ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಟ್ಟ ಪೌರಕಾರ್ಮಿಕರು

ಈ ಸುದ್ದಿಯನ್ನು ಶೇರ್ ಮಾಡಿ

BBMP-Worker-Protest

ಬೆಂಗಳೂರು, ಜೂ.13- ಸರ್ಕಾರ ಹಾಗೂ ಬಿಬಿಎಂಪಿ ಬೇಡಿಕೆ ಈಡೇರಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಪ್ರಾರಂಭಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಪೌರ ಕಾರ್ಮಿಕರು ಕೈಬಿಟ್ಟಿದ್ದಾರೆ. ಇದರಿಂದಾಗಿ ಗಬ್ಬು ನಾರುತ್ತಿದ್ದ ಗಾರ್ಡನ್ ಸಿಟಿಗೆ ಕಡೆಗೂ ಮುಕ್ತಿ ದೊರಕುವಂತಾಗಿದೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಿಬಿಎಂಪಿ ಪೌರ ಕಾರ್ಮಿಕರು ಕೆಲವು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದು, ಜಯನಗರ, ಬಸವೇಶ್ವರನಗರ, ರಾಜಾಜಿನಗರ, ಕಮಲಾನಗರ, ಕುರುಬರಹಳ್ಳಿ, ವಿಜಯನಗರ, ಯಶವಂತಪುರ, ಬಸವನಗುಡಿ ಸೇರಿದಂತೆ ನಗರದ ಬಹುತೇಕ ಪ್ರದೇಶಗಳಲ್ಲಿ ರಸ್ತೆಗಳು, ಫುಟ್‍ಪಾತ್‍ನಲ್ಲಿ ಕಸದ ರಾಶಿ ರಾರಾಜಿಸುತ್ತಿದೆ.ಸೋನೆ ಮಳೆ ಬರುತ್ತಿರುವುದರಿಂದ ಕಸದ ರಾಶಿಯಲ್ಲಿ ನೀರು ಸೇರಿ ಗಬ್ಬು ವಾಸನೆ ಬರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿತ್ತು.
ಈವರೆಗೆ ಪೌರ ಕಾರ್ಮಿಕರ ಸಮಸ್ಯೆ ಬಗ್ಗೆ ಗಮನ ಹರಿಸದ ಜನಪ್ರತಿನಿಧಿಗಳು ಇಡೀ ಬೆಂಗಳೂರು ಗಬ್ಬು ನಾರುತ್ತಿದ್ದಂತೆ ಇಂದು ಅವರ ಮನವೊಲಿಸಲು ಮುಂದಾದರು.  ಪೌರ ಕಾರ್ಮಿಕರ ಹೋರಾಟದ ಬಿಸಿ ಸರ್ಕಾರಕ್ಕೂ ತಟ್ಟಿದ್ದು, ಇಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ, ಮೇಯರ್ ಜಿ.ಪದ್ಮಾವತಿ, ಸಚಿವ ಈಶ್ವರ ಖಂಡ್ರೆ ಮತ್ತಿತರರು ಸ್ವಾತಂತ್ರ್ಯ ಉದ್ಯಾನವನಕ್ಕೆ ತೆರಳಿ ಪೌರ ಕಾರ್ಮಿಕರ ಮನವೊಲಸಿಲು ಪ್ರಯತ್ನಿಸಿದರು.

ನಿಮ್ಮ ಎಲ್ಲ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ಪೌರ ಕಾರ್ಮಿಕರ ನೇಮಕಾತಿಗೆ ಮಾರ್ಗಸೂಚಿ ರಚಿಸಲಾಗಿದೆ. ವೇತನ ಹೆಚ್ಚಳ ಮಾಡಿದ್ದು ಕೂಡ ನಮ್ಮ ಸರ್ಕಾರವೇ. ಹಾಗಾಗಿ ಉಳಿದ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸುತ್ತೇವೆ ಎಂದು ಈ ವೇಳೆ ಸಚಿವ ಆಂಜನೇಯ ಪೌರ ಕಾರ್ಮಿಕರಿಗೆ ತಿಳಿಸಿದರು.  ನಮ್ಮ ಸರ್ಕಾರ ಪೌರ ಕಾರ್ಮಿಕರ ಸರ್ಕಾರ. ಇನ್ನು ಮುಂದೆ ನಿಮ್ಮ ವೇತನವನ್ನು ಬ್ಯಾಂಕ್ ಮೂಲಕವೇ ಪಾವತಿಸಲಾಗುತ್ತದೆ. ಆತಂಕ ಪಡಬೇಡಿ. ಗುತ್ತಿಗೆದಾರರ ಕಿರುಕುಳ ಇರುವುದಿಲ್ಲ ಎಂದು ಅಭಯ ನೀಡಿದರು.

ಆರೋಗ್ಯ ವಿಮೆ ಜಾರಿಗೆ ತರಲಾಗಿದೆ. ಶೀಘ್ರವೇ ನಿಮಗೆ ವಸತಿ ಸಮುಚ್ಚಯ ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ. ಹಾಗಾಗಿ ಪ್ರತಿಭಟನೆ ಕೈಬಿಡಿ, ಕರ್ತವ್ಯಕ್ಕೆ ಹಾಜರಾಗಿ ಎಂದು ಪೌರ ಕಾರ್ಮಿಕರಿಗೆ ಆಂಜನೇಯ ಮನವಿ ಮಾಡಿದರು.   ಮೇಯರ್ ಜಿ.ಪದ್ಮಾವತಿ ಮಾತನಾಡಿ, ಈವರೆಗೆ ಪೌರ ಕಾರ್ಮಿಕರಿಗೆ ಗುತ್ತಿಗೆದಾರರ ಮೂಲಕ ವೇತನ ಪಾವತಿಸಲಾಗುತ್ತಿತ್ತು. ಗುತ್ತಿಗೆದಾರರು ಸಮಯಕ್ಕೆ ಸರಿಯಾಗಿ ವೇತನ ಕೊಡದ ಕಾರಣ ನಿಮಗೆ ಸಮಸ್ಯೆಯಾಗಿದೆ. ಗುತ್ತಿಗೆ ಮಾಫಿಯಾ ಮಟ್ಟ ಹಾಕುತ್ತೇವೆ. ಮುಂದಿನ ತಿಂಗಳಿನಿಂದಲೇ ಪಾಲಿಕೆ ವತಿಯಿಂದಲೇ ಆನ್‍ಲೈನ್ ಮೂಲಕ ವೇತನ ಕೊಡಲಾಗುತ್ತದೆ. ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಬನ್ನಿ ಎಂದು ಭರವಸೆ ನೀಡಿದರು.

ಕಡೆಗೆ ಸಚಿವರು, ಮೇಯರ್ ಅವರ ಭರವಸೆ ಮೇರೆಗೆ ಪೌರ ಕಾರ್ಮಿಕರು ತಮ್ಮ ಧರಣಿಯನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಲು ಒಪ್ಪಿದ್ದು, ಗಬ್ಬು ನಾರುತ್ತಿದ್ದ ಬೆಂಗಳೂರಿಗೆ ಮಕ್ತಿ ಸಿಕ್ಕಂತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin