ಸದನದಲ್ಲಿ ಸಿದ್ದರಾಮಯ್ಯ-ಶಾಸಕರ ‘ಸಂಧಿ’ ಹಾಸ್ಯ ಪ್ರಸಂಗ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-Session--01

ಬೆಂಗಳೂರು,ಜೂ.9- ನಿಮಗೆ ಸಂಧಿ ಗೊತ್ತೇನ್ರಿ ಏನೂ ಗೊತ್ತಿಲ್ಲ . ಇಲ್ಲಿ ಬಂದು ಮಾತನಾಡ್ತೀರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಪಕ್ಷಗಳನ್ನು ಛೇಡಿಸಿದ್ದರಿಂದ ವಿಧಾನಸಭೆಯಲ್ಲಿ ಕೆಲಕಾಲ ಸ್ವಾರಸ್ಯಕರ ಚರ್ಚೆ ನಡೆಯಿತು. ನೀವು ಎಲ್ಲಾ ಸಂದಿಗಳನ್ನು ನುಗ್ಗಿ ಸಿಎಂ ಆಗಿದ್ದೀರ ಎಂದು ರೈತ ಸಂಘದ ಪುಟ್ಟಣ್ಣಯ್ಯ, ಸಿದ್ದರಾಮಯ್ಯನವರ ಕಾಲೆಳೆದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.  ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಹೆಬ್ಬಾಳ ಕ್ಷೇತ್ರದ  ಶಾಸಕ ವೈ.ಎ.ನಾರಾಯಣಸ್ವಾಮಿ, ಸರ್ಕಾರಿ ಶಾಲೆಗಳಿಗಾಗಿ ಒಂದು ಲಕ್ಷ ಕೋಟಿ ಹಣ ಖರ್ಚು ಮಾಡುತ್ತಿದ್ದೇವೆ. ಆದರೆ ಮಕ್ಕಳು ಬರುತ್ತಿಲ್ಲ. ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಶಾಸಕರ ಗೈರು ಹಾಜರಿ ಬಗ್ಗೆ ಪ್ರತಿ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಏರು ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡರು.ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ್ ಅವರು ಮುಖ್ಯಮಂತ್ರಿ ಅವರನ್ನು ಸದನಕ್ಕೆ ಕರೆತಂದರು.   ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಿದ್ದಂತೆ ನಾರಾಯಣಸ್ವಾಮಿ ಅವರು ಸರ್ಕಾರಿ ಶಾಲೆಗಳ ಬಗ್ಗೆ ಮಾತನಾಡುತ್ತಿದ್ದುದನ್ನು ಕಂಡು ನಿಮ್ಮ ಮಕ್ಕಳನ್ನು ಎಲ್ಲಿ ಓದಿಸುತ್ತಿದ್ದೀರಿ, ನಿಮಗೆ ಮಕ್ಕಳಿದ್ದಾರೆಯೇ? ಯಾವ ಸರ್ಕಾರಿ ಶಾಲೆಯಲ್ಲಿ ಓದಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು.  ಇದರಿಂದ ನಾರಾಯಣಸ್ವಾಮಿ ತಬ್ಬಿಬ್ಬಾದರು. ಇಲ್ಲಿ ನಮ್ಮ ನಿಮ್ಮ ಪ್ರಶ್ನೆಯಲ್ಲ. ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.  ಮೊದಲು ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ಇತರರಿಗೆ ಮಾದರಿಯಾಗಿ. ನಮ್ಮ ಮಕ್ಕಳು ಇಂಗ್ಲೀಷ್ ಕಲಿಯಲಿ ಇತರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಲಿ ಎಂಬ ಧೋರಣೆ ಬೇಡ. ನಾವು ಸರ್ಕಾರಿ ಶಾಲೆಗಳಿಗೆ ವಾರ್ಷಿಕ 18 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ಇನ್ನೂ ಮಕ್ಕಳು ಓದುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಬಿಜೆಪಿ ಶಾಸಕ ಅಶ್ವಥ್ ನಾರಾಯಣ, ಜೀವರಾಜ್ , ಸುರೇಶ್ ಗೌಡರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಛೇಡಿಸಿದರು.   ರಾಜ್ಯದಲ್ಲಿ ಏಕರೂಪ ಶಿಕ್ಷಣ ನೀತಿ ತನ್ನಿ, ಇಲ್ಲ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಕಲಿಸಿ ಅಥವಾ ಖಾಸಗಿ ಶಾಲೆಯಲ್ಲಿ ಕನ್ನಡ ಕಲಿಸಿರಿ ಎಂದು ಜೀವರಾಜ್ ಅವರು ಸಲಹೆ ನೀಡಿದರು.
ಸರ್ಕಾರಿ ಶಾಲೆಯಲ್ಲಿ ಓದಿದವರು ಯಾರು ಎಂದಾಗ ಬಹುತೇಕ ಶಾಸಕರು ಕೈ ಎತ್ತಿದಾಗ, ಅಲ್ಲಿ ಓದಿದ್ದರಿಂದಲೇ ನಾವು ಇಲ್ಲಿಗೆ ಬಂದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಈಗ ಎಲ್ಲರಿಗೂ ಇಂಗ್ಲೀಷ್ ಕಲಿಸಿ ಅಂತಾರೆ ಈಗಾಗಲೆ ಕನ್ನಡ ಮರೆತು ಹೋಗುತ್ತಿದ್ದಾರೆ. ಈಗಿನವರಿಗೆ ಸಂಧಿ, ಸಮಾಸ ಏನೂ ಗೊತ್ತಿಲ್ಲ. ವ್ಯಂಜನ, ಕನ್ನಡ ಸಂಧಿಗಳು ಎಂಬ ಎರಡು ಬಗೆಯಿದೆ. ನಿಮಗೆ ಈ ಬಗ್ಗೆ ಗೊತ್ತೆ ಎಂದು ಮುಖ್ಯಮಂತ್ರಿ ಅವರು ಅಶ್ವಥ್ ನಾರಾಯಣರನ್ನು ಪ್ರಶ್ನಿಸಿದರು.  ನೀವು ಎಂಬಿಬಿಎಸ್ ಓದಿದ್ದೀರ ಕನ್ನಡ ಸಂಧಿ ಬಗ್ಗೆ ನಿಮಗೆ ಗೊತ್ತಿಲ್ಲ ಬಿಡಿ ಎಂದು ಕಾಲೆಳೆದರು.   ಬಾಲ್ಯದ ಘಟನೆ ನೆನಪಿಸಿಕೊಂಡ ಸಿದ್ದರಾಮಯ್ಯನವರು, ನಾನು ಓದುವಾಗ 5ನೇ ತರಗತಿಯಲ್ಲಿ ಶಿಕ್ಷಕರು ಮೌಖಿಕ ಪರೀಕ್ಷೆ ಮಾಡುತ್ತಿದ್ದರು. ಪುಟ್ಟಪ್ಪ ಎಂಬ ವಿದ್ಯಾರ್ಥಿಗೆ ಸಂಧಿ ಎಂದರೆ ಏನೆಂದು ಕೇಳಿದಾಗ ನಮ್ಮ ಮನೆ ಮತ್ತು ನಮ್ಮ ದೊಡ್ಡಪ್ಪನ ಮನೆಯ ನಡುವಿನ ಓಣಿಯೇ ಸಂಧಿ ಎಂದು ಉತ್ತರ ಕೊಟ್ಟಿದ್ದ ಎಂದರು.

ಇನ್ನು ಒಂದು ವರ್ಷ 5ನೇ ತರಗತಿಯಲ್ಲೇ ಓದು ಎಂದು ಪುಟ್ಟಪ್ಪನನ್ನು ಫೇಲ್ ಮಾಡಿದರು ಎಂದು ಸಿಎಂ ಹೇಳಿದಾಗ ಸದನ ನಗೆಗಡಲಲ್ಲಿ ತೇಲಿತು.
ಅಕ್ಷರಗಳು ಎಡಬಿಡದೆ ಸೇರುವುದೇ ಸಂಧಿ ಎಂದು ಮುಖ್ಯಮಂತ್ರಿ ವಿವರಣೆ ನೀಡಿದರಲ್ಲದೆ ಸಂಧಿಯಲ್ಲಿ ಎಷ್ಟು ವಿಧವಿದೆ ಎಂದು ಬಿಜೆಪಿಯ ಎ.ನಾರಾಯಣಸ್ವಾಮಿಯವರನ್ನು ಪ್ರಶ್ನಿಸಿದಾಗ ಗುಣಸಂಧಿ, ಸವರ್ಣಧೀರ್ಘ ಸಂಧಿ ಎಂದು ತಮಗೆ ತಿಳಿದದ್ದನ್ನು ಹೇಳಿದರು.  ಅದನ್ನು ತಿದ್ದಿದ ಮುಖ್ಯಮಂತ್ರಿ ಸಂಧಿಗಳಲ್ಲಿ ಮೂರು ವಿಧ. ಆಗಮ, ಲೋಪ, ಆದೇಶ ಸಂಧಿ, ವ್ಯಂಜ್ಯನ ಸಂಧಿಗಳಲ್ಲಿ ಎಷ್ಟು ವಿಧ ಹೇಳಿ ಎಂದು ಮತ್ತೆ ಬಿಜೆಪಿಯವರನ್ನು ಕೆಣಕಿದರು.

ಅದನ್ನು ಇಂತಹ ಪರಿಸ್ಥಿತಿ ಬಂದಿರುವುದು ಎಂದು ಮುಖ್ಯಮಂತ್ರಿ ವಿಷಾದಿಸಿದರು.   ನಾವು ಓದುವಾಗ ಮೇಸ್ಟ್ರು ಹೊಡೆದು ಪಾಠ ಕಲಿಸುತ್ತಿದ್ದರು. 1956-57ರಲ್ಲಿ ಕಲಿತದ್ದು ನನಗೆ ಈಗಲೂ ನೆನಪಿದೆ ಎಂದು ಸಿದ್ದರಾಮಯ್ಯ ಹೇಳಿದಾಗ ಪುಟ್ಟಣ್ಣಯ್ಯನವರು ನೀವು ಎಲ್ಲಾ ಸಂಧಿಗಳನ್ನು ನುಗ್ಗಿದ್ದರಿಂದಲೇ ಸಿಎಂ ಆಗಿದ್ದೀರ ಎಂದು ಛೇಡಿಸಿದರು.  ಪುಟ್ಟಣಾ ನೀನೂ ಸಂಧಿಗಳನ್ನು ಹುಡುಕು. ಮುಖ್ಯಮಂತ್ರಿ ಆಗು ಎಂದು ಸಿದ್ದು ಸಲಹೆ ನೀಡಿದರು. ಅಯ್ಯೋ ಇಲ್ಲಾ ಸ್ವಾಮಿ ನಾವು ರೈತರ  ಸಂಧಿಯಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಆರೋಗ್ಯ ಸಚಿವ ರಮೇಶ್‍ಕುಮಾರ್, ನೀವು ಮಾತನಾಡುವ ಭಾಷೆ ಸರಿಯಾಗಿಲ್ಲ. ಆವೇಶದಲ್ಲಿ ಬಳಸುವ ಮಾತುಗಳೆ ಕನ್ನಡದ ಎಂದು ಹೇಳಿದರು. ನಂತರ ಸಂಧಿ ಕುರಿತ ಸ್ವಾರಸ್ಯಕರ ಚರ್ಚೆಗೆ ತೆರೆ ಎಳೆದರು.   ಸಭಾಧ್ಯಕ್ಷ ಸ್ಥಾನದಲ್ಲಿದ್ದ ಶಿವಶಂಕರ್ ರೆಡ್ಡಿ ಅವರು ಬೇಡಿಕೆಗಳ ಮೇಲಿನ ಗಂಭೀರ ಚರ್ಚೆಗೆ ಅನುವು ಮಾಡಿಕೊಟ್ಟರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin