ದೇಶದ ಇತರೆ ರಾಜ್ಯಗಳಲ್ಲಿ ಕಾಂಗ್ರೆಸ್ ಬಲಪಡಿಸಲು ‘ಕರ್ನಾಟಕ ಮಾದರಿ’ ಅನುಕರಣೆ

ಈ ಸುದ್ದಿಯನ್ನು ಶೇರ್ ಮಾಡಿ

COngress--01

ಬೆಂಗಳೂರು, ಜೂ.6-ಕರ್ನಾಟಕ ಕಾಂಗ್ರೆಸ್ ಪಕ್ಷದ ಒಗ್ಗಟ್ಟಿನ ಮಾದರಿಯನ್ನು ಇತರೆ ರಾಜ್ಯಗಳಲ್ಲಿ ಅನುಸರಿಸಲು ನಿರ್ಧರಿಸಿರುವ ಹೈಕಮಾಂಡ್ ಎಲ್ಲಾ ರಾಜ್ಯಗಳ ಕಾಂಗ್ರೆಸ್ ಮುಖಂಡರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಲು ತೀರ್ಮಾನಿಸಿದೆ.  ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸಂಬಂಧ ರಾಜ್ಯದ ಎಲ್ಲಾ ನಾಯಕರಲ್ಲಿ ಮೂಡಿಬಂದ ಒಗ್ಗಟ್ಟು, ಎಲ್ಲಾ ಸಮುದಾಯಗಳ ನಾಯಕರ ಏಕತೆ ಪ್ರದರ್ಶನ ಬೇರೆ ರಾಜ್ಯಗಳಿಗೂ ಮಾದರಿಯಾಗಬೇಕು. ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ಭಾರೀ ತಂತ್ರವನ್ನು ರೂಪಿಸಿದ್ದು, ಸದ್ಯದಲ್ಲೇ ವಿವಿಧ ರಾಜ್ಯಗಳಲ್ಲಿರುವ ಅತೃಪ್ತರು, ಭಿನ್ನಮತರನ್ನು ಕರೆಸಿ ಕರ್ನಾಟಕ ಕಾಂಗ್ರೆಸ್ ಪಕ್ಷವನ್ನು ಉದಾಹರಣೆಯಾಗಿ ತೆಗೆದುಕೊಂಡು ತಂತ್ರಗಾರಿಕೆ ರೂಪಿಸಲು ಮುಂದಾಗಿದೆ.


ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ಕಾಂಗ್ರೆಸ್‍ನಲ್ಲಿ ಭಿನ್ನಮತ, ಅಸಮಾಧಾನ ಕಂಡುಬಂದರೂ ಅದು ಸ್ಫೋಟಗೊಳ್ಳದಂತೆ ವ್ಯವಸ್ಥಿತ ಕ್ರಮ ಕೈಗೊಳ್ಳುತ್ತಾ ಬರಲಾಗಿತ್ತು.  ಕರ್ನಾಟಕದಲ್ಲಿ ಗುಟುಕು ಜೀವ ಹಿಡಿದುಕೊಂಡಿರುವ ಕಾಂಗ್ರೆಸ್ ಪಕ್ಷ ಯಾವುದೇ ಎಡವಟ್ಟು ಮಾಡಿಕೊಳ್ಳದಂತೆ ಮತ್ತೊಮ್ಮೆ ಅಧಿಕಾರ ಹಿಡಿಯಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಬೇಕು. ಹಾಗಾಗಿ ಇತ್ತೀಚಿಗೆ ನಡೆದ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಎಲ್ಲಾ ಜಾತಿ, ಜನಾಂಗದವರಿಗೆ ಪಕ್ಷದ ಅಧಿಕಾರವನ್ನು ಖುದ್ದು ಹೈಕಮಾಂಡ್ ಅವರೇ ಹಂಚಿಕೆ ಮಾಡಿ ಅಸಮಾಧಾನವನ್ನು ನಿಯಂತ್ರಣ ಮಾಡಿತು.

ಎಲ್ಲರೂ ಒಪ್ಪುವಂತಹ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಭಿನ್ನಮತ ಉಲ್ಬಣಗೊಳ್ಳಲಿಲ್ಲ. ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ದಲಿತ, ಹಿಂದುಳಿದ, ಲಿಂಗಾಯತ, ಒಕ್ಕಲಿಗ ಸೇರಿದಂತೆ ಪ್ರಬಲ ಸಮುದಾಯದ ಮುಖಂಡರಿಗೆ ಸೂಕ್ತ ಸ್ಥಾನಮಾನವನ್ನು ಕಾಂಗ್ರೆಸ್ ನೀಡಿದೆ.   ಇಬ್ಬರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿದೆ. ಇದಲ್ಲದೆ, ಪ್ರಭಾವಿ ನಾಯಕ ಸಮುದಾಯದ ಜಾರಕಿ ಹೊಳಿ ಅವರನ್ನು ಎಐಸಿಸಿ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

ಆರು ಬಾರಿ ಎಂಪಿಯಾಗಿ ಗೆಲುವು ಸಾಧಿಸಿರುವ ಕೆ.ಎಚ್.ಮುನಿಯಪ್ಪ ಅವರನ್ನು ಕಾಂಗ್ರೆಸ್ ಕಾರ್ಯಕಾರಿಣಿ ವಿಶೇಷ ಆಹ್ವಾನಿತರನ್ನಾಗಿ ನೇಮಿಸಲಾಗಿದೆ.
ಇದೇ ಮಾದರಿಯನ್ನು ಎಲ್ಲಾ ರಾಜ್ಯಗಳಲ್ಲಿ ಅನುಸರಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ಎಐಸಿಸಿ ವರಿಷ್ಠರು ಮುಂದಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOSb

Facebook Comments

Sri Raghav

Admin