ಮಳೆ ನಂಬದೇ ರೈತರು ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು : ಗೌಡರ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

Devegowda--001

ಚಿಕ್ಕಮಗಳೂರು, ಜೂ.10– ಮಳೆಯನ್ನೇ ನಂಬಿ ಬದುಕುವ ಬದಲು ಗ್ರಾಮೀಣ ಜನರು ಬೇರೆ ಉದ್ಯೋಗ, ಕುಲಕಸುಬು ರೂಢಿಸಿಕೊಳ್ಳಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಸಲಹೆ ನೀಡಿದರು.  ಬಿರೂರು ಶಾಖೆಯ ಡಿಸಿಸಿ ಬ್ಯಾಂಕ್‍ನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ರೈತರಿಗೂ ಬೆಳೆ ನಷ್ಟವಾದಾಗ ವಿಮೆ ಕಟ್ಟಿರಲಿ ಅಥವಾ ಕಟ್ಟದಿರಲಿ ಪರಿಹಾರ ಸಿಗಬೇಕು ಎಂಬ ಆಶಯವಿದೆ. ಕೃಷಿ ನಮ್ಮ ದೇಶದ ಮುಖ್ಯ ಕಸುಬು ಯಾವುದೇ ದೇಶ ಅಥವಾ ರಾಜ್ಯ ರೈತನನ್ನು ಕಡೆಗಣಿಸಿದರೆ ಸರ್ವನಾಶವಾಗುವುದು ಖಂಡಿತ ಎಂದು ಅಭಿಪ್ರಾಯಪಟ್ಟರು.ಅಧಿಕಾರಕ್ಕೆ ಬಂದ ಯಾವುದೇ ಪಕ್ಷ ಕೆಲಸ ಮಾಡುತ್ತದೆ. ಆದರೆ ಸಮಾಜದ ಕಟ್ಟಕಡೆಯ ವರ್ಗಕ್ಕೂ ಅಭಿವೃದ್ಧಿ ಯೋಜನೆಗಳನ್ನು ತಲುಪಿಸಲು ವಿಫಲವಾಗಿದೆ ಎಂದರು.  ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಸಾಲಮನ್ನಾಕ್ಕಾಗಿ ಹೋರಾಟ ನಡೆಯುತ್ತಿವೆ. ನಮ್ಮ ರಾಜ್ಯದಲ್ಲಿ ಮಂಡ್ಯ, ಹಾಸನ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಅನೇಕ ಭಾಗಗಳಲ್ಲಿ ಅಡುಗೆ ಇನ್ನಿತರ ಬೆಳೆಗಳು ಒಣಗಿವೆ. ಆದರೆ ಸರ್ಕಾರಕ್ಕೆ ಬೆಳೆ ಪರಿಹಾರ ನೀಡಲು ಮನಸ್ಸಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಫಸಲು ಭೀಮ ಯೋಜನೆ ಕುರಿತು ಸಿರಿಗೆರೆ ಸ್ವಾಮೀಜಿಗಳ ನೇತೃತ್ವದಲ್ಲಿ ಚರ್ಚೆ ನಡೆಸಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೇವೆ. ಉತ್ತರಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದರು.   ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಸಿ.ಧರ್ಮೇಗೌಡ, ಬ್ಯಾಂಕ್‍ನ ಪ್ರಗತಿಯ ಬಗ್ಗೆ ವಿವರ ನೀಡಿದರು. ಕೇಂದ್ರ ಸರ್ಕಾರ ಶೂನ್ಯ ಬಡ್ಡಿಯಲ್ಲಿ ಸಾಲ ವಿತರಿಸುತ್ತಿದೆ ಎಂದು ಹೇಳುತ್ತದೆ. ಆದರೆ ವಿಮೆಯನ್ನು ಕಡ್ಡಾಯಗೊಳಿಸಿ ರೈತರನ್ನು ಶೋಷಣೆ ಮಾಡುತ್ತಿವೆ. ವಿಮೆ ಪಾವತಿಸುವುದರಿಂದ ರೈತರಿಗೆ ಶೇ. 5ರಷ್ಟು ಬಡ್ಡಿ ಹೊರೆಯಾಗಲಿದೆ ಎಂದರು.ಕಳೆದ ವರ್ಷ 5 ಸಾವಿರ ಜನ ವಿಮೆ ಕಟ್ಟಿದ್ದರು. ಕಡೂರು ತಾಲ್ಲೂಕು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆಯಾಗಿತ್ತು. ಆದರೆ ವಿಮೆ ಹಣ ಬಂದಿಲ್ಲ. ಇದರಿಂದ ವಿಮಾ ಕಂಪನಿಗಳಿಗೆ ಲಾಭವಾಗಿದೆ. ರೈತರಿಗೆ ಅನ್ಯಾಯವಾಗಿದೆ ಎಂದರು.   ಡಿಸಿಸಿ ಬ್ಯಾಂಕ್‍ನ ನಿರ್ದೇಶಕ ಭೋಜೇಗೌಡ ಮಾತನಾಡಿ, ಡಿಸಿಸಿ ಬ್ಯಾಂಕ್ 550 ಕೋಟಿ ರೂ. ಸಾಲ ವಿತರಣೆ ಮಾಡಿದ್ದು, ಶೇ.98ರಷ್ಟು ಸಾಲ ವಸೂಲಾತಿಯಾಗಿದೆ. ಚಿಕ್ಕಮಗಳೂರಿನಲ್ಲಿ 10 ಕೋಟಿ ವೆಚ್ಚದಲ್ಲಿ ತರಬೇತಿ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಕಡೂರು ಶಾಸಕ ವೈಎಸ್‍ವಿ ದತ್ತ ಮಾತನಾಡಿ, ಕಡೂರು ತಾಲ್ಲೂಕನ್ನು ಶಾಶ್ವತ ನೀರಾವರಿಗೆ ಒಳಪಡಿಸಲು ಭದ್ರ ಮೇಲ್ದಂಡೆ ಯೋಜನೆಯಡಿ 1200 ಕೋಟಿ ಕಾಮಗಾರಿಗೆ ಯೋಜನೆ ವರದಿ ಕಳುಹಿಸಿದ್ದು, ಅನುಮೋದನೆ ದೊರೆತರೆ 556 ಕೋಟಿ ರೂ. ವೆಚ್ಚದ ನೀರಾವರಿ ಯೋಜನೆಗೆ ಚಾಲನೆ ಸಿಗಲಿದ್ದು, ಸ್ವಲ್ಪ ತಡವಾದರೂ ತಾಲ್ಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಯಲಿದೆ ಎಂದು ತಿಳಿಸಿದರು.   ಬಿರೂರು ಪುರಸಭಾ ಅಧ್ಯಕ್ಷೆ ಸವಿತಾ ರಮೇಶ್, ಮುಖಂಡರಾದ ಸಿಒ ಸತ್ಯನ್, ಮಂಜುನಾಥ್, ಕಾಂತರಾಜು, ಸಿಇಒ ಲಿಂಗಯ್ಯ, ಶಾಖಾ ವ್ಯವಸ್ಥಾಪಕ ಬಿಜ್ರೇಶ್ ಮೊದಲಾದವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin