಬಂತು. ಆದರೆ ಈ ಕೊಳದಲ್ಲಿ ಕೆಲವರು ಬಟ್ಟೆ ಒಗೆಯುತ್ತಿದದ್ದು ಕಂಡುಬಂತು. ಇದರಿಂದಾಗಿ ಅಲ್ಲಿನ ನೀರು ಕಲುಷಿತಗೊಂಡಿತ್ತು. ಇದನ್ನು ಕಂಡ ಪರಿಚಾರಕರು ಬುದ್ಧನ ಬಳಿ ಹಿಂದಿರುಗಿ ಹತ್ತಿರದಲ್ಲೇ ಕೊಳ ಇದೆ. ತಮಗೆ ಕುಡಿಯಲೆಂದು ನೀರು ತರಲು ಹೋಗಿದ್ದೆವು. ಆದರೆ ಕುಡಿಯಲು ಯೋಗ್ಯವಾದ ನೀರು ಅಲ್ಲಿಲ್ಲ. ನೀರಿಗೆ ಮಣ್ಣು ಸೇರಿ ಕಲುಷಿತಗೊಂಡಿದೆ ಎಂದರು.   ಇದನ್ನು ಆಲಿಸಿದ ಬುದ್ಧ ಮುಗುಳ್ನಗೆ ನಕ್ಕು ಸುಮ್ಮನಾದರು. ಆದರೆ ಸ್ವಲ್ಪ ಸಮಯವಾದ ನಂತರ ಮತ್ತೆ ತಮ್ಮ ಅನುಯಾಯಿಗೆ ಕೊಳದಿಂದ ನೀರು ತರಲು ಹೇಳಿದರು.


ಬುದ್ಧನ ಮಾತಿನಂತೆ ಅನುಯಾಯಿಗಳು ಮತ್ತೆ ಕೊಳದ ಬಳಿಗೆ ತೆರಳಿದಾಗ ಅಲ್ಲಿ ಯಾರೂ ಇರಲಿಲ್ಲ. ವಾತಾವರಣವು ಪ್ರಶಾಂತವಾಗಿತ್ತು. ನೀರು ಸಂಪೂರ್ಣವಾಗಿ ತಿಳಿಯಾಗಿರುವುದು ಕಂಡುಬಂತು. ಹಾಗಾಗಿ ಮಡಿಕೆಯಲ್ಲಿ ಸಾಕಷ್ಟು ನೀರನ್ನು ತುಂಬಿಕೊಂಡು ಬಂದು ಕೊಟ್ಟರು.   ಆ ತಿಳಿಯಾದ ನೀರನ್ನು ಕಂಡ ಬುದ್ಧ ಅನುಯಾಯಿಗಳನ್ನು ನೀರು ಇಷ್ಟು ತಿಳಿಯಾಗಲು ನೀವೇನೂ ಮಾಡಲಿಲ್ಲ. ಆದರೆ ಸ್ವಲ್ಪ ಸಮಯ ಅದರಷ್ಟಕ್ಕೆ ಬಿಟ್ಟಿದ್ದರಿಂದ ಮಣ್ಣೆಲ್ಲ ತಳದಲ್ಲಿ ಸೇರಿ ನೀರು ತಿಳಿಯಾಗಿದೆ. ಅದೇ ರೀತಿ ಮನುಷ್ಯನ ಬುದ್ದಿಯೂ ಸಹ ವಿಚಲಿತವಾಗಿರುತ್ತದೆ. ಹಾಗಾಗಿ ಗೊಂದಲ, ಉದ್ವೇಗ, ಕೋಪ ಇತ್ಯಾದಿ ಸಂದರ್ಭದಲ್ಲಿ ಕೆಲ ಸಮಯ ಅದನ್ನು ಹಾಗೆ ಬಿಟ್ಟುಬಿಡಬೇಕು. ಏನು ತೊಂದರೆ ಕೊಡಬಾರದು. ಶ್ರಮವಿಲ್ಲದೆ ಆಗ ಬುದ್ಧಿ ತಿಳಿಯಾಗುತ್ತದೆ ಎಂದು ಬೋಧಿಸಿದರು.

ಇದರಿಂದ ಅರಿಯುವ ವಿಚಾರವೆಂದರೆ ಮನಃಶಾಂತಿ ಒಂದು ಕೆಲಸವಲ್ಲ. ಅಂತರಂಗದಲ್ಲಿ ಸಮಾಧಾನ ಅಥವಾ ಶಾಂತಿಯಿಂದಿದ್ದಾಗ ಅದು ಎಲ್ಲರಲ್ಲೂ ಗೋಚರಿಸುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin