ಪಾರ್ವತಮ್ಮ ರಾಜ್‍ಕುಮಾರ್ ಚಿತ್ರರಂಗದ ಶಕ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Punith--01

ಬೆಂಗಳೂರು,ಜೂ.8- ಪಾರ್ವತಮ್ಮ ರಾಜ್‍ಕುಮಾರ್ ಚಿತ್ರರಂಗಕ್ಕೆ ಒಂದು ಶಕ್ತಿಯಾಗಿದ್ದರು. ನಮ್ಮ ಕುಟುಂಬದವರಿಗೂ ರಾಜ್ ಕುಟುಂಬಕ್ಕೂ ಒಳ್ಳೆಯ ಒಡನಾಟ ಇತ್ತು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು ಇಂದಿಲ್ಲಿ ತಿಳಿಸಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಿಂದ ಹಮ್ಮಿಕೊಂಡಿದ್ದ ಡಾ.ಪಾರ್ವತಮ್ಮ ರಾಜ್‍ಕುಮಾರ್ ಒಂದು ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನು 10 ವರ್ಷದ ಹುಡುಗನಾಗಿನಿಂದಲೂ ಕೂಡ ನನಗೆ ಅವರ ಪರಿಚಯವಿದೆ. ಪಾರ್ವತಮ್ಮ ರಾಜ್‍ಕುಮಾರ್ ಅವರ ಹೆಸರಿನಲ್ಲಿ ಮುಂದಿನ ವರ್ಷದಿಂದ ಸಾಧಕ ಮಹಿಳೆಯರಿಗೆ ಒಂದು ಲಕ್ಷ ನಗದು ಪ್ರಶಸ್ತಿ ನೀಡುವುದಾಗಿ ಬಾಬು ಅವರು ಹೇಳಿದರು. ಈ ಸಂಬಂಧ ವಾರ್ತಾ ಮತ್ತು ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಎಂ.ಲಕ್ಷ್ಮಿನಾರಾಯಣ್ ಜೊತೆ ಮಾತುಕತೆ ನಡೆಸಿದ್ದೇವೆ. ಮುಂದಿನ ವರ್ಷದಿಂದ ಈ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಲಕ್ಷ್ಮಿನಾರಾಯಣ್ ಮಾತನಾಡಿ, ಮೈಸೂರಿನಲ್ಲಿ 125 ಎಕರೆ ಭೂಮಿಯಲ್ಲಿ ಚಿತ್ರನಗರಿ ನಿರ್ಮಿಸಲು ಸರ್ಕಾರ ಅನುವು ಮಾಡಿಕೊಟ್ಟಿದೆ ಮತ್ತು ಜನತಾ ಚಿತ್ರಮಂದಿರ ಕಟ್ಟಲು ಕೂಡ ಅನುವು ಮಾಡಿಕೊಟ್ಟಿದೆ ಎಂದು ತಿಳಿಸಿದರು.   ಒಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಒಬ್ಬ ಮಹಿಳಾಮಣಿ ಇರುತ್ತಾಳೆ ಎಂಬುವುದಕ್ಕೆ ಪಾರ್ವತಮ್ಮ ಅವರೇ ಸಾಕ್ಷಿ ಎಂದು ಲಕ್ಷ್ಮಿನಾರಾಯಣ್ ಹೇಳಿದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಪಾರ್ವತಮ್ಮ ರಾಜ್‍ಕುಮಾರ್ ಅವರ ಕೊಡುಗೆ ಅಪಾರವಾದದ್ದು , ಅವರು ಚಿತ್ರರಂಗದಲ್ಲಿ ತಾಯಿಯಂತೆ ಇದ್ದವರು ಎಂದರು. ಡಾ.ರಾಜ್‍ಕುಮಾರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯಿಂದ ಬಂದ ಹಣವನ್ನು ಪಾರ್ವತಮ್ಮ ರಾಜ್‍ಕುಮಾರ್ ಅವರು ಕನ್ನಡ ಸಾಹಿತ್ಯ ಪರಿಷತ್‍ಗೆ ನೀಡಿದ್ದರು. ಪರಿಷತ್‍ನ ಅಭಿವೃದ್ಧಿಗೆ ಹೆಚ್ಚುವರಿ ಹಣ ಬೇಕೆಂದಾಗ 4 ಲಕ್ಷ ರೂ.ಗಳನ್ನು ನೀಡಿದ್ದರು ಎಂದು ಸ್ಮರಿಸಿದರು.

ಪಾರ್ವತಮ್ಮ ರಾಜ್‍ಕುಮಾರ್ ಅವರು ಮೈಸೂರಿನಲ್ಲಿ ಮಹಿಳೆ ಮತ್ತು ಮಕ್ಕಳಿಗೆ ಶಕ್ತಿಧಾಮ ಎಂಬ ಆಶ್ರಮವನ್ನು ಕಟ್ಟಿಸಿದ್ದು , ಬಿಡದಿ ಬಳಿ ಐ ಬ್ಯಾಂಕ್ ಕೂಡ ಸ್ಥಾಪಿಸಿದ್ದಾರೆ ಎಂದರು. ರಾಜ್‍ಕುಮಾರ್ ಅವರು ಪ್ರಚಾರ ಮಾಡದೆ ಹಲವು ಸೇವೆಗಳನ್ನು ಮಾಡಿದ್ದು ನಮ್ಮಂತವರಿಂದ ಆ ಸೇವೆಗಳು ಬೆಳಕಿಗೆ ಬರುತ್ತಿವೆ ಎಂದು ತಿಳಿಸಿದರು.   ಜಿಎಸ್‍ಟಿ ಕಾಯ್ದೆ ಜಾರಿಗೆ ಬಂದರೆ ಅದರಿಂದ ಕನ್ನಡ ಚಿತ್ರೋದ್ಯಮಕ್ಕೆ ದೊಡ್ಡ ಹೊಡೆತ ಬೀಳಲಿದ್ದು , ಇದನ್ನು ವಿರೋಧಿಸಿ ಪಾರ್ವತಮ್ಮ ರಾಜ್‍ಕುಮಾರ್ ಅವರ ಭಾವಚಿತ್ರವನ್ನಿಟ್ಟುಕೊಂಡು ಹೋರಾಟ ಮಾಡೋಣ ಎಂದು ಕರೆ ನೀಡಿದರು.

ಕನ್ನಡ ಚಿತ್ರರಂಗದಲ್ಲಿ 80ಕ್ಕೂ ಹೆಚ್ಚು ಸದಭಿರುಚಿಯ ಚಿತ್ರಗಳು ನಿರ್ಮಾಣ ಮಾಡಿದ ಕೀರ್ತಿ ಪಾರ್ವತಮ್ಮ ರಾಜ್‍ಕುಮಾರ್ ಅವರಿಗೆ ಸಲ್ಲುತ್ತದೆ ಎಂದರು.
ಟಿ.ಎನ್.ಸೀತಾರಾಂ ಮಾತನಾಡಿ, ರಾಜ್‍ಕುಮಾರ್ ಅವರು ಕನ್ನಡದ ಅದ್ವಿತೀಯ ಶಕ್ತಿಯಾಗಿ ಬೆಳೆಯಲು ಪಾರ್ವತಮ್ಮ ಬಿಟ್ಟುಕೊಟ್ಟವರು. ಅವರ ಮಕ್ಕಳನ್ನೂ ಕೂಡ ಹಾಗೇ ಬೆಳೆಸಿದರು ಎಂದರು.   ನಮ್ಮಲ್ಲಿ ಉತ್ತಮ ಕಾದಂಬರಿಗಳಿವೆ. ಅವುಗಳನ್ನು ಆಧರಿಸಿ ಉತ್ತಮ ಚಿತ್ರ ಮಾಡುವಲ್ಲಿ ಅವರಿಬ್ಬರ ಪಾತ್ರ ಬಹಳಷ್ಟಿತ್ತು. ಹಾಗೆಯೇ ಬೆಳೆಯಲಿ ಎಂದು ಆಶಿಸಿದರು.ಕನ್ನಡ ನಾಡಿನ ಸೌಜನ್ಯ ಎಂದರೆ ರಾಜ್‍ಕುಮಾರ್ ಅವರಲ್ಲಿ ಕಾಣುತ್ತೇವೆ. ಅವರನ್ನು ರಾಜಕೀಯ ವ್ಯವಹಾರಕ್ಕೆ ಬಳಸದೆ ಕನ್ನಡದ ಸಂಸ್ಕøತಿಯನ್ನು ಬೆಳೆಸಿದರು. ರಾಜ್ ಸಿನಿಮಾದಲ್ಲಿ ಎಲ್ಲೂ ಸಭ್ಯತೆ ಎಲ್ಲೆ ಮೀರಿರಲಿಲ್ಲ ಎಂದರು. ಪಾರ್ವತಮ್ಮ ಅವರ ಅನುಪಸ್ಥಿತಿಯಲ್ಲಿ ಗಿಮಿಕ್ ನಿರ್ಮಾಪಕ ಕೈ ಮೇಲಾಗುವ ಸಾಧ್ಯತೆ ಇದೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ. ರಾಜ್ ಅವರ ಸಂಸ್ಕøತಿಯನ್ನು ಮಕ್ಕಳು ಬೆಳೆಸಲಿ. ಕಾದಂಬರಿ ಆಧಾರಿತ ಸಿನಿಮಾಗಳನ್ನು ಹೆಚ್ಚಾಗಿ ತನ್ನಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪುತ್ರರಾದ ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್, ಕನ್ನಡ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರರ್ ಎಚ್.ಬಿ.ದಿನೇಶ್, ಹಿರಿಯ ನಟರಾದ ಶ್ರೀನಾಥ್ ಹಾಗೂ ರಾಜ್‍ಕುಮಾರ್ ಅವರ ತಂಗಿ ನಾಗಮ್ಮ ಸೇರಿದಂತೆ ಕುಟುಂಬ ವರ್ಗದವರು ಹಾಗೂ ಚಿತ್ರರಂಗದ ಗಣ್ಯರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin