ಶಿಕ್ಷಕರ ಕೊರತೆ ನೀಗಿಸಲು ಜೂ.15ರೊಳಗೆ ಅತಿಥಿ ಶಿಕ್ಷಕರ ನೇಮಕ : ತನ್ವೀರ್ ಸೇಠ್

ಈ ಸುದ್ದಿಯನ್ನು ಶೇರ್ ಮಾಡಿ

Tanveer-Sait--01

ಬೆಂಗಳೂರು, ಜೂ.7- ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಜೂ.15ರೊಳಗೆ ಅಗತ್ಯವಿರುವ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ವಿಧಾನಸಭೆಗೆ ತಿಳಿಸಿದರು. ಶಾಸಕ ಐಹೊಳೆ ಡಿ.ಮಹಾಲಿಂಗಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅತಿಥಿ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದ್ದು, ವಿದ್ಯಾರ್ಥಿಗಳ ಬೋಧನೆಗೆ ಶಿಕ್ಷಕರ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.


ರಾಜ್ಯದಲ್ಲಿ 72 ಆದರ್ಶ ಶಾಲೆಗಳಿದ್ದು, ಆ ಶಾಲೆಗಳ ಪ್ರವೇಶಕ್ಕೆ ಪೈಪೋಟಿ ಶುರುವಾಗಿದೆ. ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಶಿಕ್ಷಕರಿಗೆ ತರಬೇತಿ ಮತ್ತು ಬೋಧನೆ ನೀಡುವ ಮೂಲಕ ಆ ಶಾಲೆಗಳ ಗುಣಮಟ್ಟದ ಶಿಕ್ಷಣವನ್ನೇ ನೀಡಲಾಗುವುದು. ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗುವುದು. ಶಾಸಕರು ಅಪೇಕ್ಷೆ ಪಟ್ಟರೆ ಹೋಬಳಿಗೊಂದರಂತೆ ಆದರ್ಶ ಶಾಲೆಯನ್ನು ಪ್ರಾರಂಭಿಸಲಾಗುವುದು ಎಂದರು.  ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಶೇ.30ರಷ್ಟು ಅನುದಾನವನ್ನು ಶಾಲಾ ದುರಸ್ತಿಗೆ ನೀಡಬೇಕು. ಈ ಸಂಬಂಧ ನಿಯಮಾವಳಿಗೆ ಬದಲಾವಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಕೈಗಾರಿಕೆಗಳ ಸಿಎಸ್‍ಆರ್ ನಿಧಿ ಬಳಕೆಗೆ ನಿಯಮ ರೂಪಿಸಲಾಗುತ್ತದೆ ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿ 19,000 ಶಾಲೆಗಳಿಗೆ ಹೊಸದಾಗಿ ಬೇಡಿಕೆ ಇದೆ. 36 ಸಾವಿರ ಕೊಠಡಿಗಳು ಶಿಥಿಲವಾಗಿದ್ದು, ಅವುಗಳನ್ನು ಕೆಡವು ಮರು ನಿರ್ಮಾಣ ಮಾಡಬೇಕಿದೆ. ಅಲ್ಲದೆ 31,000 ಶಾಲಾ ಕೊಠಡಿಗಳನ್ನು ದುರಸ್ತಿ ಮಾಡಬೇಕಿದೆ ಎಂದು ಹೇಳಿದರು.  ಸರ್ಕಾರಿ ಶಾಲೆಗಳನ್ನು ಬಲವರ್ಧನೆ ಮಾಡಿ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಎಲ್ಲಾ ಕ್ಷೇತ್ರಗಳಲ್ಲೂ ಶಾಸಕರ ಮಾದರಿ ಶಾಲೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವುದರ ಜತೆಗೆ ಉತ್ತಮ ಫಲಿತಾಂಶ ಬರಬೇಕು ಎಂಬ ಉದ್ದೇಶದಿಂದ ಆ ಶಾಲೆಗಳನ್ನು ಆರಂಭಿಸಬೇಕಾಗುತ್ತದೆ. ಕೇವಲ ಶಾಸಕರ ಹೆಸರನ್ನು ಇಟ್ಟುಕೊಳ್ಳುವುದರಿಂದ ಉಪಯೋಗವಾಗುವುದಿಲ್ಲ. ಅಗತ್ಯ ಮೂಲಭೂತ ಸೌಲಭ್ಯವನ್ನು ಕಲ್ಪಿಸಬೇಕು ಎಂದರು.

ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ಕುಡಿಚಿ ವಿಧಾನಸಭಾ ಕ್ಷೇತ್ರದಲ್ಲಿರುವ ಸರ್ಕಾರಿ ಉರ್ದು ಮಾದರಿ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಶಾಸಕರ ಮಾದರಿ ಶಾಲೆಯಾಗಿದೆ ಎಂದರು.  ರಾಯಭಾಗದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯನ್ನು ಶಾಸಕರ ಮಾದರಿ ಶಾಲೆಯನ್ನಾಗಿ ಪರಿವರ್ತಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಸಚಿವರು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin