10ಲಕ್ಷ ಸಸಿ ನೆಟ್ಟು ಬೆಂಗಳೂರನ್ನು ಗ್ರೀನ್‍ಸಿಟಿ ಮಾಡುವ ಯೋಜನೆಗೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

BBMP--01

ಬೆಂಗಳೂರು, ಜೂ.3– ಈ ಮಳೆಗಾಲದಲ್ಲಿ 10 ಲಕ್ಷ ಸಸಿ ನೆಡುವ ಮೂಲಕ ಗ್ರೀನ್‍ಸಿಟಿ ಮಾಡುವ ಯೋಜನೆಗೆ ಬಿಬಿಎಂಪಿ ಚಾಲನೆ ನೀಡಿದೆ. ಖಾಲಿ ಪ್ರದೇಶದಲ್ಲಿ ಗಿಡ-ಮರ ಬೆಳೆಸುವಂತೆ ಸಾರ್ವಜನಿಕರನ್ನು ಪ್ರೊತ್ಸಾಹಿಸುವ ಉದ್ದೇಶದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಗ್ರೀನ್‍ಆ್ಯಪ್ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರು ಆ್ಯಪ್ ಮೂಲಕ ತಮ್ಮ ವ್ಯಾಪ್ತಿಯಲ್ಲಿ ಗಿಡ-ಮರ ಬೆಳೆಸುವ ಆಪೇಕ್ಷೆ ವ್ಯಕ್ತಪಡಿಸಿದರೆ ಮನೆ ಬಾಗಿಲಿಗೆ ಸಸಿ ನೀಡುವುದು ಗ್ರೀನ್‍ಆ್ಯಪ್‍ನ ಉದ್ದೇಶ. ಬೆಂಗಳೂರು ಉಸ್ತುವಾರಿ ಸಚಿವರ ಸಭೆಯಲ್ಲಿ ನಗರದಲ್ಲಿ 10 ಲಕ್ಷ ಗಿಡ-ಮರ ನೆಡಿಸುವ ತೀರ್ಮಾನ ಕೈಗೊಳ್ಳಲಾಗಿದ್ದು, ಈಗಾಗಲೇ ಬಿಬಿಎಂಪಿ ವ್ಯಾಪ್ತಿಯ 6 ವಲಯಗಳಲ್ಲಿ 10ಲಕ್ಷಕ್ಕೂ ಹೆಚ್ಚು ಸಸಿ ಬೆಳೆಸುವ ಕಾರ್ಯ ಕೈಗೊಳ್ಳಲಾಗಿದೆ.ಗ್ರೀನ್‍ಆ್ಯಪ್ ಮೂಲಕ ಸಾರ್ವಜನಿಕರು ಒಂದು ಲಕ್ಷ ಸಸಿಗಳಿಗೆ ಬೇಡಿಕೆ ಸಲ್ಲಿಸಿದ್ದು, ಈ ಮಳೆಗಾಲದಲ್ಲಿ ಅವಶ್ಯವಿರುವ ಸಸಿ ವಿತರಿಸಲು ಬಿಬಿಎಂಪಿ ತೀರ್ಮಾನಿಸಿದೆ.  ಹೀಗಾಗಿ ವಿವಿಧ ಪ್ರದೇಶಗಳಲ್ಲಿ ಬೆಳೆಸಲಾಗುತ್ತಿರುವ ಸಸಿಗಳ ಸ್ಥಿತಿಗತಿ ಅಧ್ಯಯನ ನಡೆಸಲು ಮೇಯರ್ ಜಿ.ಪದ್ಮಾವತಿ ತೀರ್ಮಾನಿಸಿದ್ದಾರೆ. ಈಗಾಗಲೇ 6 ತಂಡಗಳನ್ನು ರಚನೆ ಮಾಡಿರುವ ಪದ್ಮಾವತಿ ಅವರು ಖುದ್ದು ಪೂರ್ವ ವಲಯದ ಕೆಂಪಾಪುರದಲ್ಲಿರುವ ಸಸಿ ಬೆಳೆಸುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅದೇ ರೀತಿ ಉಪಮಹಾಪೌರ ಆನಂದ್ ಅವರು ಅಟ್ಟೂರಿಗೆ ಹಾಗೂ ವಿವಿಧ ಅಧಿಕಾರಿಗಳ ತಂಡ ಸುಮನಹಳ್ಳಿ, ಜ್ಞಾನಭಾರತಿ, ಕೂಡ್ಲು ಮತ್ತು ಹೆಸರುಘಟ್ಟದ ನರ್ಸರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.   ಎಲ್ಲಾ ತಂಡಗಳು ನರ್ಸರಿಗಳಲ್ಲಿರುವ ಸಸಿಗಳ ಸ್ಥಿತಿಗತಿಗಳ ಬಗ್ಗೆ ಮೇಯರ್ ಅವರಿಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಮೇಯರ್ ಜಿ.ಪದ್ಮಾವತಿ, ಈ ಮಳೆಗಾಲ ಪೂರ್ಣಗೊಳ್ಳುವುದರೊಳಗೆ ಬಿಬಿಎಂಪಿ ಎಲ್ಲಾ ವ್ಯಾಪ್ತಿಯಲ್ಲೂ 10ಲಕ್ಷ ಸಸಿ ನೆಡುವ ಮೂಲಕ ಮತ್ತೆ ಉದ್ಯಾನ ನಗರಿ ಹೆಸರನ್ನು ಚಿರಸ್ಥಾಯಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin