ಮತ್ತೆ ಶುರುವಾಯ್ತು ತ್ಯಾಜ್ಯ ವಿಲೇವಾರಿ ಸಮಸ್ಯೆ : ಕಸದ ಲಾರಿ ತಡೆದು ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

BBMP-Protest--01

ಬೆಂಗಳೂರು, ಜೂ.7-ಬೆಳ್ಳಂಬೆಳಗ್ಗೆ ಕಣ್ಣೂರು-ಬೆಳ್ಳಳ್ಳಿ ಗ್ರಾಮಸ್ಥರು ಬಿಬಿಎಂಪಿ ಕಸದ ಲಾರಿಗಳನ್ನು ತಡೆದು ಬೃಹತ್ ಪ್ರತಿಭಟನೆ ಪ್ರಾರಂಭಿಸಿದ್ದು, ನಗರದಲ್ಲಿ ಮತ್ತೆ ಕಸವಿಲೇವಾರಿ ಸಮಸ್ಯೆ ಉದ್ಭವವಾಗುವ ಲಕ್ಷಣಗಳು ಗೋಚರಿಸಿದೆ.  ನಗರಕ್ಕೆ ಸಮೀಪವಿರುವ ಕಸವಿಲೇವಾರಿ ಘಟಕಗಳಿಗೆ ಇದುವರೆಗೆ ನಗರದ ತ್ಯಾಜ್ಯ ಹಾಕಲಾಗುತ್ತಿತ್ತು. ಈ ಘಟಕದ ಸುತ್ತಮುತ್ತಲಿನ ರೈತರು ಈಗ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಾಗಲೂರು ಸಮೀಪದ ಗಣಿಗಾರಿಕೆ ಹಳ್ಳಕ್ಕೆ ಬಿಬಿಎಂಪಿ ಕಸ ಹಾಕಲು ತೀರ್ಮಾನಿಸಿದೆ.  ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಬೆಳ್ಳಳ್ಳಿ ಕ್ವಾರಿಯಲ್ಲಿ ಕಸ ಸುರಿಯಲು ಸೂಚಿಸಿದ್ದರ ಮೇರೆಗೆ ಬಿಬಿಎಂಪಿ ಇಲ್ಲಿ ಕಸ ಹಾಕಲು ಮುಂದಾಗಿದೆ. ಮಂಡಳಿಯ ಈ ಆದೇಶ ಖಂಡಿಸಿ ಹಾಗೂ ಪಾಲಿಕೆ ನಿರ್ಧಾರ ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ಪ್ರಾರಂಭಿಸಿದ್ದಾರೆ.ಬೆಳ್ಳಳ್ಳಿ ಸಮೀಪ 150 ಎಕರೆಯಲ್ಲಿ ಗಣಿಗಾರಿಕೆ ಮಾಡಿ ಈಗ ಅಲ್ಲಿ ಹಳ್ಳ ಉಂಟಾಗಿದೆ. ಅಲ್ಲಿ ಕಸ ಹಾಕಲು ಬಿಬಿಎಂಪಿ ನಿರ್ಧರಿಸಿದ್ದು, ಇಂದು ಬೆಳಗ್ಗೆ ಅಲ್ಲಿ ಕಸ ಸುರಿಯಲು ಲಾರಿಗಳು ಹೋಗುತ್ತಿದ್ದವು. ಇದನ್ನು ಕಂಡು ರೊಚ್ಚಿಗೆದ್ದ ಗ್ರಾಮಸ್ಥರು ಲಾರಿಗಳನ್ನು ಅರ್ಧಕ್ಕೆ ತಡೆದು ರಸ್ತೆಯಲ್ಲೇ ಕುಳಿತು ಬೃಹತ್ ಪ್ರತಿಭಟನೆ ಪ್ರಾರಂಭಿಸಿದರು.  ಬೆಂಗಳೂರಿನ ಕಸ ನಮ್ಮಲ್ಲಿ ಹಾಕಬೇಡಿ, ಈಗಾಗಲೇ ಹಲವು ರೋಗಗಳು ನಮ್ಮನ್ನು ಕಾಡುತ್ತಿವೆ. ಇಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಕಸ ಹಾಕಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿರುವುದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಪ್ರತಿಭಟನೆಯಿಂದಾಗಿ ಕಸದ ಲಾರಿಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿವೆ. ಒಂದು ವೇಳೆ ಬಿಬಿಎಂಪಿ ಎಚ್ಚೆತ್ತು ಲಾರಿಗಳಲ್ಲಿನ ಕಸ ವಿಲೇವಾರಿ ಮಾಡಿಸದಿದ್ದರೆ ನಾಳೆಯಿಂದ ನಗರದಲ್ಲಿ ಕಸದ ಸಮಸ್ಯೆ ಉದ್ಭವವಾಗುವುದು ಗ್ಯಾರಂಟಿ.

ಜೆಡಿಎಸ್ ಸಾಥ್:

ಬೆಳ್ಳಳ್ಳಿ ಗ್ರಾಮಸ್ಥರ ಹೋರಾಟಕ್ಕೆ ಜೆಡಿಎಸ್ ಸಾಥ್ ನೀಡಿದ್ದು, ಇಲ್ಲಿನ ಗಣಿಗಾರಿಕೆ ಪ್ರದೇಶದಲ್ಲಿ ನಗರದ ಕಸ ವಿಲೇವಾರಿ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದೆ.  ನಾಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಹಲವು ಮುಖಂಡರು ಬೆಳ್ಳಳ್ಳಿಗೆ ಭೇಟಿ ನೀಡಿ ಪ್ರತಿಭಟನೆಗೆ ಸಾಥ್ ನೀಡಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin