ಎಂ.ಬಿ.ಪಾಟೀಲರು ಮಾಡಿದ ಪರ್ಜನ್ಯ ಪೂಜೆಯಿಂದಲೇ ರಾಜ್ಯದಲ್ಲಿ ಮಳೆಯಾಗುತ್ತಿದೆಯಂತೆ..!

ಈ ಸುದ್ದಿಯನ್ನು ಶೇರ್ ಮಾಡಿ

MB-Patilk--01

ಬೆಂಗಳೂರು, ಜೂ.12- ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರು ಕಾವೇರಿ-ಕೃಷ್ಣಾ ನದಿಗಳಿಗೆ ಸಲ್ಲಿಸಿದ ಪೂಜೆಯ ಫಲವಾಗಿ ರಾಜ್ಯದಲ್ಲಿ ಮಳೆ ಆರಂಭವಾಗಿದೆ ಎಂದು ಕಾಂಗ್ರೆಸ್ ಸದಸ್ಯ ಪ್ರಸನ್ನಕುಮಾರ್ ಪ್ರಸ್ತಾಪಿಸಿದ್ದು ವಿಧಾನಸಭೆಯಲ್ಲಿಂದು ಸ್ವಾರಸ್ಯಕರ ಚರ್ಚೆ ನಡೆಯಿತು.  ಪ್ರಶ್ನೋತ್ತರ ಕಲಾಪ ನಡೆಯುತ್ತಿದ್ದ ವೇಳೆಯಲ್ಲಿ ಇದ್ದಕ್ಕಿದ್ದಂತೆ ಎದ್ದು ನಿಂತ ಕಾಂಗ್ರೆಸ್ ಸದಸ್ಯ ಪ್ರಸನ್ನಕುಮಾರ್, ಸಭಾಧ್ಯಕ್ಷರೇ ಈ ಸಂದರ್ಭದಲ್ಲಿ ಒಂದು ವಿಷಯಕ್ಕಾಗಿ ನಾನು ಜಲಸಂಪನ್ಮೂಲ ಸಚಿವರನ್ನು ಅಭಿನಂದಿಸಲು ಬಯಸುತ್ತೇನೆ ಎಂದರು.

ಅವರು ಮಳೆಗಾಗಿ ಸಲ್ಲಿಸಿದ ಪೂಜೆ ಫಲಪ್ರದವಾಗಿದೆ. ರಾಜ್ಯದಾದ್ಯಂತ  ಮಳೆ ಆರಂಭವಾಗಿದೆ.ಇದಕ್ಕಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಸನ್ನಕುಮಾರ್ ಹೇಳಿದರು.  ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು, ನಿಮ್ಮಲ್ಲಿ ಇಂತಹ ತಪಃಶಕ್ತಿಯಿದ್ದರೆ ಮುಂಚೆಯೇ ಪೂಜೆ ಮಾಡಬೇಕಿತ್ತು. ಅದನ್ನು ಮಾಡದೆ ವಿನಾ ಕಾರಣ ರಾಜ್ಯವನ್ನು ಎರಡು ವರ್ಷಗಳಿಂದ ಬರಗಾಲಕ್ಕೆ ನೂಕಿದಿರಿ ಎಂದು ಕುಟುಕಿದರು. ನಿಮ್ಮ ಪೂಜೆಗೆ ಅಷ್ಟು ಶಕ್ತಿ ಇದ್ದರೂ ನೀವು ಎರಡು ವರ್ಷಗಳ ಕಾಲ ಕಾದಿದ್ದು ಸರಿಯಾಗಲಿಲ್ಲ ಎಂದಾಗ ಮೇಲೆದ್ದು ನಿಂತ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ನಾವು ಕಾವೇರಿ ನದಿಗೆ ಭಾಗಮಂಡಲದಲ್ಲಿ ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಆದಿಚುಂಚನಗಿರಿಯ ಶ್ರೀಗಳು ಇದ್ದರು. ಪೂಜೆ ಸಲ್ಲಿಸಿ ವಾಪಸ್ಸು ಬಂದ ಕೂಡಲೇ ಮಳೆ ಶುರುವಾಯಿತು. ಆದರೆ ಬಿಜೆಪಿ ಸದಸ್ಯರು ವಿನಾಕಾರಣ ಸುಳ್ಳು ಹೇಳಿದರು ಎಂದು ಆಕ್ಷೇಪಿಸಿದರು.

ಮಳೆ ಬಂದಿದೆ. ಆದರೆ ನಾವು ಸಲ್ಲಿಸಿದ ಪೂಜೆಗಾಗಿಯೇ ಅದು ಬಂತು ಎಂದು ನಾನು ಹೇಳುವುದಿಲ್ಲ. ಮಳೆ ಬರಬೇಕಿತ್ತು. ನಮ್ಮ ಪೂಜೆಯೂ ಅದಕ್ಕಾಗಿ ಸಲ್ಲಿಕೆಯಾಗಿದೆ ಎಂದು ಅವರು ಹೇಳಿದರು.  ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಇನ್ನು ಮುಂದೆ ಮಳೆಯ ವಿಷಯದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರೇ ಬ್ರ್ಯಾಂಡ್ ಅಂಬಾಸಡರ್ ಇದ್ದಂತೆ. ಪೂಜೆ, ಪುನಸ್ಕಾರ, ಹೋಮ, ಹವನಗಳ ಮೂಲಕ ಅವರು ಮಳೆ ತರಿಸಲಿ ಎಂದರು.

ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ,ಊರಿನಲ್ಲಿ ಒಬ್ಬ ಮನುಷ್ಯ ಇದ್ದ.ಮಳೆ ತರಿಸುತ್ತೇನೆ ಎಂದು ಪ್ರತಿದಿನ ಅದು ಇದು ಅಂತ ತರಿಸಿ ಆರೆಂಟು ಕೆಜಿ ಆಹಾರ ತಿನ್ನುತ್ತಿದ್ದ. ಆದರೆ ಮಳೆ ಬರಲಿಲ್ಲ.ಅಂದ ಹಾಗೆ ಮಳೆಗಾಲದಲ್ಲಿ ಮಳೆ ಬರುತತಿದೆ.ಅದು ಸಹಜ. ಕೆಲವು ಸಲ ಕೈ ಕೊಟ್ಟಿತು ಎಂಬ ಕಾರಣಕ್ಕಾಗಿ ಸದಾ ಕಾಲ ಹಾಗೇ ಇರುತತಿದೆ ಎಂದಲ್ಲ ಅಂದರು.  ಬಿಜೆಪಿಯ ಕೆ.ಜಿ.ಬೋಪಯ್ಯ ಮಾತನಾಡಿ, ಭಾಗಮಂಡಲದಲ್ಲಿ ಪೂಜೆ ಮಾಡಿ ಬಂದ ನಂತರ ಪೂಜೆ ಬಂತು. ಆನಂತರ ಮಳೆ ಬರಲಿಲ್ಲ. ಹೀಗಾಗಿ ಪೂಜೆಗೂ- ಮಳೆಗೂ ಸಂಬಂಧ ಕಲ್ಪಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin