‘ಜಿಂದಾ’ ತೆರೆಗೆ

ಈ ಸುದ್ದಿಯನ್ನು ಶೇರ್ ಮಾಡಿ

Jinda-Movie

ನೈಜ ಘಟನೆಯ ಸುತ್ತ ಹೆಣೆದಿರುವ ಮತ್ತೊಂದು ವಿಭಿನ್ನ ಪ್ರಯತ್ನದ ಚಿತ್ರ ತೆರೆ ಮೇಲೆ ಬರಲು ಸನ್ನದ್ಧವಾಗಿದೆ. ಮುಸ್ಸಂಜೆ ಮಹೇಶ್ ನಿರ್ದೇಶನ ಜಿಂದಾ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದ್ದು,ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಯ ಮೇಲೆ ಅಬ್ಬರಿಸಲಿದೆ. ಒಬ್ಬ ಹುಡುಗಿ ಮತ್ತು ಆರು ಜನ ಹುಡುಗರ ನಡುವೆ ನಡೆಯುವಂಥ ಕಥೆಯೇ ಈ ಚಿತ್ರದ ಪ್ರಮುಖ ಕಥಾವಸ್ತು. ಮೂರು ದಶಕಗಳ ಹಿಂದೆ ನಡೆದಿದ್ದ ಈ ಘಟನೆಯನ್ನು ಈಗಿನ ಕಾಲಮಾನಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಚಿತ್ರಕಥೆಯನ್ನು ಮಾಡಲಾಗಿದೆ. ಲೂಸ್‍ಗಳು ಚಿತ್ರದ ನಿರ್ದೇಶಕ ಅರುಣ್, ಮಂಡ್ಯಸ್ಟಾರ್ ನಾಯಕ ಲೋಕಿ, ಸಹನಿರ್ದೇಶಕ ಕೃಷ್ಣ, ಅಸ್ತಿತ್ವ ನಾಯಕ ಯುವರಾಜ್, ಮತ್ತೊಬ್ಬ ನಟ ಅನಿರುದ್ಧ್ ಚಿತ್ರದ ಆರು ಜನ ಯುವಕರಾಗಿ ಅಭಿನಯಿಸುತ್ತಿದ್ದಾರೆ. ನಾಗೇಶ್ ಆಚಾರ್ಯ ಈ ಚಿತ್ರದ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮೆಲೋಡಿ ಗೀತೆಗಳಿಗೆ ಹೆಸರಾದ ಶ್ರೀಧರ್ ವಿ. ಸಂಭ್ರಮ್ ಈ ಚಿತ್ರದ 4 ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.


ಆರು ಜನ ಪೊರ್ಕಿ, ಪೋಲಿ, ಪೋಕರಿಗಳ ಮಧ್ಯೆ ಒಂದು ಸುಂದರ ಪ್ರೇಮ, ಈ ಪ್ರೇಮದ ಜೊತೆ ಪೋಷಕರು, ಇವರ ನಡುವೆ ಒಂದು ಪೊಲೀಸ್ ಪಾತ್ರ. ಇವಿಷ್ಟು ಜಿಂದಾ ಚಿತ್ರದ ಆಧಾರ ಸ್ತಂಭಗಳಾಗಿವೆ. ಇಲ್ಲಿ ಪೊಲೀಸ್ ಪಾತ್ರವನ್ನು ಹಿರಿಯ ನಟ ದೇವರಾಜ್ ನಿರ್ವಹಿಸಿದ್ದಾರೆ. ಹಿರಿಯ ನಟ ದೇವರಾಜ್ ಚಿತ್ರದಲ್ಲಿ ಮಾನವೀಯತೆಯ ಪೊಲೀಸ್ ಹೊರಹೊಮ್ಮಿದ್ದಾರೆ. ಇದೊಂದು ನೈಜ ಕಥೆಯಾಗಿದ್ದು, ಈ ಕಥೆಗೆ ಮುಖ್ಯ ಕಾರಣವಾಗಿದ್ದು ಒಬ್ಬ ಹೆಣ್ಣು. ಆ ಸಂದರ್ಭದಲ್ಲಿ ಏನೇನೆಲ್ಲ ಅಲ್ಲೋಲ-ಕಲ್ಲೋಲ ನಡೆಯಿತು. ಅದಕ್ಕೆಲ್ಲ ಒಬ್ಬ ಹೆಣ್ಣು ಹೇಗೆ ಕಾರಣಳಾದಳು ಎಂಬುದನ್ನು ಈ ಚಿತ್ರದಲ್ಲಿ ನಿರ್ದೇಶಕ ಮುಸ್ಸಂಜೆ ಮಹೇಶ್ ಅವರು ತೋರಿಸಿದ್ದಾರೆ. ಇಂತಹ ವಿಭಿನ್ನ ಪಾತ್ರ ಮಾಡಿರುವ ನಟಿ ಮತ್ತಾರೂ ಅಲ್ಲ ಮೇಘನಾ ರಾಜ್. ಇದೊಂದು ಚಾಲೆಂಜಿಂಗ್ ಪಾತ್ರವಾಗಿದ್ದು, ನಾಯಕಿಯ ಪಾತ್ರ ಏನೆಲ್ಲ ಬದಲಾವಣೆಗೆ ಸಾಕ್ಷಿಯಾಗಲಿದೆ ಎಂಬುದನ್ನು ಈ ಚಿತ್ರದಲ್ಲಿ ಹೆಣೆಯಲಾಗಿದೆಯಂತೆ.ನಿರ್ಮಾಪಕರಾದ ದತ್ತಾತ್ರೇಯ ಬಚ್ಚೇಗೌಡ ಅವರ ಬ್ಯಾನರ್‍ನಿಂದ ಹೊರಬರುತ್ತಿರುವ ಮೂರನೇ ಚಿತ್ರ ಇದಾಗಿದೆ. ಬೆಂಗಳೂರು ನಗರ, ಮೈಸೂರು, ಶ್ರೀರಂಗಪಟ್ಟಣ ಹಾಗೂ ಮಲೈ ಮಾದೇಶ್ವರ ಸ್ವಾಮಿ ಬೆಟ್ಟ ಸೇರಿದಂತೆ ಹಲವಾರು ಲೊಕೇಷನ್‍ಗಳಲ್ಲಿ ಹಾಗೂ ಈ ಕಥೆ ನಡೆದಂಥ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಪ್ರಮುಖ ಪೊಷಕ ಪಾತ್ರಗಳಲ್ಲಿ ಹಿರಿಯ ಕಲಾವಿದ ಶ್ರೀನಿವಾಸಮೂರ್ತಿ, ವಿಜಯಕಾಶಿ, ರಾಜು ತಾಳಿಕೋಟೆ ಮುಂತಾದವರು ಅಭಿನಯಿಸಿದ್ದಾರೆ. ಹಿರಿಯ ಕಲಾವಿದೆಯರಾದ ಆಶಾಲತಾ, ಬಿ.ವಿ. ರಾಧಾ, ಪದ್ಮಾ ವಾಸಂತಿ, ಪುಷ್ಪಸ್ವಾಮಿ ಮತ್ತು ಪ್ರಮಿಳಾ ಜೋಷಾಯ್ ಇವರೆಲ್ಲ ಒಟ್ಟಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಈ ಜಿಂದಾ ಚಿತ್ರದಲ್ಲಿ ಹಿರಿಯ ಹಾಗೂ ಕಿರಿಯ ಕಲಾವಿದರ ದಂಡೇ ಅಭಿನಯಿಸಿದೆ. ಎಲ್ಲವೂ ಅಂದುಕೊಂಡಂತೆ ಅದ್ಧೂರಿ ಪ್ರಚಾರದೊಂದಿಗೆ ಜಿಂದಾ ಚಿತ್ರ ತೆರೆ ಮೇಲೆ ಮಿಂಚಲು ಸಿದ್ಧವಾಗಿದ್ದು, ಇನ್ನು ಸಿನಿ ಪ್ರಿಯರು ಜಿಂದಾವನ್ನು ವೀಕ್ಷಿಸಬೇಕಷ್ಟೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin