ಗ್ರಾಮಪಂಚಾಯತ್ ಭವನ ನಿರ್ಮಾಣಕ್ಕೆ ಸಿಬ್ಬಂದಿಯ 1 ತಿಂಗಳ ವೇತನ ನೀಡುವಂತೆ ಕೇಳಿದ ಇಲಾಖೆ..!

ಈ ಸುದ್ದಿಯನ್ನು ಶೇರ್ ಮಾಡಿ

Payment--01

ಬೆಂಗಳೂರು,ಜೂ.5- ಗ್ರಾಮಪಂಚಾಯತ್ ಭವನ ನಿರ್ಮಾಣ ಮಾಡಲು ಸಿಬ್ಬಂದಿಗಳು ಒಂದು ತಿಂಗಳ ವೇತನ ನೀಡಬೇಕೆಂದು ರಾಜ್ಯ ಸರ್ಕಾರ ಸೂಚಿಸಿರುವುದು ಭಾರೀ ವಿವಾದವನ್ನು ಸೃಷ್ಟಿಸಿದೆ.   ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಇಲಾಖೆಯ ಅಧಿಕಾರಿಗಳು ಒಂದು ತಿಂಗಳ ವೇತನವನ್ನು ನೀಡಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಾಗಲಾಂಬಿಕ ದೇವಿ ಸುತ್ತೋಲೆ ಹೊರಡಿಸಿದ್ದಾರೆ.  ಇದಕ್ಕೆ ಅಧಿಕಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಕಟ್ಟಡಗಳನ್ನು ನಿರ್ಮಿಸುವುದು ಸರ್ಕಾರವೇ ಹೊರತು ಅಧಿಕಾರಿಗಳು ಯಾವ ಕಾರಣಕ್ಕಾಗಿ ತಿಂಗಳ ವೇತನ ನೀಡಬೇಕೆಂದು ಕೆಲವರು ಪ್ರಶ್ನಿಸಿದ್ದಾರೆ.ಈ ತಿಂಗಳ 1ರಂದು ನಾಗಲಾಂಬಿಕದೇವಿ ಹೊರಡಿಸಿರುವ ಅಧಿಸೂಚನೆಯಲ್ಲಿ ಬೆಂಗಳೂರಿನ ಜಕ್ಕೂರು ಸಮೀಪ 11 ಮಹಡಿಯ ಪಂಚಾಯತ್‍ರಾಜ್ ಭವನ ನಿರ್ಮಾಣ ಮಾಡುತ್ತಿದೆ. ಇದಕ್ಕೆ 47.45 ಕೋಟಿ ವೆಚ್ಚವಾಗಲಿದೆ.   ರಾಜ್ಯದ 6027 ಗ್ರಾಮಪಂಚಾಯ್ತಿ ಸಿಬ್ಬಂದಿ, ಜನಪ್ರತಿನಿಧಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಒಂದು ತಿಂಗಳ ವೇತನವನ್ನು ನೀಡಲೇಬೇಕೆಂದು ಸೂಚಿಸಿದ್ದಾರೆ. ಅಲ್ಲದೆ ಪ್ರತಿಯೊಂದು ಗ್ರಾಮಪಂಚಾಯ್ತಿಗಳು ತಲಾ 50 ಸಾವಿರದಿಂದ 10 ಲಕ್ಷದವರೆಗೂ ದೇಣಿಗೆ ನೀಡಬೇಕು. ಇದು ಇಲಾಖೆಯ ಕಟ್ಟಡವಾಗಿರುವುದರಿಂದ ಸಿಬ್ಬಂದಿ ಸಹಕರಿಸಬೇಕೆಂದು ಕೋರಿದ್ದಾರೆ.

ಕಳೆದ ಮೇ 23ರಂದು ನಾಗಲಾಂಬಿಕದೇವಿ ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದರು. ಕಟ್ಟಡಕ್ಕೆ ಸರಿಸುಮಾರು 50 ಕೋಟಿ ವೆಚ್ಚವಾಗಲಿದ್ದು , ಸರ್ಕಾರ ಕಳೆದ ಬಜೆಟ್‍ನಲ್ಲಿ 5 ಕೋಟಿ ಹಾಗೂ ಅಬ್ದುಲ್ ನಜೀರ್‍ಸಾಬ್, ಗ್ರಾಮೀಣಾಭಿವೃದ್ದಿ ಸಂಸ್ಥೆ, ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ 3.9 ಕೋಟಿ ಅನುದಾನವನ್ನು ಬಳಸಿಕೊಂಡಿದ್ದೇವೆ. ಆದರೂ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಾಗದ ಕಾರಣ ಸಿಬ್ಬಂದಿ ವೇತನ ನೀಡುವುದು ಅನಿವಾರ್ಯ ಎಂದಿದ್ದಾರೆ.ಕೇಂದ್ರ ಸರ್ಕಾರವು ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುತ್ತಿಲ್ಲ. ರಾಜ್ಯದ ಒಟ್ಟು 6027 ಗ್ರಾಮ ಪಂಚಾಯ್ತಿಯಿಂದ ಸಿಬ್ಬಂದಿಗಳು ಒಂದು ತಿಂಗಳ ವೇತನ ನೀಡಿದರೆ 30.13 ಕೋಟಿ ಹಣ ಸಂಗ್ರಹವಾಗುತ್ತದೆ. ಇದರಿಂದ ನಾವು ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಮಾಡಲು ಅನುಕೂಲವಾಗುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ವೇತನವನ್ನು ಇಲಾಖೆಗೆ ಪಾವತಿಸಬೇಕು ಎಂದು ಸೂಚಿಸಿದ್ದಾರೆ. ಇದು ಅಧಿವೇಶನದಲ್ಲಿ ಚರ್ಚೆಗೊಳಪಡುವ ಸಾಧ್ಯತೆ ಇದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin